ಸಾಗರ : ಯಡೇಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪರಿಪೂರ್ಣ ಅಭಿವೃದ್ದಿಗೆ ೨೩ ಕೋಟಿ ರೂ. ವಿನಿಯೋಗಿಸಲಾಗಿದೆ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದರು.
ತಾಲ್ಲೂಕಿನ ಯಡೇಹಳ್ಳಿಯಲ್ಲಿ ಮಂಗಳವಾರ ಗಣಪತಿ ದೇವಸ್ಥಾನ ರಸ್ತೆ, ಶಾಂತಬೈಲ್ ರಸ್ತೆ, ಘಂಟಿನಕೊಪ್ಪ-ಗೇರುಬೀಸು ಸೇತುವೆ ಸಂಪರ್ಕ ರಸ್ತೆ, ಅಂಬೇಡ್ಕರ್ ಭವನ, ಇರುವಕ್ಕಿ ರಸ್ತೆ ಸೇರಿದಂತೆ ಸುಮಾರು ೧೦ ಕೋಟಿ ರೂ. ವೆಚ್ಚದ ವಿವಿದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಮುಂದಿನ ೪ ತಿಂಗಳಿನಲ್ಲಿ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಸುಮಾರು ೩೦೦ ಕೋಟಿ ರೂ. ವೆಚ್ಚದ ೬೦೦ ರಸ್ತೆ, ಸೇತುವೆ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತದೆ. ಸ್ಥಳೀಯರ ಬಹುಕಾಲದ ಬೇಡಿಕೆಯಾಗಿದ್ದ ಘಂಟಿನಕೊಪ್ಪ-ಗೇರುಬೀಸು ರಸ್ತೆ ಮತ್ತು ಸೇತುವೆಯನ್ನು ಸುಮಾರು ೪ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿದ್ದು, ಸ್ಥಳೀಯರು ರಿಪ್ಪನಪೇಟೆಗೆ ಈ ಮಾರ್ಗವಾಗಿ ಹೋಗಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಅರಣ್ಯವಾಸಿಗಳಿಗೆ ಹಕ್ಕುಪತ್ರ ನೀಡುವ ನಿಟ್ಟಿನಲ್ಲಿ ಗಮನ ಹರಿಸಲಾಗಿದೆ.
ಈ ಬಗ್ಗೆ ಕೆಲವು ಕಾನೂನು ತೊಡಕುಗಳಿದ್ದು ಅದನ್ನು ರಾಜ್ಯ ಸರ್ಕಾರದ ಮೂಲಕ ಕೇಂದ್ರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಸಂಸದರು ಮತ್ತು ನಾನು ಪ್ರಯತ್ನ ನಡೆಸುತ್ತಿದ್ದೇವೆ. ಯಾವುದೇ ಕಾರಣಕ್ಕೂ ಸ್ಥಾನಿಕ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ತಿಳಿಸಿದರು.
ಸಾಗರ ನಗರವನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ವಿಶೇಷ ಆಸಕ್ತಿ ವಹಿಸಿ ಯೋಜನೆಗಳನ್ನು ತರಲಾಗಿದೆ. ನಗರವನ್ನು ಸಂಪರ್ಕಿಸುವ ಶಿವಮೊಗ್ಗ, ಹೊಸನಗರ, ಸೊರಬ, ಜೋಗ ರಸ್ತೆಗಳನ್ನು ಚತುಷ್ಪಥ ರಸ್ತೆಯಾಗಿ ಪರಿವರ್ತನೆ ಮಾಡುವ ಕಾಮಗಾರಿ ನಡೆಯುತ್ತಿದೆ. ಅಭಿವೃದ್ದಿಗೆ ಯಾವುದೇ ಹಣಕಾಸಿನ ತೊಂದರೆ ಇಲ್ಲ ಎಂದು ಹೇಳಿದರು.
ಸಾಗರ ನಗರಸಭೆ ಸದಸ್ಯ ಟಿ.ಡಿ.ಮೇಘರಾಜ್, ಪ್ರಮುಖರಾದ ಅರುಣ ಗೌಡ, ಶಾಂತಕುಮಾರ್, ನಾರಿ ಲೋಕಪ್ಪ, ಚೇತನ, ಜ್ಯೋತಿ, ಧನರಾಜ್, ಶಿವಕುಮಾರ್, ದೇವರಾಜ್, ಲಿಂಗರಾಜ್ ಇನ್ನಿತರರು ಹಾಜರಿದ್ದರು.