Site icon TUNGATARANGA

ಭದ್ರಾವತಿ | ನಗರಸಭೆ ನೂತನ ಅಧ್ಯಕ್ಷರಾಗಿ ಅನುಸುಧಾ ಮೋಹನ್ ಆಯ್ಕೆ

ಭದ್ರಾವತಿ: ಭದ್ರಾವತಿ ನಗರಸಭೆ ನೂತನ ಅಧ್ಯಕ್ಷರಾಗಿ ಅನುಸುಧಾ ಮೋಹನ್ ಇಂದು ಆಯ್ಕೆಯಾಗಿದ್ದಾರೆ.
ನಗರಸಭೆ ಸಭಾಂಗಣದಲ್ಲಿ ಇಂದು ನಡೆದ ಚುನಾವಣೆಯಲ್ಲಿ ೧೩ನೇ ವಾರ್ಡ್ ಸದಸ್ಯರಾದ ಕಾಂಗ್ರೆಸ್ ಪಕ್ಷದ ಅನುಸುಧಾ ಮೋಹನ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.


ಚುನಾವಣಾಧಿಕಾರಿ ಎಸ್.ಡಿ. ದೊಡ್ಡೇಗೌಡರವರಿಗೆ ಅಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆಯನ್ನು ಅನುಸುಧಾ ಇಂದು ಮುಂಜಾನೆ ಸಲ್ಲಿಸಿದ್ದರು. ಜಿಲ್ಲಾಧಿಕಾರಿಗಳ ಸಂದೇಶದಂತೆ ಇಂದು ಮಧ್ಯಾಹ್ನ ನಡೆದ ಚುನಾವಣೆಯಲ್ಲಿ ಸದಸ್ಯರು ಕೈ ಎತ್ತುವ ಮೂಲಕ ಮತ ಚಲಾಯಿಸಿದರು.


ಶಾಸಕ ಬಿ.ಕೆ. ಸಂಗಮೇಶ್ವರ್ ಅವರ ಉಪಸ್ಥಿತಿಯಲ್ಲಿ ಅನುಸುಧಾ ಮೋಹನ್ ಅವರನ್ನು ನೂತನ ಅಧ್ಯಕ್ಷೆಯಾಗಿ ಘೋಷಣೆ ಮಾಡಲಾಯಿತು.


ನಗರಸಭೆ ಅಧಿಕಾರದ ಚುಕ್ಕಾಣಿಯನ್ನು ಕಾಂಗ್ರೆಸ್ ಹಿಡಿದಿದ್ದು, ಆಂತರಿಕ ಒಪ್ಪಂದದಂತೆ ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿರುವ ಅಧ್ಯಕ್ಷಗಿರಿಗೆ ಮೊದಲ ಹತ್ತು ತಿಂಗಳ ಅವಧಿಯಲ್ಲಿ ಗೀತಾ ರಾಜ್‌ಕುಮಾರ್ ಅಧ್ಯಕ್ಷರಾಗಿದ್ದರು. ಎರಡನೆಯ ಅವಧಿಗೆ ಅನುಸುಧಾ ಮೋಹನ್ ಆಯ್ಕೆಯಾಗಿದ್ದಾರೆ.


ಪಕ್ಷದ ತಾಲೂಕು ಅಧ್ಯಕ್ಷ ಟಿ. ಚಂದ್ರೇಗೌಡ, ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುಧೀರ್ ಕುಮಾರ್ ಸದಸ್ಯರಾದ ಮಣಿ, ಗೋವಿಂದ ಸ್ವಾಮಿ, ಮೋಹನ್, ಪೌರಾಯುಕ್ತ ಮನುಕುಮಾರ್ ಉಪಸ್ಥಿತರಿದ್ದರು.
ನೂತನವಾಗಿ ಆಯ್ಕೆಯಾದ ಅಧ್ಯಕ್ಷರಿಗೆ ಶಾಸಕ ಬಿ.ಕೆ. ಸಂಗಮೇಶ್ವರ್ ಅಭಿನಂದನೆ ಸಲ್ಲಿಸಿದರು.

Exit mobile version