ಶಿವಮೊಗ್ಗ: ಉತ್ತಮ ಆಲೋಚನೆಗಳು, ಆವಿಷ್ಕಾರಗಳ ಮೂಲಕ ಇಂಜಿನಿಯರ್ ಗಳು ಜಗತ್ತನ್ನು ಬದಲಾವಣೆಯತ್ತ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಮಹಾನಗರ ಪಾಲಿಕೆ ವಿಪಕ್ಷ ನಾಯಕಿ ರೇಖಾ ರಂಗನಾಥ್ ಹೇಳಿದರು.
ದುರ್ಗಾ ಫೌಂಡೇಷನ್ ವತಿಯಿಂದ ಇಂದು ಮೀಡಿಯಾ ಹೌಸ್ ನಲ್ಲಿ ಆಯೋಜಿಸಿದ್ದ ಸರ್ ಎಂ. ವಿಶ್ವೇಶ್ವರಯ್ಯ ಜನ್ಮದಿನದ ಅಂಗವಾಗಿ ವಿವಿಧ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಧನೆ ಸಲ್ಲಿಸಿದ ಇಂಜಿನಿಯರ್ ಗಳಿಗೆ ಸರ್ ಎಂ. ವಿಶ್ವೇಶ್ವರಯ್ಯ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನವನ್ನು ಇಂಜಿನಿಯರ್ಸ್ ದಿನವನ್ನಾಗಿ ಆಚರಣೆ ಮಾಡುತ್ತಿದ್ದು, ಅವರು ಸಮಯಪ್ರಜ್ಞೆ ಹೊಂದಿದ್ದರು. ಅರ್ಥಶಾಸ್ತ್ರಜ್ಞರೂ ಆಗಿದ್ದ ಅವರು ಅನೇಕ ಯೋಜನೆಗಳನ್ನು ನೀಡಿದ್ದಾರೆ. ಪ್ರತಿ ವರ್ಷ ಲಕ್ಷಾಂತರ ಇಂಜಿನಿಯರ್ಸ್ ಗಳು ಹೊರ ಬರುತ್ತಿದ್ದಾರೆ. ಇಂಜಿನಿಯರ್ ಗಳಿಗೆ ಪ್ರೋತ್ಸಾಹ ನೀಡಲು ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಸರ್ ಎಂ. ವಿಶ್ವೇಶ್ವರಯ್ಯನವರ ದೂರದೃಷ್ಠಿಯ ಯೋಜನೆಗಳು ಇಂದಿಗೂ ಜನರಿಗೆ ಅನುಕೂಲ ಕಲ್ಪಿಸುತ್ತಿದ್ದು, ಅವರನ್ನು ಸ್ಮರಿಸುವ ಮೂಲಕ ಗೌರವ ಸಲ್ಲಿಸಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಇಂಜಿನಿಯರ್ಸ್ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹೆಚ್.ಎನ್. ನಟೇಶ್, ಅಣ್ಣಪ್ಪ ಎನ್., ಸಂತೋಷ್ ಕೆ., ಜಿ. ಲೋಕೇಶ್, ಅಭಿಶೇಕ್ ಮಲ್ಲಿಕ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಲಿಕೆ ಮಾಜಿ ಸದಸ್ಯೆ ಗೌರಿ ಶ್ರೀನಾಥ್, ಶ್ರೀ ದುರ್ಗಾ ಫೌಂಡೇಷನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಜೆಸಿಐ ಶಿವಮೊಗ್ಗ ಭಾವನಾ ಅಧ್ಯಕ್ಷೆ ಶಾರದಾ ಶೇಷಗಿರಿ ಗೌಡ, ಜಯಮಾಲಾ ಪಿ.ವಿ. ಶೆಟ್ಟಿ, ಸುಜಾತಾ, ಯುವ ಕಾಂಗ್ರೆಸ್ ಮುಖಂಡ ಪ್ರವೀಣ್ ಕುಮಾರ್ ಎಂ., ಡಿ. ಪುಷ್ಪಕ್ ಕುಮಾರ್, ನೂತನ್ ಕುಮಾರ್ ಮೊದಲಾದವರಿದ್ದರು.