ಶಿವಮೊಗ್ಗ: ಮನುಷ್ಯನ ಪ್ರಕೃತಿ ವಿರೋಧಿ ಕೃತ್ಯಗಳಿಂದ ಪರಿಸರ ನಾಶ ಅಧಿಕವಾಗಿದ್ದು, ಇನ್ನಾದರೂ ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆ ಮಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ವಲಯ 11ರ ಎಲ್ಲ ಕ್ಲಬ್ ಹಾಗೂ ಶಿವಮೊಗ್ಗ ಸೈಕಲ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಪರಿಸರ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಪರಿಸರಕ್ಕೆ ಹಾನಿಯಾಗುವ ವಸ್ತುಗಳ ಬಳಕೆ ಮಾಡುವುದನ್ನು ನಾವೆಲ್ಲರೂ ನಿಲ್ಲಿಸೋಣ, ಪರಿಸರ ಸಂರಕ್ಷಿಸೋಣ ಎಂದು ತಿಳಿಸಿದರು.
ಸೈಕಲ್ ಬಳಸುವುದರಿಂದ ದೇಹ ಮನಸ್ಸು ಸದೃಢವಾಗುವುದರ ಜತೆಯಲ್ಲಿ ಆರೋಗ್ಯಯುತ ಜೀವನಶೈಲಿ ನಮ್ಮದಾಗುತ್ತದೆ. ಪರಿಸರ ಮಾಲಿನ್ಯ ಹಾಗೂ ಶಬ್ಧ ಮಾಲಿನ್ಯ ತಪ್ಪುತ್ತದೆ. ಶಿವಮೊಗ್ಗ ಸೈಕಲ್ ಕ್ಲಬ್ ವತಿಯಿಂದ ನಿರಂತರವಾಗಿ ಜಾಗೃತಿ ಜಾಥಾ ಹಾಗೂ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿರುವುದು ಅಭಿನಂದನೀಯ ಎಂದರು.
ಸ್ಮಾರ್ಟ್ ಸಿಟಿ ವ್ಯಾಪ್ತಿಯಲ್ಲಿ ಸೈಕಲ್ ಬಳಕೆದಾರರಿಗೆ ಅನುಕೂಲವಾಗುವ ರೀತಿಯಲ್ಲಿ ಸೈಕಲ್ ಪಾಥ್ ನಿರ್ಮಾಣ ಮಾಡಿ ಅನುಕೂಲ ಮಾಡಿಕೊಡಬೇಕು. ಪರಿಸರ ಜಾಗೃತಿ ಜಾಥಾ ಮಹತ್ವವನ್ನು ಎಲ್ಲರೂ ಅರಿತುಕೊಂಡು ಪರಿಸರ ಸಂರಕ್ಷಿಸಬೇಕು ಎಂದು ಹೇಳಿದರು.
ರೋಟರಿ ಜಿಲ್ಲಾ ಗವರ್ನರ್ ಡಾ. ಜಯಗೌರಿ ಹಾದಿಗಲ್ ಮಾತನಾಡಿ, ಸೈಕಲ್ ದಿನನಿತ್ಯ ಬಳಕೆಯಿಂದ ಆರೋಗ್ಯವಂತರಾಗಿ ಇರಬಹುದು. ಬಾಲ್ಯದಿಂದಲೇ ಸೈಕಲ್ ಬಳಕೆ ಹಾಗೂ ಅದರ ಮಹತ್ವದ ಬಗ್ಗೆ ಮಕ್ಕಳಿಗೆ ತಿಳವಳಿಕೆ ಮೂಡಿಸಬೇಕು ಎಂದು ತಿಳಿಸಿದರು.
ಪ್ರಿಸರ್ವ್ ಪ್ಲಾನೆಟ್ ಅರ್ಥ್ ಚರ್ಮದನ್ ವಸಂತ್ ಹೋಬಳಿದಾರ್ ಮಾತನಾಡಿ, ಶಿವಮೊಗ್ಗ ಸೈಕಲ್ ಕ್ಲಬ್ ಸಾರ್ವಜನಿಕ ಜಾಗೃತಿ ಜಾಥಾ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಭಾಗವಹಿಸುವ ಜತೆಯಲ್ಲಿ ಶಿವಮೊಗ್ಗ ಜಿಲ್ಲಾದ್ಯಂತ ವೈವಿಧ್ಯ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಅತ್ಯಂತ ಒಳ್ಳೆಯ ಕಾರ್ಯ ಎಂದರು.
ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಸೈಕಲ್ ಕ್ಲಬ್ ವತಿಯಿಂದ ಪರಿಸರ ಜಾಗೃತಿ ಜಾಥಾ ಸಾಗಿ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಆವರಣದಲ್ಲಿ ಜಾಥಾ ಮುಕ್ತಾಯವಾಯಿತು.
ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್ಕುಮಾರ್, ಸಹಾಯಕ ಗವರ್ನರ್ ಡಾ. ಗುಡದಪ್ಪ ಕಸಬಿ, ಚಂದ್ರಹಾಸ ರಾಯ್ಕರ್, ಎಂ.ಪಿ.ನಾಗರಾಜ್, ಶಿವಮೊಗ್ಗ ಸೈಕಲ್ ಕ್ಲಬ್ ಅಧ್ಯಕ್ಷ ಶ್ರೀಕಾಂತ್, ಕಾರ್ಯದರ್ಶಿ ಗಿರೀಶ್ ಕಾಮತ್, ಹರೀಶ್ ಪಟೇಲ್, ಶಶಿಕಾಂತ್ ನಾಡಿಗ್, ಸುರೇಶ್ ಕುಮಾರ್, ಕೆ.ಪಿ.ಶೆಟ್ಟಿ, ಮಂಜುನಾಥ ಕದಂ, ಅರುಣ್ ದೀಕ್ಷೀತ್ ಉಪಸ್ಥಿತರಿದ್ದರು.