ಶಿವಮೊಗ್ಗ,
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಟಿವಿ ಮಾಧ್ಯಮವೊಂದರ ಸಂದರ್ಶನದಲ್ಲಿ ರಜಪೂತ ಸಮಾಜದ ಬಗ್ಗೆ ಕೊಟ್ಟಿರುವ ಅವಹೇಳನಕಾರಿ ಹೇಳಿಕೆ ಖಂಡಿಸಿ ಇಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾ ರಜಪೂತ್ ಸಭಾ ವತಿಯಿಂದ ರವಿ ಭಾವಚಿತ್ರಕ್ಕೆ ಮಸಿ ಬಳಿದು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಿ.ಟಿ. ರವಿ ಇತ್ತೀಚೆಗೆ ಟಿ.ವಿ. ಮಾಧ್ಯಮವೊಂ ದಕ್ಕೆ ನೀಡಿರುವ ಸಂದರ್ಶನದಲ್ಲಿ ದೇಶದ ಇತಿಹಾಸವನ್ನು ಕೆಣಕಿ ರಜಪೂತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಬ್ರಿಟಿಷರ ವಿರುದ್ಧ ಸ್ವತಂತ್ರ ಹೋರಾಟ ಮಾಡುವಾಗ ರಜಪೂತರು ‘ಇದು ತಮ್ಮ ಕೆಲಸ ಅಲ್ಲ’ ಎಂದು ಸುಮ್ಮನೆ ಕುಳಿತಿದ್ದರು ಮತ್ತು ಶಿವಾಜಿ ಮೊಘಲರ ವಿರುದ್ಧ ಏಕಾಂಗಿಯಾಗಿ ಹೋರಾಟ ಮಾಡುವಾಗ ಇದೇ ರಜಪೂತರು ಮೊಘಲರ ಜೊತೆ ಇದ್ದರು ಎಂದು ಹೇಳಿ ರಜಪೂತ ಸಮಾಜಕ್ಕೆ ಅವಮಾನ ಮಾಡಿರುವುದನ್ನು ಪ್ರತಿಭಟನಾಕಾರರು ಖಂಡಿಸಿದರು.
ಸಿ.ಟಿ. ರವಿ ಚರಿತ್ರೆ ಹಾಗೂ ಇತಿಹಾಸವನ್ನು ಸರಿಯಾಗಿ ಅಧ್ಯಯನ ಮಾಡದೇ, ಅಗತ್ಯವಾದ ಮಾಹಿತಿ ಸರಿಯಾಗಿ ತಿಳಿದುಕೊಳ್ಳದೇ ಕೇವಲ ಪ್ರಚಾರಕ್ಕಾಗಿ ಬಾಯಿಗೆ ಬಂದಂತೆ ಮಾತಾಡಿ ಸಮಾಜದ ಗೌರವವಕ್ಕೆ ಧಕ್ಕೆ ತಂದಿರುತ್ತಾರೆ ಎಂದು ದೂರಿದರು.
ಇತಿಹಾಸ ಪುಟಗಳನ್ನು ತಿರುವಿ ಹಾಕಿದರೆ ಇತಿಹಾಸಗಾರರೇ ವರ್ಣಿಸಿದಂತೆ ಈ ದೇಶದ ಚರಿತ್ರೆಯಲ್ಲಿ ಮೊಘಲರ ವಿರುದ್ಧ ಪರಾಕ್ರಮದಿಂದ ರಜಪೂತ ರಾಜರುಗಳು ಸೆಣಸಾಡಿದ್ದರೆಂದು, ಮೊಘಲರಿಗೆ ಸಿಂಹ ಸ್ವಪ್ನರಾಗಿ ಕಾಡಿದ್ದರೆಂದು, ಅನೇಕ ಯುದ್ಧಗಳಲ್ಲಿ ಮೊಘಲರನ್ನು ಸೋಲಿಸಿದರೆಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಮೊಘಲರಾದ ಔರಂಗಜೇಬ್, ಅಕ್ಬರ್ ಕಾಲದಲ್ಲಿ ರಜಪೂತರ ಹೋರಾಟ ಮತ್ತು ಪರಾಕ್ರಮವನ್ನು ಚರಿತ್ರೆಯು ಹೊಗಳುತ್ತದೆ. ಈಗಲೂ ಕೂಡ ದೇಶ ಪ್ರೇಮ, ಹೋರಾಟ, ಪರಾಕ್ರಮ, ಧರ್ಮ, ನಿಷ್ಠೆ ವಿಷಯ ಬಂದಾಗ ರಜಪೂತ ಜನಾಂಗದವರು ಎಲ್ಲರಿಗೂ ಮಿಗಿಲಾಗಿ ನಿಲ್ಲುತ್ತಾರೆ. ಸೈನ್ಯದಲ್ಲಿ ಈಗಲೂ ಅಪಾರ ಸಂಖ್ಯೆಯಲ್ಲಿ ರಜಪೂತರು ಇದ್ದು, ಅವರ ಕರ್ತವ್ಯ, ನಿಷ್ಠೆ, ಧೈರ್ಯ ಮತ್ತು ಪರಾಕ್ರಮಗಳಿಗೆ ಸಾಕ್ಷಿಯಾಗಿರುತ್ತದೆ. ಇಂತಹ ಸಮಾಜದ ವಿರುದ್ಧ ಸಿ.ಟಿ, ರವಿಯವರು ಬಾಯಿಗೆ ಬಂದಂತೆ ಮಾತನಾಡಿರುವುದು ಖಂಡಿಸಿದರು.
ಶಿವಾಜಿ ಮಹಾರಾಜರನ್ನು ಎತ್ತಿ ಕಟ್ಟಿ ರಜಪೂತ ಸಮಾಜವನ್ನು ತೆಗಳಿ ಕ್ಷತ್ರಿಯರಲ್ಲಿ ಒಡಕು ಮೂಡಿಸುವ ಪ್ರಯತ್ನವನ್ನು ಮಾಡಿರು ತ್ತಾರೆ. ಈ ರೀತಿ ಸಮಾಜ ಒಡೆದು ರಾಜಕೀಯ ಮಾಡುವ ಕೆಲಸ ಇವರಿಗೆ ಕರಗತವಾಗಿಬಿಟ್ಟಿದೆ. ಈ ರೀತಿ ಹೇಳಿಕೆ ಕೊಡುವ ಮುನ್ನ ಸಿ.ಟಿ. ರವಿಯವರ ಪೂರ್ವಜರು ದೇಶಕ್ಕಾಗಿ ಏನು ತ್ಯಾಗ-ಬಲಿದಾನ ಮಾಡಿದ್ದಾರೆ ಎಂದು ಮೊದಲು ಹೇಳಲಿ ಶಾಂತಿ ಕದಡಿದ ಸಿ.ಟಿ. ರವಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾ ರಜಪೂತ್ ಸಭಾದ ಅಧ್ಯಕ್ಷ ಆರ್.ದೀಪಕ್ಸಿಂಗ್ ವಹಿಸಿದ್ದು, ಎಸ್.ಎಂ.ವಿಶ್ವನಾಥ್ಸಿಂಗ್, ಎಸ್.ಡಿ. ಅನಂತರಾಂಸಿಂಗ್, ರವೀಂದ್ರಸಿಂಗ್, ರಾಜೇಂದ್ರ ಸಿಂಗ್ ಸೇರಿದಂತೆ ಹಲವರು ಭಾಗವಹಿಸಿದ್ದರು.