Site icon TUNGATARANGA

ಶಿವಮೊಗ್ಗ/ ಬರೊಬ್ಬರಿ 90ರ ಸನಿಹದ ಅಕ್ಕ-ತಂಗಿಯರ ದಸರಾ ಬೊಂಬೆ ಪ್ರದರ್ಶನ (ಇದು ನಿಮ್ಮ ತುಂಗಾತರಂಗದಲ್ಲಿ ಮಾತ್ರ)


ತುಂಗಾತರಂಗ ಸ್ಪೆಷಲ್ ಸ್ಟೋರಿ


20 ವರ್ಷ ದಾಟುವಷ್ಟರಲ್ಲಿ ಮೈ, ಕೈ ನೋವು, ಸುಸ್ತು ಎಂದು ನೆಪ ಹೇಳುತ್ತಾ ಕಾಲ ಕಳೆಯುವ ಇಂದಿನ ಯುವ ಪೀಳಿಗೆಗೆ ಈ ವೃದ್ದ ಮಹಿಳೆಯರಿಬ್ಬರ ಸಾಧನೆ ಮಾದರಿಯಾಗಲೇಬೇಕು. ಅದರಲ್ಲೂ ಹಬ್ಬ ಹರಿದಿನಗಳು, ಆಚರಣೆಗಳು, ನಮ್ಮ ಸಂಸ್ಕೃತಿ ಸಂಪ್ರದಾಯದ ಬಗ್ಗೆ ಒಂದಿಷ್ಟು ಅರಿವಿಲ್ಲದ ಹೆಣ್ಣು ಮಕ್ಕಳಿಗೆ ಇದು ಅತ್ಯಂತ ವಿಶೇಷವಾಗಿ ಮಾರ್ಗದಶಿಯಾಗುವಂತಹುದು.


ಏನಪ್ಪಾ ವಿಷ್ಯ ಇದು ಎಂದುಕೊಂಡಿದ್ದೀರಾ? ಶಿವಮೊಗ್ಗ ನಗರದ ಪ್ರಮುಖ ಸ್ಥಳದಲ್ಲಿ ಈಗಲೂ ಅಕ್ಕತಂಗಿಯರಿಬ್ಬರೂ ವಾಸವಾಗಿರುವ ಮನೆಯಲ್ಲಿ ಪ್ರತಿ ಬಾರಿ ದಸರಾ ಆಚರಣೆಯನ್ನು ಅತ್ಯಂತ ವಿಶೇಷ ರೀತಿಯಲ್ಲಿ ಮಾಡುತ್ತಾರೆ. ಇಲ್ಲಿ ವಿಶೇಷ ಏಕೆಂದರೆ ಇಬ್ಬರು ಮಹಿಳೆಯರ ವಯಸ್ಸು 90ರ ಸಮೀಪಕ್ಕೆ ಬಂದಿದೆ ಹಾಗಾಗಿ ಇಂದಿನ ಯುವ ಪೀಳಿಗೆಗೆ ಹಾಗೂ ಈಗಿನ ಹೆಣ್ಣು ಮಕ್ಕಳಿಗೆ ಇದೊಂದು ದಾರಿದೀಪವಾಗವಲ್ಲ ಮಾಹಿತಿ.


ಶಿವಮೊಗ್ಗ ನಗರದಲ್ಲಿ 85 ವರ್ಷ ದಾಟಿದ ಅಕ್ಕತಂಗಿಯರಿಬ್ಬರೂ ಈಗಲೂ ದಸರಾದಲ್ಲಿ ಬೊಂಬೆ ಇಡುವ ಸಂಭ್ರಮದ ನಡುವೆ ಮುಳುಗಿದ್ದಾರೆ. ಪ್ರತಿ ವರ್ಷ ಅವರ ಈ ದಸರಾ ಆಚರಣೆ ಅತ್ಯಂತ ವಿಶಿಷ್ಟ ಹಾಗೂ ವಿಭಿನ್ನ ಪ್ರಯತ್ನ. ತಾಯಿ ಆಚರಿಸುತ್ತಿದ್ದ ಕಾರ್ಯಕ್ರಮವನ್ನು ಅಂದಿನಿಂದಲೂ ಇಂದಿಗೂ ನಡೆಸುತ್ತಾ ಬಂದಿರುವ ಈ ಮಹಿಳೆಯರ ವಿಶೇಷ ಹಾಗೂ ರೋಚಕ ಕಥೆಯನ್ನು ನಿಮ್ಮ ಮುಂದಿಡುವ ಚಿಕ್ಕ ಪ್ರಯತ್ನ ಇದಾಗಿದೆ.


ಶಿವಮೊಗ್ಗ ನಗರದ ಬಸವನಗುಡಿ ಎರಡನೇ ತಿರುವಿನ ನಿವಾಸಿಗಳಾದ ಬಿ.ವಿ. ರುಕ್ಮಿಣಿಯಮ್ಮ ಹಾಗೂ ಬಿ.ವಿ ನಾಗರತ್ನಮ್ಮ ಎಂಬ ಅಕ್ಕತಂಗಿಯರು ವಾಸಿಸುತ್ತಿರುವ ತಮ್ಮ ಮನೆಯಲ್ಲಿ ಸುಮಾರು 80ಕ್ಕೂ ಹೆಚ್ಚು ವರುಷಗಳಿಂದ ಸಂಗ್ರಹ ಮಾಡಿರುವ ಅಪರೂಪದ ಗೊಂಬೆಗಳನ್ನು ಈ ದಸರಾ ಆಚರಣೆ ಸಂದರ್ಭದಲ್ಲಿ ಅತ್ಯಂತ ವೈಶಿಷ್ಟ್ಯವಾಗಿ ಪ್ರದರ್ಶಿಸುತ್ತಾರೆ. ಬೊಂಬೆ ಇಡುವ ಈ ಕಾರ್ಯ ಶಿವಮೊಗ್ಗ ನಗರದಲ್ಲಿ ಇದು ಅತ್ಯಂತ ವಿಶೇಷವೇ ಹೌದು.


89 ವರ್ಷ ವಯಸ್ಸಿನ ನಿವೃತ್ತ ಶಿಕ್ಷಕಿ ರುಕ್ಮಿಣಿಯಮ್ಮ ಅವರಿಗೆ ಅವರ ತಂಗಿ 88 ವರ್ಷ ವಯಸ್ಸಿನ ನಾಗರತ್ನಮ್ಮ ಸಾತ್ ನೀಡಿದ್ದಾರೆ.
ಅವಿವಾಹಿತರಾಗಿರುವ ಇಬ್ಬರೂ ಸೇರಿ ದಸರಾ ಆಚರಣೆಯಲ್ಲಿ ಬೊಂಬೆಗಳನ್ನು ಜೋಡಿಸುತ್ತಾರೆ. ಸುಮಾರು ಸಾವಿರದ ಐನೂರಕ್ಕೂ ಹೆಚ್ಚು ಬೊಂಬೆಗಳು ಅತ್ಯಂತ ವಿಭಿನ್ನ. ರಾಮಾಯಣ , ಮಹಾಭಾರತ, ಭಗವದ್ಗೀತೆ ಸೇರಿದಂತೆ ಎಲ್ಲಾ ಹಿಂದೂ ಸಂಪ್ರದಾಯದ ಘಟನಾವಳಿಗಳನ್ನು ಸೂಚಿಸುವ, ಭಗವಂತನನ್ನು ಅಂದರೆ ಎಲ್ಲಾ ಬಗೆಯ ದೈವ ಸ್ವರೂಪದ ಬೊಂಬೆಗಳು, ಪ್ರಕೃತಿ, ಪರಿಸರ, ಪ್ರಾಣಿಗಳು, ಪಕ್ಷಿಗಳು ಈ ಅಲಂಕಾರದಲ್ಲಿ ಅತ್ಯಂತ ವಿಶೇಷವಾಗಿ ಗಮನಸೆಳೆಯುತ್ತವೆ.
ದಸರಾ ಆಚರಣೆಯ ಈ ಬೊಂಬೆ ಪ್ರದರ್ಶನದ ಬಗ್ಗೆ ಅತ್ಯಂತ ಖುಷಿಯಿಂದ ಹೇಳುವ ರುಕ್ಮಿಣಿ ಎಂಬ ಅವರು ನಾನು ಎಂಟು ವರ್ಷದವಳಿದ್ದಾಗ ಅಮ್ಮನೊಂದಿಗೆ ಆರಂಭಿಸಿದ್ದ ಈ ಬೊಂಬೆ ಪ್ರದರ್ಶನವನ್ನು ಈಗಲೂ ಅತ್ಯಂತ ಸಂತಸದಿಂದ ಮಾಡುತ್ತೇನೆ. ನಿಜವಾದ ಖುಷಿ ಆನಂದ ಇಲ್ಲಿ ಸಿಗುತ್ತದೆ. ಇಲ್ಲಿ ನಾನು ಹಾಗೂ ನನ್ನ ತಂಗಿ ಇಬ್ಬರೂ ಜೊತೆಯಾಗಿದ್ದು, ಸಹೋದರರು ಬಂದು ಹೋಗುತ್ತಾರೆ. ಶಿಕ್ಷಕ ವೃತ್ತಿಯ ಜೊತೆಯಲ್ಲಿ ಬೊಂಬೆ ಪ್ರದರ್ಶನದ ಈ ಕಾರ್ಯಕ್ರಮ ನನ್ನ ಮನದಾಳದಲ್ಲಿ ಅತ್ಯಂತ ಇಷ್ಟದ ಕಾರ್ಯ ಎಂದರು.


ಯುವ ಪೀಳಿಗೆಗೆ ಕಿವಿಮಾತು ಓದು, ಬರಹ, ಕಲಿಕೆಯಲ್ಲಿ ಪ್ರತಿಷ್ಠಿತ ಶಾಲಾ-ಕಾಲೇಜುಗಳನ್ನು ಗುರುತಿಸುವ ಮಟ್ಟಕ್ಕೆ ಬೆಳೆದಿರುವ ಇಂದಿನ ಕಾಲದ ಯುವ ಪೀಳಿಗೆ, ತಮ್ಮ ದೇಶ ಧರ್ಮ, ಸಂಸ್ಕೃತಿ ಆಚರಣೆ ಸಂಪ್ರದಾಯಗಳು ಹಾಗೂ ಬದುಕಿನ ಹಿಂದಿನ ನೆನಪುಗಳ ಬಗ್ಗೆ ಒಂದಿಷ್ಟೂ ಚಿಂತಿಸದಿರುವುದು. ಅತ್ಯಂತ ಬೇಸರದ ಸಂಗತಿ.
ಈ ಸಾಧಕ ಮಹಿಳೆಯರಿಬ್ಬರೂ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನವೇ ಹೌದು.


ಮಾಹಿತಿ ಸಂಗ್ರಹ: ಮಂಜುನಾಥ್, ಮೆಸ್ಕಾಂ, ಶಿವಮೊಗ್ಗ,
ಬರೆದದ್ದು ನಿಮ್ ಸ್ವಾಮಿ

Exit mobile version