Site icon TUNGATARANGA

ಸೆ. 26 ರಿಂದ ಸಿಗಂದೂರಿನಲ್ಲಿ ನವರಾತ್ರಿ ಉತ್ಸವ/ ನಿತ್ಯ ದೀಪೋತ್ಸವ- ಶ್ರೀಗಳಿಂದ ಆಶೀರ್ವಚನ

ಪ್ರತಿನಿತ್ಯ ದೀಪೋತ್ಸವ, ಯಕ್ಷಗಾನ, ಆಶೀರ್ವಚನ, ಧಾರ್ಮಿಕ ಕಾರ್ಯಕ್ರಮ ಆಯೋಜನೆ:  ಧರ್ಮಾಧಿಕಾರಿ ಎಸ್ ರಾಮಪ್ಪ.

ಸಿಗಂದೂರು ,ಸೆ.16:
ಮಲೆನಾಡಿನ ಅಧಿದೇವತೆ ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 05 ರ ತನಕ ನವರಾತ್ರಿ ಉತ್ಸವ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಧರ್ಮದರ್ಶಿ ಡಾ ಎಸ್ ರಾಮಪ್ಪ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು,  ಈ ವರ್ಷದ ನವರಾತ್ರಿ ಸಾಕಷ್ಟು ವಿಭಿನ್ನವಾಗಿ ಆಚರಿಸಲು ಸಿದ್ಧತೆ ನಡೆಸಿರುವ ಆಡಳಿತ ಮಂಡಳಿ ನವರಾತ್ರಿ ಉತ್ಸವದ 9 ದಿನಗಳಲ್ಲಿಯೂ ಸಹ ರಾಜ್ಯದ ವಿವಿಧ ಮಠಗಳ ಸ್ವಾಮೀಜಿಗಳನ್ನು  ಆಹ್ವಾನಿಸಲಾಗಿದೆ. ಪ್ರತಿದಿನ  ಸಂಜೆ 6-30 ರಿಂದ 7-30ರವರೆಗೆ ಶ್ರೀಗಳಿಂದ ಆಶೀರ್ವಚನ , ದೀಪೋತ್ಸವ, ಯಕ್ಷಗಾನ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದ್ದಾರೆ.

ಸೆಪ್ಟೆಂಬರ್ 26 ನವರಾತ್ರಿಯ ಮೊದಲ ದಿನ ಅಲಯ ಶುದ್ಧಿಯೊಂದಿಗೆ ಶ್ರೀ ದೇವಿಗೆ ವಿಶೇಷ ಪೂಜೆ ಪಂಚಾಮೃತ ಅಭಿಷೇಕ. ಮಹಾಭಿಷೇಕ. ಅಲಂಕಾರ ಪೂಜೆ, ಮಹಾ ಪೂಜೆ, ದುರ್ಗಾ ಪೂಜೆ, ಚಂಡಿಕಾ ಹವನ, ನವ ಚಂಡಿಕಾ ಹವನ ಹಾಗೂ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೇರವೇರಲಿದೆ.

ಸೆ.26 ರಂದು ಕೇರಳದ ವರ್ಕಳ ಶಿವಗಿರಿ ಮಠದ ಸತ್ಯಾನಂದತೀರ್ಥ ಶ್ರೀಗಳು ಆಗಮಿಸಿ ಆಶೀರ್ವಚನ ನೀಡಲಿದ್ದಾರೆ, ಅದೇ ದಿನ ಸಿಗಂದೂರು ಮೇಳದಿಂದ  ಚಂದ್ರಹಾಸ ಚರಿತೆ ಯಕ್ಷಗಾನ ಪ್ರದರ್ಶನವಿದೆ. ಸೆ. 27 ಕ್ಕೆ ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಮೃತ್ಯುಂಜಯ ಸ್ವಾಮೀಜಿಗಳು ಆಶಿರ್ವಚನ ನೀಡಲಿದ್ದು ಅಂದು ರಾತ್ರಿ ಚಿತ್ರಾಕ್ಷಿ ಕಲ್ಯಾಣ ಯಕ್ಷಗಾನ ಪ್ರದರ್ಶನವಿದೆ. ಸೆಪ್ಟೆಂಬರ್ 28 ಕ್ಕೆ ತಾಳಗುಪ್ಪ ಪ್ರಣವ ಪೀಠ ಕೂಡ್ಲಿಮಠದ ಶ್ರೀ ಸಿದ್ದವೀರ ಶ್ರೀಗಳ ಹಾಗೂ 30 ಕ್ಕೆ ಸೊರಬ ಮುರುಘಾ ಮಠದ ಮಹಾಂತ ಸ್ವಾಮೀಜಿಗಳು ನವರಾತ್ರಿ ಉತ್ಸವದಲ್ಲಿ ಭಾಗವಹಿಸಲಿದ್ದಾರೆ.

ಅಕ್ಟೋಬರ್ 1 ರಂದು ಕಲಬುರ್ಗಿ ಜಿಲ್ಲೆಯ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಪ್ರಣವಾನಂದ ಶ್ರೀಗಳು ಆಗಮಿಸಲಿದ್ದು ಅಕ್ಟೋಬರ್ 3ರಂದು ಸೋಲೂರು ಈಡಿಗ ಮಹಾ ಸಂಸ್ಥಾನದ ಶ್ರೀವಿಖ್ಯಾತಾನಂದ ಶ್ರೀಗಳು, ಅಕ್ಟೋಬರ್ ೪ಕ್ಕೆ ಬೆಳಗಾವಿಯ ಮಹಾಕಾಳಿ ಮಹಾ ಸಂಸ್ಥಾನದ ಸದ್ದರ್ಮ ಪೀಠದ ಅರುಣಾನಂದ ತೀರ್ಥ ಶ್ರೀಗಳು ಹಾಗೂ ಅಂತಿಮ ದಿನದ ಅಕ್ಟೋಬರ್ 5ಕ್ಕೆ ಹೊಸನಗರ ತಾಲೂಕಿನ ಸಾರಗನಜೆಡ್ಡು ಕಾರ್ತಿಕೇಯಪೀಠದ ಯೋಗೇಂದ್ರ ಶ್ರೀಗಳು ಆಗಮಿಸಲಿದ್ದು ನವರಾತ್ರಿ ಅಂತಿಮ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ನವರಾತ್ರಿ ಉತ್ಸವದ ಅಂಗವಾಗಿ ಪ್ರತಿದಿನ
ಭಕ್ತಾದಿಗಳಿಗೆ ಪೂಜೆ, ಪ್ರಸಾದ ವಿನಿಯೋಗ, ದರ್ಶನಕ್ಕೆ ಸರತಿ ಸಾಲಿನಲ್ಲಿ ಅವಕಾಶ ಕಲ್ಪಿಸಲಾಗಿದ್ದು. ಭಕ್ತರಿಗೆ ಯಾವುದೇ ಕೊರತೆ ಆಗದಂತೆ ವ್ಯವಸ್ಥೆ ಮಾಡಲಾಗಿದ್ದು
ಭಕ್ತರ ಅನುಕೂಲಕ್ಕಾಗಿ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್ ಆರ್  ತಿಳಿಸಿದ್ದಾರೆ.

Exit mobile version