Site icon TUNGATARANGA

ಅಭಿವೃದ್ದಿಯಲ್ಲಿ ರಾಜಕೀಯ, ಜಾತಿಧರ್ಮದ ಕಟ್ಟುಪಾಡುಗಳು ಬೇಡ: ಶಾಸಕ ಎಚ್.ಹಾಲಪ್ಪ ಹರತಾಳು

ಸಾಗರ : ಅಭಿವೃದ್ದಿಯಲ್ಲಿ ರಾಜಕೀಯ, ಜಾತಿಧರ್ಮದ ಕಟ್ಟುಪಾಡುಗಳು ಬೇಡ. ಅಗತ್ಯ ಇರುವ ಕಡೆಗಳಲ್ಲಿ ಜಾತಿಮತ ಪಂಥ ನೋಡದೆ ರಸ್ತೆ, ಚರಂಡಿ ಸೇರಿದಂತೆ ವಿವಿಧ ಅಭಿವೃದ್ದಿ ಕೆಲಸಗಳನ್ನು ಮಾಡಲಾಗುತ್ತದೆ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದರು.


ತಾಲ್ಲೂಕಿನ ಕೆಳದಿಯಲ್ಲಿ ಬುಧವಾರ ಕಸಬಾ ಹೋಬಳಿ ವ್ಯಾಪ್ತಿಯ ಸುಮಾರು ೩ ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಅಂಗನಾಡಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡುತ್ತಾ, ಇದು ಅಭಿವೃದ್ದಿಯ ದಿನಗಳಾಗಿದ್ದು, ಇನ್ನು ಎಷ್ಟು ವರ್ಷ ಜಾತಿಗಳನ್ನು ಬೈಯುತ್ತಾ ಇರಬೇಕು. ಇನ್ನೇನಿದ್ದರೂ ಪರಿಪೂರ್ಣ ಅಭಿವೃದ್ದಿ ನನ್ನ ಗುರಿ ಎಂದರು.


ಕೆಲವರಿಗೆ ಅಪಪ್ರಚಾರ ಮಾಡುವುದೇ ಕೆಲಸವಾಗಿದೆ. ಚುನಾವಣೆಗೆ ಮೊದಲು ಪಕ್ಷಪಾರ್ಟಿ. ಚುನಾವಣೆ ಗೆದ್ದ ನಂತರ ಕ್ಷೇತ್ರದ ಎಲ್ಲ ಭಾಗವೂ ನಮ್ಮ ಕಾರ್ಯಕ್ಷೇತ್ರ. ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಹತ್ತಾರು ಕೋಟಿ ರೂ. ವೆಚ್ಚದಲ್ಲಿ ಹಲವು ರಸ್ತೆ ಅಭಿವೃದ್ದಿ ಕೆಲಸಗಳನ್ನು ಮಾಡಲಾಗಿದೆ. ಈ ಭಾಗಕ್ಕೆ ಶರಾವತಿ ಹಿನ್ನೀರಿನಿಂದ ಕುಡಿಯುವ ನೀರನ್ನು ತರಲು ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.


ಕ್ಷೇತ್ರವ್ಯಾಪ್ತಿಯಲ್ಲಿ ಹೊಸದಾಗಿ ಬಗರ್‌ಹುಕುಂ ಮಾಡಲು ಅವಕಾಶವಿಲ್ಲ. ಹಿಂದೆ ಬೇರೆಬೇರೆ ಕಾರಣದಿಂದ ಕೈಬಿಟ್ಟು ಹೋದವರಿಗೆ ಬಗರ್‌ಹುಕುಂ ಅಡಿ ಹಕ್ಕುಪತ್ರ ಕೊಡಲು ಚಿಂತನೆ ನಡೆಸಲಾಗಿದೆ. ರಾಜ್ಯ ಸರ್ಕಾರ ಸೊಪ್ಪಿನಬೆಟ್ಟ ಮತ್ತು ಅರಣ್ಯಭೂಮಿ ಸಾಗುವಳಿದಾರರಿಗೆ ಭೂಮಿ ಕೊಡುವ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದು, ಶೀಘ್ರ ಕಾಯ್ದೆ ತಿದ್ದುಪಡಿ ತಂದು ಅರ್ಹರಿಗೆ ಹಕ್ಕುಪತ್ರ ನೀಡಲಾಗುತ್ತದೆ ಎಂದು ಹೇಳಿದರು.


ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗೀತಾ ರಮೇಶ್, ಪ್ರಮುಖರಾದ ಸಂದೀಪ್ ಕೆಳದಿ, ಕೆ.ಎಂ.ಸತ್ಯನಾರಾಯಣ, ಸದಸ್ಯರಾದ ರಮೇಶ್ ಹಾರೆಗೊಪ್ಪ, ಶೃತಿ ರಮೇಶ್, ದುರ್ಗಪ್ಪ, ಸುಮ, ದೇವೇಂದ್ರಪ್ಪ ಯಲಕುಂದ್ಲಿ, ಅಸ್ಪಾಕ್ ಅಹ್ಮದ್ ಇನ್ನಿತರರು ಹಾಜರಿದ್ದರು.

Exit mobile version