Site icon TUNGATARANGA

ನಿಮ್ಮ ತುಂಗಾತರಂಗ ಸಾಹಿತ್ಯ ಲೋಕದಲ್ಲಿ “ಕವನ”ಗಳ ಜಲಧಾರೆ..!

.

ಪ್ರೀತಿ ಹಣತೆ


ರಕ್ತದ ಕೆಂಪನೆಲ್ಲಾ ವಿವರ್ಣವಾಗಿಸಿಬಿಡು
ಆಗಸದ ನೀಲಿಯ
ಸಾಂದ್ರೀಕರಿಸಿ
ಹೃದಯಗಳೊಳಗೆ  ತುಂಬಿಬಿಡುವೆನು

ಹೃದಯ ಕವಾಟಗಳ
ತೆರೆದಿಟ್ಟು ಬಿಡು
ಗಂಗೆ ಯಮುನೆಯರ ಕಾವೇರಿಯರ  ಹರಿಸಿ
ಹೃದಯವ..’ಆ’ ನಂದಗೋಕುಲವಾಗಿಸುವೆನು

ಉದ್ಗ್ರಂಥಗಳ ಉದ್ಧರಿಸದೇ
ಮನಸಿನ ಕಿವಿಗಳೆರಡು ತೆರೆದಿಟ್ಟು ಬಿಡು
ಮನುಜತೆಯ ಮಂತ್ರಗಳ ಉಸುರಿ
ನಿನ್ನೊಳಗಿನ ರಾಕ್ಷಸನ ಮನುಜನಾಗಿದೇ ಬಿಡೆನು

ಕಣ್ಣುಗಳ‌ ರೆಪ್ಪೆಗಳ ತೆರೆಯ
ಒಂದೊಮ್ಮೆ ಸರಿಸಿಬಿಡು
ಕತ್ತಲೆಯ ಕರಗಿಸಲು
ಪ್ರೀತಿ ಹಣತೆಯೇ  ನಾನಾಗುವೆನು

***ಮಹಮ್ಮದ್ ರಫೀಕ್ ಕೊಟ್ಟೂರು

ಪಿತೃಪಕ್ಷ

ತಂದೆತಾಯಿ ಸೇವೆ ಮಾಡಲೇಬೇಕು
ಹುಟ್ಟಿದ ಸಾರ್ಥಕತೆ ಇಲ್ಲಿ ಆಗಬೇಕು
ಜೀವಕೊಟ್ಟು ಜೀವನ ಸವೆಸುವರು
ಮಕ್ಕಳಿಗಾಗಿ ಸಾವರೆಗೂ ದುಡಿವರು
.

ಭಾದ್ರಪದ ಮಾಸದ ಕೃಷ್ಣಪಕ್ಷ ಬರಲು
ಮಹಾಲಯ ಅಮಾವಾಸ್ಯೆ ಪಿತೃಪಕ್ಷವಾಗಲು
ಹುಟ್ಟಿದ ಮನುಜನಿಗೆ ಸಂಸ್ಕಾರಗಳು ಬೇಕು
‘ಶ್ರಾದ್ಧ ಕರ್ಮ ಸಂಸ್ಕಾರ’ ಮಾಡಲೇಬೇಕು.

ಶ್ರದ್ಧೆಯಿಂದ ಮಾಡುವ ಮಾತಾಪಿತಾರಾಧನೆ
ಗತಿಸಿರುವ ಆತ್ಮಗಳಿಗೆ ಶಾಂತಿ ಸಮಾರಾಧನೆ
ಮಡಿದ ತಂದೆ ತಾಯಿ ಪಿತೃ ದೇವತೆಗಳು
ಶ್ರಾದ್ಧದಲ್ಲಿ ತಿಲ ತರ್ಪಣ ಮಾಡುವರು.

ನೋಡಿ ನವಿಲಾಗಿ ನರ್ತಿಸಿದನು ಇಂದ್ರನು
ಹಾಲಂತೆ ಶುಭ್ರ ಹಂಸವಾದನು ವರುಣ
ಪಿಂಡ ತಿನ್ನಲು ಕಾಗೆಯಾದ ಯಮನು
ಶ್ರದ್ಧೆಯಿಂದ ಶ್ರಾದ್ಧ ಮಾಡಲಿ ಮನುಜನು.

ರಚನೆ:-
ಸಂತೋಷ್ ಬಿದರಗಡ್ಡೆ
ಶಿಕ್ಷಕ ಸಾಹಿತಿಗಳು,

ಸುಂದರ ಅನುಬಂಧ

ಸ್ನೇಹವೆಂಬುದೊಂದು ಸ್ವಚ್ಛಂದ ಹಾಡು
ಸ್ನೇಹಿತರಾಗಲು ಬೇಕಿಲ್ಲ ಯಾವ ಕಟ್ಟುಪಾಡು
ರಕ್ತ ಸಂಬಂಧಕೂ ಸಾಟಿಯಿರದ ಈ ಬಂಧ
ಸಹೋದರತೆಗೂ ಮೀರಿದ ಸುಂದರ ಅನುಬಂಧ

ಅಂತರಾಳವ ಅರಿವವನೇ ನಿಜ ಸ್ನೇಹಿತ
ಕಷ್ಟಗಳೆಲ್ಲ ಕರಗುವವು ಜೊತೆಯಿರೆ ಸನ್ಮಿತ್ರ
ಕೈಯಲ್ಲಿ ಕೈ ಬೆಸೆದ ನಂಬಿಕೆಯ ಬಂಧನ
ಸ್ನೇಹದ ತಂಪಿನಲಿ ಬದುಕು ನಂದನವನ

ಸ್ನೇಹದಲ್ಲಿದೆ ಬದುಕಿನ ನವರಸ
ಸ್ನೇಹಿತರಿಲ್ಲದ ಜೀವನವೇ ನೀರಸ
ಸುಖದುಃಖಗಳಲ್ಲಿ ಸ್ನೇಹಿತರ ಒಡನಾಟ
ಮರೆಸುವುದು ಜಗದ ಎಲ್ಲ ಜಂಜಾಟ

ಜಾತಿ ಮತ ಬೇಧಗಳು ಸ್ನೇಹಿತರಲ್ಲಿಲ್ಲ
ಸ್ನೇಹದಲಿ ಸ್ನೇಹಿತರೇ ಬಂಧುಬಳಗವೆಲ್ಲಾ
ಬಾಳ ಕೂಟದಲ್ಲಿ ಸ್ನೇಹದ ರಸದೌತಣ
ಆಪತ್ತಿನಲ್ಲಿ ಸ್ನೇಹಿತರ ಪ್ರಾಣವೇ ಪಣ

ಭವ್ಯ ಟಿ.ಎಸ್.
ಶಿಕ್ಷಕರು.ಹೊಸನಗರ
ಶಿವಮೊಗ್ಗ

Exit mobile version