Site icon TUNGATARANGA

Shimoga/ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದಲ್ಲಿ ಕಲಾ ವೈಭವ-2022 ಸಂಭ್ರಮ ನೋಡಿ ಸಂಭ್ರಮಿಸಿ

ಬದುಕಿನ ಅಧ್ಯಾಯಗಳಲ್ಲಿ ಗುರುವಿನ ಪಾತ್ರ ಮಹತ್ವ

ಶಿವಮೊಗ್ಗ : ಬದುಕಿನ ಉನ್ನತಿಕರಣದ ಪ್ರತಿಯೊಂದು ಅಧ್ಯಾಯಗಳಲ್ಲಿ ಗುರುವಿನ ಪಾತ್ರ ಮಹತ್ವದಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.

ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ವತಿಯಿಂದ ಇಂದು ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ‘ಕಲಾ ವೈಭವ – 2022’ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗುರುವನ್ನು ಗೌರವಿಸಲಾರದ ವ್ಯಕ್ತಿ ಬದುಕಿನಲ್ಲಿ ಎಂದಿಗೂ ಉನ್ನತಿ ಹೊಂದಲಾರ. ಅವಮಾನ ಏಳು ಬೀಳುಗಳು ಸಹಜವಾಗಿದ್ದರು, ಅಂತಹ ಉಳಿ ಪೆಟ್ಟುಗಳೇ ಮುಂದೊಂದು ದಿನ ಸಮಾಜದಲ್ಲಿ ಸದಾ ಪೂಜಿಸುವ ಮೂರ್ತಿಯಾಗಿ ನಮ್ಮನ್ನು ರೂಪಿಸುತ್ತದೆ. ಅಂತಹ ಮೂರ್ತಿಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ. ಕರ್ನಾಟಕ ಸರ್ಕಾರ ಐನೂರಕ್ಕು ಹೆಚ್ಚು ಫಾರ್ಮಸಿಸ್ಟ್ ಹುದ್ದೆಗಳನ್ನು ಆಹ್ವಾನಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಮಾತನಾಡಿ, ಸಂಗೀತ ಸೃಜನಶೀಲತೆಯಿಂದ ಬದುಕಿನಲ್ಲಿ ಔಷಧಗಳನ್ನು ದೂರಾಗಿಸುವ ಶಕ್ತಿಯಿದೆ. ಹಾಗಾಗಿಯೇ ಔಷಧಗಳಿಂದ ಮಾತ್ರ ಕಾಯಿಲೆ ಗುಣವಾಗಿಸಬಹುದು ಎಂಬ ಅಂಧತ್ವದಿಂದ ಹೊರಬರಬೇಕಿದೆ. ಮನುಷ್ಯನಲ್ಲಿ ದಡ್ಡತನವಿದ್ದರು ಪರವಾಗಿಲ್ಲ ಸಣ್ಣತನವಿರಬಾರದು. ಅವಮಾನಕ್ಕೆ ಒಳಗಾಗುವುದು ಸಣ್ಣತನದಿಂದಲೇ ವಿನಃ ದಡ್ಡತನದಿಂದಲ್ಲ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ, ನಿರ್ದೇಶಕರಾದ ಹೆಚ್.ಸಿ.ಶಿವಕುಮಾರ್, ಮಧುರಾವ್, ಅಜೀವ ಸದಸ್ಯರಾದ ರುಕ್ಮಿಣಿ ವೇದವ್ಯಾಸ, ವಿಜಯಕುಮಾರ್ ದಿನಕರ್, ಕಿಶೋರ್ ಶೀರನಾಳಿ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಡಾ.ಜಿ.ನಾರಾಯಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಫಾರ್ಮಸಿಯ ವಿವಿಧ ಕೋರ್ಸ್‌ಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

Exit mobile version