Site icon TUNGATARANGA

ಶಿವಮೊಗ್ಗ/ ಪೊಲೀಸ್ ಬಲದೊಂದಿಗೆ ಬಂದು ಮನೆ ತೆರವುಗೊಳಿಸಿದ ನೀರಾವರಿ ಇಲಾಖೆ/ ಯುವಕನೋರ್ವ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಬೆದರಿಕೆ!

ಶಿವಮೊಗ್ಗ: ಗಾಡಿಕೊಪ್ಪ ಮಲ್ಲಿಗೇನಹಳ್ಳಿ ಬಳಿ ಇರುವ ಡಾ. ಅಂಬೇಡ್ಕರ್ ಕಾಲೋನಿಯಲ್ಲಿ ನೀರಾವರಿ ಇಲಾಖೆ ಪೊಲೀಸ್ ಬಲದೊಂದಿಗೆ ಮನೆ ತೆರವುಗೊಳಿಸಲು ಮುಂದಾದಾಗ ವ್ಯಕ್ತಿಯೋರ್ವ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ತೆರವಿಗೆ ಸ್ಥಳೀಯರ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಅಂಬೇಡ್ಕರ್ ಕಾಲೋನಿಯಲ್ಲಿ ನೀರಾವರಿ ಇಲಾಖೆಯ ಅಪ್ಪರ್ ತುಂಗಾ ಯೋಜನೆಯ ಬಫರ್ ಜೋನ್ ನಲ್ಲಿ ಸುಮಾರು 5 ಎಕರೆ 3 ಗುಂಟೆ ಜಾಗ ಒತ್ತುವರಿ ಆಗಿದೆ ಎಂದು ಈ ಹಿಂದೆ ತೆರವಿಗೆ ನೋಟಿಸ್ ನೀಡಲಾಗಿತ್ತು. ಈ ನೋಟಿಸ್ ಗೆ ಸ್ಥಳೀಯರು ಉತ್ತರ ನೀಡಿದ್ದರೂ ಸಹ ಇಲಾಖೆ ತೆರವು ಕಾರ್ಯಾಚರಣೆಗೆ ಮುಂದಾಗಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ವೀಡಿಯೋ ನೋಡಿ

ಕಾಲೋನಿಯಲ್ಲಿರುವ ಸುಮಾರು 200 ಮನೆಗಳಿಗೆ ನೋಟಿಸ್ ನೀಡಲಾಗಿತ್ತು. ಈಗ 200 ಮನೆಗಳನ್ನು ತೆರವುಗೊಳಿಸುತ್ತಿದ್ದು, ದಲಿತ ಸಂಘರ್ಷ ಸಮಿತಿ ಮುಖಂಡರು ಸಹ ತೆರವುಗೊಳಿಸದಂತೆ ಸ್ಥಳದಲ್ಲಿ ಧರಣಿ ನಡೆಸಿದರು.

ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಬೆದರಿಕೆ!
Tungataranga News
https://youtube.com/shorts/QXlz7lPjXCk?feature=share ನೋಡಿ

ಈಗಾಗಲೇ ಈ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದ್ದು, ಕಳೆದ 7 -8 ವರ್ಷಗಳಿಂದ ವಿದ್ಯುತ್ ಸಂಪರ್ಕ, ಬೋರ್ ವೆಲ್ ನೀರಿನ ಸಂಪರ್ಕ ನೀಡಲಾಗಿದೆ. ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರ ಚೀಟಿ ನೀಡಿದ್ದು, ಇಲ್ಲಿ ಸರ್ಕಾರದ ಅಂಗನವಾಡಿ ಕೂಡ ಇದೆ ಎಂದು ಸ್ಥಳೀಯರು ಹೇಳಿದ್ದಾರೆ. ಆದರೂ, ಇಲಾಖೆ ಸುಮಾರು 200 ಕ್ಕೂ ಪೊಲೀಸರ ನೆರವಿನೊಂದಿಗೆ ತೆರವಿಗೆ ಮುಂದಾಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ತೆರವಿಗೆ ವಿರೋಧ ವ್ಯಕ್ತಪಡಿಸಿದರು. ಸುಮಾರು ವರ್ಷಗಳಿಂದ 199 ಮನೆಗಳಲ್ಲಿ ಜನ ಇಲ್ಲಿ ವಾಸವಾಗಿದ್ದಾರೆ. ಏಕಾಏಕಿ ಅಪ್ಪರ್ ತುಂಗಾ ಇಲಾಖೆ ಅಧಿಕಾರಿ ತೆರವುಗೊಳಿಸಲು ಮುಂದಾಗಿದ್ದಾರೆ. ಪೊಲೀಸರನ್ನು ಕರೆತಂದು ಬೆದರಿಸಿ ತೆರಿವೆ ಮುಂದಾಗಿದ್ದಾರೆ. ಪ್ರಧಾನಿ ಮೋದಿ ಅವರು ದೇಶದ ಪ್ರತಿಯೊಬ್ಬ ನಾಗರಿಕರಿಗೆ 2022 ರೊಳಗೆ ಮನೆ ಕೊಡುವುದಾಗಿ ಹೇಳಿದ್ದಾರೆ. ಆದರೆ, ಇಲ್ಲಿ ಬಡವರ ಮನೆಯನ್ನೇ ತೆರವುಗೊಳಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೀರಾವರಿ ಇಲಾಖೆ ಜಾಗವನ್ನು ಬಿಜೆಪಿಗೆ 2 ಎಕರೆ ಮಂಜೂರು ಮಾಡಿದ್ದಾರೆ. ಹಕ್ಕಿಪಿಕ್ಕಿ ಜನಾಂಗದವರು ಸೂರಿಲ್ಲದೇ ಅಲೆಮಾರಿಗಳಾಗಿ ತಿರುಗುತ್ತಿದ್ದು, ಈಗ ಹಲವು ವರ್ಷಗಳಿಂದ ಅಲ್ಲಿ ವಾಸವಾಗಿದ್ದು, ನಮ್ಮ ಸರ್ಕಾರವಿದ್ದಾಗ ಅವರಿಗೆ ಮೂಲ ಸೌಲಭ್ಯ ಕಲ್ಪಿಸಲಾಗಿತ್ತು ಎಂದರು.

ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಇಲ್ಲಿನ ನಿವಾಸಿಗಳಿಗೆ ಎಲ್ಲಾ ಸೌಲಭ್ಯ ಕಲ್ಪಿಸಲಾಗಿತ್ತು. ಕುಡಿಯುವ ನೀರು, ಅಂಗನವಾಡಿ ಸೇರಿದಂತೆ ಎಲ್ಲಾ ಮೂಲ ಸೌಕರ್ಯ ಕಲ್ಪಿಸಲಾಗಿತ್ತು. ಕೂಡಲೇ ಸ್ಥಳಕ್ಕೆ ಶಾಸಕರು ಆಗಮಿಸಬೇಕು. ಇಲಾಖೆ ಅಧಿಕಾರಿಗಳಿಗೆ ಹೇಳಿ ನೀರಾವರಿ ಇಲಾಖೆಯಿಂದ ಸ್ಲಂ ಬೋರ್ಡ್ ನವರಿಗೆ ಈ ಜಾಗ ಹಸ್ತಾಂತರ ಮಾಡಿ ಹಕ್ಕುಪತ್ರ ಕೊಟ್ಟು ಖಾತೆ ಮಾಡಿಕೊಡಬೇಕು ಎಂದು ಶಾಸಕರಿಗೆ ಒತ್ತಾಯಿಸಿದರು.

ಶಿವಮೊಗ್ಗ ನಗರ ಶಾಸಕರು ನಾನು ಮಂತ್ರಿಯಾಗಿಲ್ಲ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಇವರ ಶಾಪ ತಟ್ಟಿ ಶಾಶ್ವತವಾಗಿಯೇ ಅವರು ಮಂತ್ರಿಯಾಗುವುದಿಲ್ಲ. ಆದ್ದರಿಂದ ಕೂಡಲೇ ಸ್ಥಳಕ್ಕೆ ಆಗಮಿಸಿ ಇಲ್ಲಿನ ನಿವಾಸಿಗಳ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಕೊನೆಗೆ ಪ್ರತಿಭಟನಾಕಾರರು ಜೆಸಿಬಿ ಅಡ್ಡಲಾಗಿ ಮಲಗಿ ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದರು. ಹಲವು ಬಾರಿ ಮನವೊಲಿಸಿದರೂ, ಪ್ರತಿಭಟನೆ ಹೆಚ್ಚಾದಾಗ ಹೈಕೋರ್ಟ್ ಆದೇಶದಂತೆ ನೀರಾವರಿ ಇಲಾಖೆ ಅಧಿಕಾರಿಗಳ ಸೂಚನೆಯಂತೆ ಬಲವಂತದ ತೆರವಿಗೆ ಮುಂದಾದರು. ಖಾಲಿ ಇರುವ 8 ಮನೆಗಳನ್ನು ಇವತ್ತು ನೆಲಸಮಗೊಳಿಸಿದ್ದು, ವಾಸವಿರುವವರಿಗೆ 15 ದಿನದ ಗಡುವು ನೀಡಿ ಕಾರ್ಯಾಚರಣೆ ಮುಂದೂಡಲಾಗಿದೆ. ಪ್ರತಿಭಟನೆ ಕೈಗೊಂಡು ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದವರನ್ನು ಪೊಲೀಸರು ವಾಹನದಲ್ಲಿ ಕರೆದೊಯ್ದರು.

ಡಿವೈಎಸ್ಪಿ ಪ್ರಭು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ತುಂಗಾ ಮೇಲ್ದಂಡೆ ಯೋಜನೆ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಶ್, ದಲಿತ ಸಂಘರ್ಷ ಸಮಿತಿಯ ಟಿ.ಹೆಚ್. ಹಾಲೇಶಪ್ಪ, ಮಂಜುನಾಥ್, ಎ.ಡಿ. ಆನಂದ್, ಕರ್ನಾಟಕ ಹಕ್ಕಿ ಪಿಕ್ಕಿ ಅಲೆಮಾರಿ ಸಂಘಟನೆ ರಾಜ್ಯಾಧ್ಯಕ್ಷ ಜಗ್ಗು, ಶಿವಕುಮಾರ್, ಮೀನಾ, ಸೂಗೂರು ಪರಮೇಶ್, ಶಿವಕುಮಾರ್ ಪೈಂಟರ್ ಮತ್ತಿತರರು ಇದ್ದರು.

Exit mobile version