Site icon TUNGATARANGA

BREAKING NEWS ಶಿವಮೊಗ್ಗ ಬೊಮ್ಮನಕಟ್ಟೆಯ ಆಶ್ರಯ ನಿವೇಶನಗಳು ರದ್ದು!


ಶಿವಮೊಗ್ಗ,: ಮಹಾನಗರಪಾಲಿಕೆಯ ಆಶ್ರಯ ಯೋಜನೆಯಡಿ, ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ 1997 ನೇ ಸಾಲಿನಲ್ಲಿ ‘ಎ’ ಇಂದ ‘ಜಿ’ ಬ್ಲಾಕ್‍ವರೆಗೆ ನಿವೇಶನರಹಿತರಿಗೆ ನಿವೇಶನ ಹಂಚಲಾಗಿದ್ದು, ಫಲಾನುಭವಿಗಳು 20 ವರ್ಷಗಳಾದರೂ ಸಹ ಮನೆ ನಿರ್ಮಿಸಿಕೊಂಡು ವಾಸವಿರುವುದಿಲ್ಲ. ಆದ ಕಾರಣ ಆಶ್ರಯ ಸಮಿತಿ ಸಭೆ ನಡೆಸಿ, ಖಾಲಿ ಇರುವ ನಿವೇಶನಗಳ ಮಹಜರ್(ಸ್ಥಳ ಪರಿಶೀಲನಾ ವರದಿ) ಪಡೆದು, 543 ಖಾಲಿ ನಿವೇಶನಗಳನ್ನು ರದ್ದುಪಡಿಸಲಾಗಿರುತ್ತದೆ.

ಎ ಬ್ಲಾಕ್‍ನಲ್ಲಿರುವ ಒಟ್ಟು 44 ನಿವೇಶನಗಳು, ಬಿ ಬ್ಲಾಕ್‍ನಲ್ಲಿ 78, ಸಿ ಬ್ಲಾಕ್‍ನಲ್ಲಿ 97 ನಿವೇಶನಗಳು, ಡಿ ಬ್ಲಾಕ್‍ನಲ್ಲಿ 78, ಇ ಬ್ಲಾಕ್‍ನಲ್ಲಿ 51, ಎಫ್ ಬ್ಲಾಕ್‍ನಲ್ಲಿ 107 ಮತ್ತು ಜಿ ಬ್ಲಾಕ್‍ನಲ್ಲಿ 88 ಸೇರಿ ಒಟ್ಟು 543 ನಿವೇಶನಗಳು ಖಾಲಿ ಇರುತ್ತವೆ.

ನಿವೇಶನಗಳನ್ನು ಪಡೆದ ಫಲಾನುಭವಿಗಳು ನಿವೇಶನದಲ್ಲಿ ಮನೆ ನಿರ್ಮಾಣ ಮಾಡದೇ ಖಾಲಿ ಇರುವುದರಿಂದ ನಿವೇಶನದಾರರು ಹಕ್ಕುಪತ್ರದ ಹಿಂದೆ ಇರುವ ಷರತ್ತನ್ನು ಉಲ್ಲಂಘಿಸಿದ್ದು ಹಾಗೂ ತಮಗೆ ಮಂಜೂರಾಗಿರುವ ನಿವೇಶನಗಳಲ್ಲಿ ವಾಸಕ್ಕೆ ಹೋಗದೆ ತಾವುಗಳು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳದೆ ಇರುವುದು ಕಂಡು ಬಂದಿರುತ್ತದೆ. ಇಂತಹ ನಿವೇಶನಗಳ ಬಗ್ಗೆ ದಿನಾಂಕ: 25-05-2022 ರಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದು, ಬಂದಿದ್ದ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲಾಗಿರುತ್ತದೆ.
ದಿನಾಂಕ : 10-08-2022 ರ ಆಶ್ರಯ ಸಭೆಯ ವಿಷಯ ಸಂಖ್ಯೆ 7/1 ರಲ್ಲಿ ತೀರ್ಮಾನಿಸಿರುವಂತೆ ಮನೆ ನಿರ್ಮಿಸಿಕೊಳ್ಳದ ಒಟ್ಟು 543 ಖಾಲಿ ನಿವೇಶನಗಳನ್ನು ರದ್ದು ಮಾಡಲಾಗಿರುತ್ತದೆ ಎಂಬುದನ್ನು ಈ ಸಾರ್ವಜನಿಕ ಪ್ರಕಟಣೆ ಮೂಲಕ ತಿಳಿಯಪಡಿಸಿದೆ ಎಂದು ಮಹಾನಗರಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
Exit mobile version