Site icon TUNGATARANGA

ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಲಾಗುವುದು: ಸಂಸದ ಬಿ.ವೈ. ರಾಘವೇಂದ್ರ ಭರವಸೆ

ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಲಾಗುವುದು. ಸಂತ್ರಸ್ಥರು ಭಯಪಡಬೇಕಾದ ಅಗತ್ಯವಿಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ಭರವಸೆ ನೀಡಿದರು.

ಅವರು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಶರಾವತಿ ಮುಳುಗಡೆ ಪ್ರದೇಶದ ಸಂತ್ರಸ್ಥರ ಸಮಸ್ಯೆಗಳನ್ನು ಆಲಿಸಿ ಅವರಿಗೆ ಸಾಂತ್ವನ ಹೇಳಿ ಯಾವುದೇ ಕಾರಣಕ್ಕೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಮ್ಮನ್ನು ಕೈಬಿಡುವುದಿಲ್ಲ ಎಂದು ತಿಳಿಸಿದರು.

ನ್ಯಾಯಾಲಯ ಶರಾವತಿ  ಸಂತ್ರಸ್ಥರ ಜಮೀನಿನ ಡಿನೋಟಿಫಿಕೇಷನ್ ಗೆ ಸಂಬಂಧಿಸಿದಂತೆ ಗಿರೀಶ್ ಆಚಾರ್ ಎಂಬುವವರು ಸಲ್ಲಿಸಿದ್ದ ರಿಟ್ ಪಿಟಿಷನ್ ಗೆ ರೈತರ ವಿರುದ್ಧವಾಗಿ ತೀರ್ಪು ನೀಡಿದೆ. ಇದಕ್ಕೆ ಸಣ್ಣ ಕಾರಣವಿದೆ. ಕೇಂದ್ರದ ಒಪ್ಪಿಗೆ ಪಡೆದು ನ್ಯಾಯಾಲಯಕ್ಕೆ ಹೋಗಬೇಕಿತ್ತು. ಆದರೆ, ಆ ರೀತಿ ಮಾಡಲಿಲ್ಲ. ಅಧಿಕಾರಿಗಳ ತಪ್ಪಿನಿಂದ ಈ ರೀತಿ ಆಗಿದ್ದು, ಇದನ್ನು ಸರಿಪಡಿಸಲಾಗುವುದು ಎಂದರು.

ಶರಾವತಿ ಭಾಗದ ರೈತರು ತಮ್ಮ ಜಮೀನುಗಳನ್ನು ನೀಡಿ ಕತ್ತಲೆಯಲ್ಲಿರುವುದು ನಿಜ. ಇವರಿಗೆ ಭೂಮಿ ಹಕ್ಕನ್ನು ಆಗಿನ ಸರ್ಕಾರ ಕೊಡಬೇಕಿತ್ತು. ಈ ಸಮಸ್ಯೆ ದಶಕಗಳಿಂದ ಇದೆ. 1980 ಒಳಗೆಯೇ ಅರಣ್ಯ ಸಂರಕ್ಷಣೆ ಕಾಯ್ದೆಯಡಿಯಲ್ಲಿಯೇ ಸಂತ್ರಸ್ಥರ ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ಆದರೆ, ಹಾಗೇ ಮಾಡಲಿಲ್ಲ. ಸರ್ಕಾರ ಸಂತ್ರಸ್ಥರ ಪರವಾಗಿ ತೀರ್ಮಾನ ತೆಗೆದುಕೊಂಡರೂ ಅದನ್ನು ಗೆಜೆಟ್ ಗೆ ತರಲಿಲ್ಲ. ಪುನಃ 2016 ರಲ್ಲಿ ಡಿನೋಟಿಫೈ ಮಾಡಿತ್ತು. ಆದರೆ, ಕೇಂದ್ರ ಸರ್ಕಾರದ ಅನುಮತಿ ಪಡೆಯದೇ ಇರುವುದರಿಂದ ಈಗ ಡಿನೋಟಿಫೀಕೇಷನ್ ರದ್ದಾಗಿದೆ ಎಂದರು.

ಈಗಿನ ಅಧಿಕಾರಿಗಳ, ಆಗಿನ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ಈ ಆದೇಶ ಬಂದಿದ್ದು, ಇದಕ್ಕಾಗಿ ರೈತರು ಭಯಪಡುವ ಅಗತ್ಯವಿಲ್ಲ. ನಾಳೆ ಬೆಳಗ್ಗೆಯೇ ನಾನು ಸಂತ್ರಸ್ಥರ ಪರವಾಗಿ ದೆಹಲಿಯಲ್ಲಿ ಕೃಷಿ ಮತ್ತು ಅರಣ್ಯ ಸಚಿವರ ಜೊತೆ ಮಾತನಾಡುತ್ತೇನೆ. ಕೇಂದ್ರದ ಒಪ್ಪಿಗೆ ಪಡೆದೇ ಸಂತ್ರಸ್ಥರ ಜಾಗ ಉಳಿಸಿಕೊಡುತ್ತೇನೆ. ಸಾಗುವಳಿ ಮಾಡುತ್ತಿರುವ ಸಂತ್ರಸ್ಥ ರೈತರ ಜಮೀನನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ತಪ್ಪಾಗಿದೆ ನಿಜ, ಅದನ್ನು ಸರಿಪಡಿಸಿಕೊಡುತ್ತೇನೆ. ಯಾರೂ ದೃತಿಗೇಡಬೇಡಿ ಎಂದರು.

ಈ ಸಂದರ್ಭದಲ್ಲಿ ಸಂತ್ರಸ್ಥರ ಪರವಾಗಿ ಮಾತನಾಡಿದ ರೈತರಾದ ಸುಬ್ಬಣ್ಣ, ಸುಧಾಕರ್ ಮತ್ತು ಕೃಷ್ಣಮೂರ್ತಿ, ಸಂತ್ರಸ್ಥರ ಸಮಸ್ಯೆ ಬಗೆಹರಿಸುವಲ್ಲಿ ಎಲ್ಲಾ ಸರ್ಕಾರಗಳು ವಿಫಲವಾಗಿವೆ. ಮುಳುಗಡೆ ಸಂತ್ರಸ್ಥರಿಗೆ ಕಣ್ಣೀರು ನೀಡಬೇಡಿ. ರಾಜಕಾರಣಿಗಳು ಕೇವಲ ಭರವಸೆ ನೀಡಬಾರದು. ಎಲ್ಲಾ ಪಕ್ಷದವರು ನಮಗೆ ಸಹಕಾರ ನೀಡಬೇಕು. ನಾವು ಜಮೀನು ಕಳೆದುಕೊಂಡಿದ್ದೇವೆ. ಕತ್ತಲಲ್ಲಿದ್ದು ನಾಡಿಗೆ ಬೆಳಕು ನೀಡಿದ್ದೇವೆ. ಅವತ್ತೇ ನಮಗೆ ನ್ಯಾಯ ದೊರಕಿಸಿಕೊಡಬೇಕಿತ್ತು. ಆದರೆ ಆಗಿಲ್ಲ. ಇವತ್ತಾದರೂ ನಮಗೆ ನ್ಯಾಯ ಕೊಡಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಸಕ ಕೆ.ಬಿ. ಅಶೋಕ್ ನಾಯ್ಕ್ ಮೊದಲಾದವರಿದ್ದರು.

Exit mobile version