Site icon TUNGATARANGA

ನಗರದಲ್ಲಿ ನಡೆಯುವ ಅದ್ದೂರಿ ದಸರಾಗೆ “ಭರ್ಜರಿ” ಸಿದ್ದತೆ ಸುದ್ದಿಗೋಷ್ಠಿಯಲ್ಲಿ ಮೇಯರ್ ಸುನೀತಾ ಅಣ್ಣಪ್ಪ ವಿವರ

ಶಿವಮೊಗ್ಗ ಮಹಾನಗರ ಪಾಲಿಕೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಸೆ.೨೬ ರಿಂದ ಅ.೫ ರವರೆಗೆ ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ-೨೦೨೨ನ್ನು ಆಯೋಜಿಸಲಾಗಿದ್ದು, ೧೦ ದಿನಗಳ ಕಾಲ ಅದ್ದೂರಿ ದಸರಾ ಆಚರಿಸಲಾಗುವುದು ಎಂದು ಮಹಾ ನಗರ ಪಾಲಿಕೆ ಮಹಾಪೌರರಾದ ಸುನೀತಾ ಅಣ್ಣಪ್ಪ ತಿಳಿಸಿದರು.


ಅವರು ಇಂದು ಮಹಾನಗರ ಪಾಲಿಕೆ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಸೆ.೨೬ರ ಬೆಳಿಗ್ಗೆ ೧೧ ಗಂಟೆಗೆ ಕೋಟೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾನಪದ ಕಲಾವಿದೆ, ಪರಿಸರ ಪ್ರೇಮಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ತುಳಸಿಗೌಡ ದಸರಾ ಉದ್ಘಾಟನೆ ನೆರವೇರಿಸಲಿದ್ದಾರೆ. ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಇದೇ ಸಂದರ್ಭದಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದರು.


ಅಧ್ಯಕ್ಷತೆಯನ್ನು ಮೇಯರ್ ಸುನೀತಾ ಅಣ್ಣಪ್ಪ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ, ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಕೆ.ಎಸ್. ಈಶ್ವರಪ್ಪ, ಕೆ.ಬಿ.ಅಶೋಕ್ ನಾಯ್ಕ, ಆಯನೂರು ಮಂಜುನಾಥ್, ಎಸ್.ಎಲ್.ಬೋಜೇಗೌಡ, ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಭಾರತಿಶೆಟ್ಟಿ, ಪಾಲಿಕೆ ಉಪಮಹಾಪೌರ ಶಂಕರ್‌ಗನ್ನಿ, ಇನ್ನಿತರರು ಮತ್ತು ಎಲ್ಲ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.


ಶಿವಮೊಗ್ಗ ದಸರಾಕ್ಕೆ ಹಲವು ವಿಶೇಷತೆಗಳಿವೆ. ಮೈಸೂರು ಹೊರತುಪಡಿಸಿದರೆ ಶಿವಮೊಗ್ಗದಲ್ಲಿ ಅತಿ ವಿಜೃಂಭಣೆಯಿಂದ ದಸರಾ ಆಚರಿಸಲಾಗುತ್ತಿದೆ. ಮಹಿಳಾ ದಸರಾ, ದಸರಾ ಚಲನಚಿತ್ರೋತ್ಸವ, ಸಾಂಸ್ಕೃತಿಕ ದಸರಾ-ರಂಗ ದಸರಾ, ಯುವ ದಸರಾ, ಯಕ್ಷ ದಸರಾ, ಪರಿಸರ ದಸರಾ, ರೈತ ದಸರಾ, ಕಲಾ ದಸರಾ, ಯೋಗ ದಸರಾ, ಆಹಾರ ದಸರಾ ಎಂದು ನಾಡ ಹಬ್ಬವನ್ನು ವಿವಿಧ ಆಯಾಮಗಳಲ್ಲಿ ಆಚರಿಸಲಾಗುವುದು ಎಂದರು.


ಸೆ.೨೬ರಂದು ಮಹಿಳಾ ದಸರಾ, ಸೆ.೨೭ರಂದು ದಸರಾ ಚಲನಚಿತ್ರೋತ್ಸವ, ರಂಗ ದಸರಾ, ಸೆ.೨೬ರಂದು ಯುವ ದಸರಾ, ಸೆ.೨೭-೨೮ರಂದು ಸಾಂಸ್ಕೃತಿಕ ದಸರಾ, ಅ.೩ ಮತ್ತು ೪ರಂದು ಕುವೆಂಪು ರಂಗಮಂದಿರದಲ್ಲಿ ಯಕ್ಷ ದಸರಾ ಕಾರ್ಯಕ್ರಮವನ್ನು ನಡೆಯಲಿದೆ. ಹಾಗೂ ಸೆ.೨೭ರಂದು ರೈತ ದಸರಾ, ಸೆ.೨೮ರಂದು ಕಲಾ ದಸರಾ, ಮಕ್ಕಳ ದಸರಾ, ಅ.೦೨ರಂದು ಯೋಗ ದಸರಾ, ಸೆ.೨೪ರಂದು ಆಹಾರ ದಸರಾ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಏರ್ಪಡಿಲಾಗಿದೆ.


ಅ.೫ರ ಮಧ್ಯಾಹ್ನ ೨.೩೦ಕ್ಕೆ ಶಿವಪ್ಪನಾಯಕ ಅರಮನೆ ಆವರಣದಿಂದ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಬೆಳ್ಳಿ ಮಂಟಪದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಬೆಳ್ಳಿ ವಿಗ್ರಹದ ವೈಭವದ ಅಂಬಾರಿ ಮೆರವಣಿಗೆಯೂ ಫ್ರೀಡಂಪಾರ್ಕ್ ವರೆಗೆ ನಡೆಯಲಿದ್ದು, ಮೇಯರ್ ಸುನೀತಾ ಅಣ್ಣಪ್ಪ ಉದ್ಘಾಟಿಸಲಿದ್ದಾರೆ. ಸಂಜೆ ೬.೩೦ಕ್ಕೆ ತಹಶೀಲ್ದಾರ್ ಡಾ.ಎನ್.ಜೆ.ನಾಗರಾಜ್ ಅಂಬುಛೇದನ ಮಾಡಲಿದ್ದಾರೆ ಎಂದರು.
ದಸರಾ ಉತ್ಸವದ ಯಶಸ್ಸಿಗೆ ೧೪ ಸಮಿತಿಗಳನ್ನು ರಚಿಸಲಾಗಿದ್ದು, ೨.೨೦ ಕೋಟಿ ರೂ.ವೆಚ್ಚದಲ್ಲಿ ದಸರಾ ಉತ್ಸವ ಆಯೋಜಿಸಲಾಗಿದೆ.
(ಈ ಬಾರಿ ಶ್ರೀ ಚಾಮುಂಡೇಶ್ವರಿ ದೇವಿಯ ಬೆಳ್ಳಿಯ ವಿಗ್ರಹಕ್ಕೆ ಸುಮಾರು ೪ಲಕ್ಷ ರೂ. ವೆಚ್ಚದಲ್ಲಿ ಮಾಡಿಸಿರುವ ಬಂಗಾರದ ಕಿರೀಟ ವನ್ನು ಧರಿಸಲಾಗುವುದು ಎಂದರು.


ಪತ್ರಿಕಾಗೋಷ್ಠಿಯಲ್ಲಿ ಮಹಾನಗರಪಾಲಿಕೆ ಉಪಮೇಯರ್ ಶಂಕರ್ ಗನ್ನಿ, ಸದಸ್ಯರಾದ ಹೆಸ್.ಎನ್.ಚನ್ನಬಸಪ್ಪ, ಸುವರ್ಣ ಶಂಕರ್, ರೇಖಾ ರಂಗನಾಥ್, ಹೆಚ್.ಸಿ.ಯೋಗೀಶ್, ಲಕ್ಷ್ಮಿಶಂಕರ್ ನಾಯಕ್, ಮಂಜುಳಾ ಶಿವಣ್ಣ, ಆಶಾಚಂದ್ರಪ್ಪ, ಅನಿತಾ ರವಿಶಂಕರ್, ಆರತಿ ಅ.ಮ.ಪ್ರಕಾಶ್, ಸುರೇಖಾ ಮುರುಳೀಧರ್, ಪ್ರಭಾರ ಆಯುಕ್ತ ಕೆ.ಮಾಯಣ್ಣಗೌಡ ಇನ್ನಿತರರು ಉಪಸ್ಥಿತರಿದ್ದರು.

Exit mobile version