Site icon TUNGATARANGA

ಸರಳ ದಸರಾ ಆಚರಣೆಗೆ ಶಿವಮೊಗ್ಗ ಪಾಲಿಕೆ ನಿರ್ಧಾರ


ಶಿವಮೊಗ್ಗ, ಸೆ.11:
ಕರೋನಾ ಹಿನ್ನೆಲೆಯಲ್ಲಿ ಈ ಬಾರಿ ಶಿವಮೊಗ್ಗ ನಗರದಲ್ಲಿ ಕೇವಲ ಒಂದು ದಿನಕ್ಕೆ ಸೀಮಿತಗೊಳಿಸಿ ದಸರಾ ಹಬ್ಬವನ್ನು ಸರಳವಾಗಿ ಆಚರಿಸಲಾಗುವುದು ಎಂದು ಮೇಯರ್ ಸುವರ್ಣಾ ಶಂಕರ್ ಅವರು ತಿಳಿಸಿದರು.
ಅವರು ಇಂದು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ದಸರಾ ಹಬ್ಬ ಆಯೋಜನೆ ಕುರಿತು ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದರು.
ಈ ಬಾರಿ ಮೆರವಣಿಗೆ ಇರುವುದಿಲ್ಲ. ಆದರೆ ಎಲ್ಲಾ ದೇವ ದೇವತೆಗಳನ್ನು ಒಂದು ಸೇರಿಸಿ ಬನ್ನಿ ಮುಡಿಯುವ ಕಾರ್ಯ ನಡೆಸಲಾಗುವುದು. ಇದೇ ರೀತಿ ಹಿಂದಿನ ವರ್ಷದಂತೆ ಇಡೀ ನಗರದ ದೀಪಾಲಂಕಾರ ಮಾಡಲಾಗುವುದು. ವಿಜಯ ದಶಮಿಗೆ ಸಂಬಂಧಿಸಿದಂತೆ ಇತರ ಯಾವುದೇ ದಸರಾ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಅವರು ಹೇಳಿದರು.
ಆಯುಕ್ತ ಚಿದಾನಂದ ವಟಾರೆ ಅವರು ಮಾತನಾಡಿ, ಈ ಬಾರಿ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲು ರಾಜ್ಯ ಸರ್ಕಾರ ಈಗಾಗಲೇ ನಿರ್ಧಾರ ಕೈಗೊಂಡಿದೆ. ದಸರಾ ಆಚರಣೆ ಕುರಿತಾಗಿ ಇದುವರೆಗೆ ಸರ್ಕಾರದಿಂದ ಯಾವುದೇ ಮಾರ್ಗಸೂಚಿಗಳು ಬಂದಿರುವುದಿಲ್ಲ. ಆದರೆ ಸರ್ಕಾರದ ಸೂಚನೆ ಪ್ರಕಾರ ಶಿವಮೊಗ್ಗದಲ್ಲಿ ಈ ಬಾರಿ ಸರಳವಾಗಿ ಆಚರಿಸಲು ಕ್ರಮ ಕೈಗೊಳ್ಳಲಾಗುವುದು. ಹೆಚ್ಚಿನ ಜನರು ಮನೆಯಲ್ಲಿಯೇ ಉತ್ಸವವನ್ನು ವೀಕ್ಷಿಸಲು ಅನುಕೂಲವಾಗುವಂತೆ ಕಾರ್ಯಕ್ರಮಗಳ ಲೈವ್ ಸ್ಟ್ರೀಮಿಂಗ್ ಸಹ ಮಾಡಬಹುದಾಗಿದೆ ಎಂದು ಹೇಳಿದರು.
ಕಳೆದ ವರ್ಷ ದಸರಾ ಆಚರಣೆಗೆ ಸರ್ಕಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮುಖಾಂತರ 1.80ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಇದರಲ್ಲಿ 1.63ಕೋಟಿ ರೂ. ವೆಚ್ಚ ಮಾಡಲಾಗಿದ್ದು, 17ಲಕ್ಷ ರೂ. ಉಳಿತಾಯವಿದೆ. ಈ ಅನುದಾನ ಹಾಗೂ ಇನ್ನಿತರ ಉಳಿಕೆ ಅನುದಾನ ಬಳಸಿಕೊಂಡು ದಸರಾ ಸಾಂಪ್ರದಾಯಿಕವಾಗಿ ಆಚರಿಸಬಹುದಾಗಿದೆ ಎಂದು ಸಭೆಗೆ ತಿಳಿಸಿದರು.
ಸದಸ್ಯರ ಅಭಿಪ್ರಾಯ:
ವಿಧಾನ ಪರಿಷತ್ ಸದಸ್ಯ ಪ್ರಸನ್ನ ಕುಮಾರ್ ಅವರು ಮಾತನಾಡಿ, ಸರ್ಕಾರದ ಮಾರ್ಗಸೂಚಿ ಪ್ರಕಾರ ಅತ್ಯಂತ ಸರಳವಾಗಿ ಹಬ್ಬವನ್ನು ಆಚರಿಸಬೇಕು. ನಮ್ಮ ಆಚರಣೆಗಳು ಕರೋನಾ ಹೆಚ್ಚಾಗಲು ಕಾರಣವಾಗಬಾರದು. ಜನರ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಜಯ ದಶಮಿಯ ಸಾಂಪ್ರದಾಯಿಕತೆಗೆ ಯಾವುದೇ ಧಕ್ಕೆ ಬಾರದಂತೆ ಅತ್ಯಂತ ಕಡಿಮೆ ಜನರನ್ನು ಸೇರಿಸಿ ಸರಳವಾಗಿ ಕಾರ್ಯಕ್ರಮ ರೂಪಿಸಬೇಕು ಎಂದು ಸದಸ್ಯ ಜ್ಞಾನೇಶ್ವರ್ ತಿಳಿಸಿದರು.
ಯಾವುದೇ ಆಡಂಬರ, ಅದ್ದೂರಿತನವಿಲ್ಲದೇ ಸರಳವಾಗಿ ದಸರಾ ಆಚರಿಸಬಹುದಾಗಿದೆ. ದಸರಾ ಆಚರಣೆಗೆ ಮೀಸಲಾಗಿರಿಸಿರುವ ಅನುದಾನದಲ್ಲಿ ಮೆಗ್ಗಾನ್ ಆಸ್ಪತ್ರೆಗೆ ಮಹಾನಗರ ಪಾಲಿಕೆ ವತಿಯಿಂದ 20ವೆಂಟಿಲೇಟರ್ ಒದಗಿಸುವ ನಿರ್ಣಯ ಕೈಗೊಳ್ಳಬೇಕು ಎಂದು ಸದಸ್ಯ ಎಚ್.ಸಿ.ಯೋಗೀಶ್ ತಿಳಿಸಿದರು.

ಉತ್ಸವದ ಆಶಯಕ್ಕೆ ಧಕ್ಕೆ ಬಾರದಂತೆ ವ್ಯವಸ್ಥಿತವಾಗಿ ದಸರಾ ಆಯೋಜಿಸುವ ಕುರಿತು ಎಲ್ಲರೂ ಸೇರಿ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದು ಸದಸ್ಯ ಚನ್ನಬಸಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

Exit mobile version