ಶಿವಮೊಗ್ಗ: ಹುಣಸೋಡು ಸ್ಪೋಟದಿಂದ ಹಾನಿಗೊಳಗಾಗಿರುವ ಮನೆಗಳ ಸಂತ್ರಸ್ಥರಿಗೆ ತಕ್ಷಣವೇ ತಕ್ಷಣವೇ ಪರಿಹಾರ ನೀಡಬೇಕೆಂದು ನೀಡಬೇಕೆಂದು ಆಗ್ರಹಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆ ಇಂದು ಪ್ರತಿಭಟನೆಯ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
2021 ರ ಜನವರಿ 21 ರಂದು ಹುಣಸೋಡು ಸ್ಪೋಟ ನಡೆದಿದ್ದು, ಈ ಸ್ಪೋಟದಿಂದ ಸುತ್ತಮುತ್ತಲಿನ ಅನೇಕ ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿದ್ದು, ಮನೆಗಳ ಗೋಡೆಗಳು ಬಿರುಕು ಬಿಟ್ಟು, ಛಾವಣಿ ಹಾರಿ ಹೋಗಿದ್ದು, ಅನೇಕ ಮನೆಗಳಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಸ್ಪೋಟದಿಂದ ಹಾನಿಯಾಗಿತ್ತು. ತಮ್ಮದಲ್ಲದ ತಪ್ಪಿನಿಂದ ಗೆಜ್ಜೆನಹಳ್ಳಿ, ಹನುಮಂತ ನಗರ, ಹುಣಸೋಡು, ಅಬ್ಬಲಗೆರೆ, ಬಸವನಗಂಗೂರು, ಚನ್ನಮುಂಬಾಪುರ, ಬೊಮ್ಮನಕಟ್ಟೆ, ಕಲ್ಲಗಂಗೂರು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಲಕ್ಷಾಂತರ ರೂ ಮೊತ್ತದ ಆಸ್ತಿ, ಪಾಸ್ತಿ ಕಳೆದುಕೊಂಡಿದ್ದರು ಎಂದು ಪ್ರತಿಭಟನಾಕಾರರು ತಿಳಿಸಿದರು.
ಸುಮಾರು 850 ಸಂತ್ರಸ್ಥರು ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಇಂಜಿನಿಯರ್ ವಿಭಾಗದ ಅಧಿಕಾರಿಗಳು ಮನೆಗಳು ಶೇ. 10 ರಷ್ಟು ಹಾನಿಯಾಗಿರುವುದಾಗಿ ವರದಿ ನೀಡಿದ್ದಾರೆ. ಘಟನೆಯಲ್ಲಿ ಕಾಣೆಯಾದವರ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ. ಜೊತೆಗೆ ಒಂದು ವರ್ಷ ಹತ್ತು ತಿಂಗಳು ಕಳೆದರೂ ಇಲ್ಲಿವರೆಗೆ ಸಂತ್ರಸ್ಥರಿಗೆ ಪರಿಹಾರ ಸಿಕ್ಕಿಲ್ಲ ಎಂದು ದೂರಿದರು.
ಜಿಲ್ಲಾಡಳಿತ ತಕ್ಷಣವೇ ಸಂತ್ರಸ್ಥರಿಗೆ ಪರಿಹಾರ ನೀಡಬೇಕು. ಮತ್ತು ಮೇಲ್ಕಂಡ ಗ್ರಾಮಗಳ ಸಮೀಪದಲ್ಲಿರುವ ಕ್ವಾರೆಗಳು, ಕ್ರಷರ್ ಗಳನ್ನು ಮುಚ್ಚಿಸಬೇಕು. ಇಲ್ಲವಾದರೆ ಸಂತ್ರಸ್ಥರ ಜೊತೆಯಲ್ಲಿ ಉಗ್ರ ಹೋರಾಟ, ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ಗೋ. ರಮೇಶ್ ಗೌಡ, ಜಿಲ್ಲಾಧ್ಯಕ್ಷ ಸಂತೋಷ್, ಪ್ರಮುಖರಾದ ದೇವೇಂದ್ರಪ್ಪ, ಅಸ್ಲಾಂ, ನಯನಾ ರಾಜು, ರಾಜಮ್ಮ, ಪುಷ್ಪಾ, ಫಯಾಜ್, ರಾಜು, ಆಸೀಫ್, ಲಕ್ಷ್ಮಣ, ಕುಮಾರ್, ಪ್ರೇಮಾ ಮುಂತಾದವರಿದ್ದರು