ಶಿವಮೊಗ್ಗ, ಅ.04: ಗೃಹಸಚಿವರಿಗೆ ಅದೇನನಿಸಿತೋ ಗೊತ್ತಿಲ್ಲ. ಏಕಾಏಕೀ ತಮಗಮ ತವರು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಡಾ.ಬಿ.ಎಂ ಲಕ್ಷ್ಮೀ ಪ್ರಸಾದ್ ವರ್ಗಾವಣೆ ಮಾಡಿದ್ದಾರೆ.
ಇಲ್ಲಿಗೆ ನೂತನ ಎಸ್ಪಿಯಾಗಿ ಮಿಥುನ್ ಕುಮಾರ್ ಅವರನ್ನು ನೇಮಕ ಮಾಡಿದ್ದಾರೆ. ಶಿವಮೊಗ್ಗ ಕೋಮುಗಲಭೆ ಹತ್ತಿಕ್ಕಿ, ಹಿಂದೂ ಮಹಾಸಭಾ ಗಣಪನ ಶಾಂತಿಯುತ ನೆರವಣಿಗೆ ನಡೆಸಿ, ರೌಡಿಗಳನ್ನು ನಿಗ್ರಹಿಸಿದ್ದಷ್ಟೇ ಅಲ್ಲ ಜಿಲ್ಲೆಯ ಪ್ರತಿಭಾವಿತ ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಂಡು ಉಗ್ರಗಾಮಿಗಳನ್ನು ಹಿಡಿದಿದ್ದ ಜಿಲ್ಲಾ ರಕ್ಷಣಾಧಿಕಾರಿಗಳನ್ನು ಏಕಾಏಕೀಇ ವರ್ಗಾವಣೆ ಮಾಡಿದ್ದೇಕೆ ಎಂದು ಸಾರ್ವಜನಿಕ ವಲಯದಲ್ಲಿ ಬಾರೀ ಚರ್ಚೆಯಾಗುತ್ತಿದೆ.
ಶಂಕಿತ ಉಗ್ರನ ಮತ್ತೊಬ್ಬ ಆರೋಪಿಯನ್ನ ಬಂಧಿಸಿಲ್ಲ ಹಾಗೂ ಪ್ರೇಮ್ ಸಿಂಗ್ ಪ್ರಕರಣ ಇನ್ನೂ ಬಾಕಿ ಇರುವ ಸಮಯದಲ್ಲೇ ಎಸ್ಪಿ ವರ್ಗಾವಣೆ ಹಲವು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಗೃಹ ಸಚಿವರ ತವರು ಜಿಲ್ಲೆಯಲ್ಲಿ ಶಂಕಿತ ಉಗ್ರರನ್ನ ಪತ್ತೆ ಮಾಡಿ ಅವರ ಷಡ್ಯಂತರವನ್ನ ಬಯಲು ಮಾಡಿದ್ದ ಎಸ್ಪಿಯನ್ನ ಇನ್ನೂ ಒಂದಿಷ್ಟು ಕಾಲ ಉಳಿಸಿಕೊಂಡಿದ್ದರೆ, ಈ ಪ್ರಕರಣ ಒಂದು ಹಂತಕ್ಕೆ ತಂದು ಬಿಡುವ ಸಾಮರ್ಥ್ಯ ಹೊಂದಿದ್ದ ಡಾ.ಲಕ್ಷ್ಮೀ ಪ್ರಸಾದ್ ಮುಕ್ತಾಯ ಮಾಡುತ್ತಿದ್ದರು. ಆದರೆ ಈಗ ವರ್ಗಾವಣೆ ಏಕೆ ಎಂದು ಚರ್ಚೆಗಳು ಕೇಳಿಬರುತ್ತಿವೆ.
ಈಗಾಗಲೇ ಇಬ್ಬರು ಅಧಿಕಾರಿಗಳನ್ನ ಎರಡು ವರ್ಷಗಳಿಗೂ ಅಧಿಕ ಅವಧಿಯವರೆಗೆ ಎಸ್ಪಿ ಆಗಿ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ. ಅಭಿನವ್ ಖರೆ ಎರಡು ಮುಕ್ಕಾಲು ವರ್ಷದ ವರೆಗೆ ಶಿವಮೊಗ್ಗದ ಎಸ್ಪಿ ಆಗಿದ್ದರು. ಶಾಂತರಾಜ್ ಎರಡು ಕಾಲು ವರ್ಷಗಳ ವರೆಗೆ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಯಾಗಿ ಸೇವೆಸಲ್ಲಿಸಿದ್ದರು.
ಆದರೆ ಡಾ.ಬಿ.ಎಂ ಲಕ್ಷ್ಮೀ ಪ್ರಸಾದ್ ಜಿಲ್ಲಾ ರಕ್ಷಣಾಧಿಕಾರಿಯಾಗಿ ಸರಿಯಾಗಿ ಒಂದು ಮುಕ್ಕಾಲು ವರ್ಷಗಳು ತುಂಬಿಲ್ಲ ವರ್ಗಾವಣೆ ಮಾಡಲಾಗಿದೆ. ಅದೂ ಶಿವಮೊಗ್ಗದಲ್ಲಿ ಕೋಮುಗಲಭೆಯಂತಹ ಪ್ರಕರಣ ಮತ್ತು ಶಂಕಿತ ಉಗ್ರರ ಪ್ರಕರಣ ಬಾಕಿ ಇರುವಾಗಲೇ ವರ್ಗವಣೆ ಹಲವು ಅನುಮಾನಕ್ಕೂ ಕಾರಣವಾಗಿದೆ.
ಸಾಕಷ್ಟು ಅಧಿಕಾರಿಗಳು ಸಹ ಎಸ್ಪಿ ವರ್ಗಾವಣೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಏನೇ ಇರಲಿ ಪ್ರೇಮ್ ಸಿಂಗ್ ಪ್ರಕರಣದ ಆರೋಪಿ ಮೊಹ್ಮದ್ ಜಬಿಯನ್ನ ಇನ್ನೂ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವ ಪ್ರಯತ್ನದಲ್ಲಿರುವಾಗಲೇ ಮತ್ತು ಶಂಕಿತ ಉಗ್ರರಲ್ಲಿ ಮೊದಲನೆ ಆರೋಪಿ ಶಾರೀಕ್ ಪತ್ತೆ ಮಾಡುವ ಹಂತದಲ್ಲಿರುವಾಗಲೇ ಎಸ್ಪಿ ವರ್ಗಾವಣೆ ರಾಜಕೀಯ ಇಚ್ಛಾಶಕ್ತಿ ಕೊರತೆಯೂ ಎದ್ದು ಕಾಣುತ್ತಿದೆ.
ಬಹುತೇಕ ಮಾಹಿತಿಗಳು ವರ್ಗಾವಣೆಗೊಂಡಿರುವ ಎಸ್ಪಿಯ ಬಳಿಯೇ ಇರುವಾಗ ಇವರ ವರ್ಗಾವಣೆಯಿಂದ ಈ ಪ್ರಕರಣಗಳು ಹಳ್ಳ ಹಿಡಿಯುವುದರಲ್ಲಿ ಯಾವುದೇ ಸಂದೇಹವೇ ಇಲ್ಲ. ಒಟ್ಟಿನಲ್ಲಿ ಎಸ್ಪಿ ವರ್ಗಾವಣೆ ತರಾತುರಿಯಲ್ಲಿ ನಡೆದಿದೆ ಎನ್ನಬಹುದು.
ನಾಳೆ ನೂತನ ಎಸ್ಪಿ ಅಧಿಕಾರ ಸ್ವೀಕಾರ
ಶಿವಮೊಗ್ಗ ಜಿಲ್ಲಾರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಲಕ್ಷ್ಮೀ ಪ್ರಸಾದ್ ಅವರನ್ನು ರಾಜ್ಯಸರ್ಕಾರ ವರ್ಗಾವಣೆ ಮಾಡಿದ್ದು, ಇವರ ಜಾಗಕ್ಕೆ ಐಪಿಎಸ್ ಅಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಅವರನ್ನು ನೇಮಿಸಲಾಗಿದೆ.ರಾಜ್ಯಸರ್ಕಾರ ನಿನ್ನೆ ಸಂಜೆ ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ಬೆಂಗಳೂರು ಸಿಐಡಿ ಎಸ್‌ಪಿ ಆಗಿದ್ದ ಮಿಥುನ್ ಕುಮಾರ್ ಅವರನ್ನು ಶಿವಮೊಗ್ಗ ಎಸ್‌ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಶಿವಮೊಗ್ಗದಿಂದ ವರ್ಗಾವಣೆಗೊಂಡಿರುವ ಲಕ್ಷ್ಮೀ ಪ್ರಸಾದ್ ಅವರಿಗೆ ಸದ್ಯ ಸ್ಥಳ ತೋರಿಸಿಲ್ಲ. 2016ರ ಬ್ಯಾಚ್‌ನಲ್ಲಿ 130ನೇ ರ್‍ಯಾಂಕ್ ಪಡೆದು ಐಪಿಎಸ್ ಅಧಿಕಾರಿಯಾಗಿರುವ ಮಿಥುನ್ ಕುಮಾರ್ ಸಿಐಡಿ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಕಡೆ ಸೇವೆ ಸಲ್ಲಿಸಿದ್ದಾರೆ.ನೂತನ ಎಸ್‌ಪಿ ನಾಳೆ ಅಧಿಕಾರ ಸ್ವೀಕರಿಸುವ ಸಾಧ್ಯತೆಯಿದೆ.