Site icon TUNGATARANGA

ಖಾಸಗಿ ಶಾಲಾ ಶಿಕ್ಷಕರಿಗೆ ಸರ್ಕಾರದಿಂದ ಆರ್ಥಿಕ ಸಹಕಾರ

ಕೊರೋನಾ ಹೊಡೆತಕ್ಕೆ ಖಾಸಗಿ ಅನುದಾನರಹಿತ ಶಾಲಾ ಶಿಕ್ಷಕರು ಆರ್ಥಿಕವಾಗಿ ತೊಂದರೆಯಲ್ಲಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಸೇರಿ ಆ ಶಿಕ್ಷಕರಿಗೂ ಆರ್ಥಿಕ ಸಹಕಾರ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಶಿಕ್ಷಣ ಸಚಿವ ಎಸ್‌. ಸುರೇಶ್ ಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಂದಾಜು 4 ಲಕ್ಷ ಖಾಸಗಿ ಶಾಲಾ ಶಿಕ್ಷಕರಿದ್ದು, ಪ್ರತಿಯೊಬ್ಬರಿಗೂ 10 ಸಾವಿರ ಪ್ಯಾಕೆಜ್‌ ರೂಪದಲ್ಲಿ ನೀಡಿದರೆ ಅಂದಾಜು 400 ಕೋಟಿ ರೂ ಅಗತ್ಯವಿದೆ. ಆದರೆ, ರಾಜ್ಯದ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಸುಧಾರಣೆ ಇಲ್ಲದ ಕಾರಣ ಈ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಇಷ್ಟು ವರ್ಷಗಳ ಕಾಲ ಈ ಶಿಕ್ಷಕರ ಸೇವೆ ಬಳಸಿಕೊಂಡ ಶಿಕ್ಷಣ ಸಂಸ್ಥೆಗಳು ಸಹ ಜವಾಬ್ದಾರರಾಗಿದ್ದು, ಅವರನ್ನು ಒಳಗೊಂಡು ಆರ್ಥಿಕ ಸಹಕಾರ ಮಾಡಬಹುದೇ?
ಎಂದು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದರು.
ಶಾಲೆ ಆರಂಭಿಸುವ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರದಿಂದ ಈ ಕುರಿತು ಹಸಿರು ನಿಶಾನೆ ಬಂದಾಗಲೇ ಶಾಲೆಗಳನ್ನು ಆರಂಭಿಸಲಾಗುವುದು. ಅದಕ್ಕೂ ಯಾವ ರೀತಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಆರಂಭಿಸಬೇಕು ಎಂಬುದರ ಬಗ್ಗೆ ಚರ್ಚೆ ಹಾಗೂ ಸಲಹೆಗಳನ್ನು ಪಡೆಯಲಾಗುತ್ತಿದೆ ಎಂದರು.

ಶಾಲೆ ಆರಂಭ :

ಸೆ. 21ರಿಂದ 9ರಿಂದ 12ನೇ ತರಗತಿ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿ ಶಿಕ್ಷಕರ ಮಾರ್ಗದರ್ಶನ ಪಡೆಯಲು ಅವಕಾಶ ನೀಡಲಾಗುವುದು. ಈ ಕುರಿತು ಕೇಂದ್ರದಿಂದ ಮಾರ್ಗಸೂಚಿ ಬಂದಿದ್ದು, ರಾಜ್ಯದ ಮಾರ್ಗಸೂಚಿಯನ್ನು ತಯಾರು ಮಾಡಲಾಗುತ್ತಿದ್ದು, ಸೆ. 12ರಂದು ಪ್ರಕಟ ಮಾಡುತ್ತೇವೆ ಎಂದರು.
ಶಾಲೆಗಳು ಆರಂಭ ಆಗುವವರೆಗೂ ವಿದ್ಯಾಗಮ ಯೋಜನೆ ಚಾಲ್ತಿಯಲ್ಲಿರುತ್ತದೆ. ಆದರೆ, ಈ ಯೋಜನೆಯಲ್ಲಿ ಅನೇಕ ಸುಧಾರಣೆಗಳನ್ನು ತರಲಾಗುತ್ತಿದ್ದು, ಈ ಮೂಲಕ ಮಕ್ಕಳ ಕಲಿಕೆಯನ್ನು ನಿರಂತರತೆ ಕಾಪಾಡಿಕೊಳ್ಳುವುದೇ ನಮ್ಮ ಉದ್ದೇಶ. ಕಲಿಕೆಗೆ ತೊಂದರೆ ಹಾಗೂ ಮಕ್ಕಳು ಕಲಿಕೆಯಿಂದ ವಂಚಿತರಾಗದಂತೆ ವಿದ್ಯಾಗಮ ಯೋಜನೆ ರೂಪಿಸಲಾಗಿದೆ. ಈಗಾಗಲೇ ಎಲ್ಲ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ ಮಾಡಿದ್ದು ಕಲಿಕೆಯಲ್ಲಿ ನಿರಂತರತೆ ಕಾಪಾಡಿಕೊಳ್ಳಲು ಈ ಯೋಜನೆ ಪೂರಕವಾಗಿದೆ. ಈ ಯೋಜನೆ ಜಾರಿಯಾಗದೇ ಇದ್ದರೆ, ಬಾಲ್ಯವಿವಾಹ ಹಾಗೂ ಬಾಲಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತದೆ. ಅಲ್ಲದೇ, ಶಾಲೆಯಿಂದ ಹೊರಗುಳಿಯುವರ ಸಂಖ್ಯೆ ಜಾಸ್ತಿಯಾಗಲಿದೆ. ಈ ಹಿನ್ನೆಲೆಯಲ್ಲಿ ವಿದ್ಯಾಗಮಕ್ಕೆ ಪೋಷಕರು, ಮಕ್ಕಳು ತುಂಬ ಉತ್ತಮ ಸ್ಪಂದನೆ ನೀಡಿದ್ದಾರೆ ಎಂದರು.

Exit mobile version