ಶಿವಮೊಗ್ಗ,ಸೆ.14:
24*7 ನೀರು ಸರಬರಾಜು ಯೋಜನೆಯ ಅವೈಜ್ಞಾನಿಕ ಕಾಮಗಾರಿಗಳ ಕುರಿತು ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಮತ್ತು ಇತರ ಸಂಘ ಸಂಸ್ಥೆಗಳು ಇಂದು ಶಾಸಕ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮತ್ತು ನೀರು ಸರಬರಾಜು ಮಂಡಳಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಕುಡಿಯುವ ನೀರಿನ ಯೋಜನೆಗೆ ನಗರದೆಲ್ಲೆಡೆ ಜಿಐ ಪೈಪ್ ಬಳಸಬಾರದು, ಮೀಟರ್ ಅಳವಡಿಸಲು ಕಾಂಕ್ರೀಟ್ ಬಳಸಬೇಕು. ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಸಮಿತಿ ಸದಸ್ಯರು ಶಾಸಕರ ಗಮನಕ್ಕೆ ತಂದರು.
ನೀರಿನ ಮೀಟರ್ ಕಳವಾಗುತ್ತಿವೆ. ಜಿಐ ಪೈಪ್ ಗಳು ತುಕ್ಕು ಹಿಡಿದಿವೆ. ಸಂಪೂರ್ಣ ಕಾಮಗಾರಿ ಅವೈಜ್ಞಾನಿಕವಾಗಿ ಮಾಡಲಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಶಾಸಕ ಕೆ.ಎಸ್. ಈಶ್ವರಪ್ಪ, 9 ಜನ ಇಂಜಿನಿಯರ್ ಗಳು ಮತ್ತು ಸಮಿತಿಯ ಕಾರ್ಯಕರ್ತರೊಂದಿಗೆ 35 ವಾರ್ಡ್ ಗಳಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಅವೈಜ್ಞಾನಿಕ ಅಳವಡಿಕೆಯನ್ನು ಸರಿಪಡಿಸಲಾಗುವುದು. ಜಿಐ ಪೈಪ್ ಇರುವೆಡೆ ಪಿವಿಸಿ ಪೈಪ್ ಅಳವಡಿಸಲು ಯೋಜಿಸಲಾಗುತ್ತಿದೆ. ಇಲಾಖೆಯ ಅಧಿಕಾರಿಗಳೊಂದಿಗೆ ಎಲ್ಲಾ ನ್ಯೂನತೆಗಳ ಬಗ್ಗೆ ಈಗಾಗಲೇ ಚರ್ಚಿಸಲಾಗಿದೆ ಎಂದರು.
24*7 ನೀರು ಸರಬರಾಜಿಗೆ ಸಂಬಂಧಿಸಿದಂತೆ ಇರುವ ಎಲ್ಲಾ ಲೋಪದೋಷಗಳ ಬಗ್ಗೆ ಸಮಗ್ರ ಮಾಹಿತಿ ಪಡೆದು ಒಂದು ತಿಂಗಳೊಳಗೆ ಸರಿಪಡಿಸಲಾಗುವುದು. ಈಗಾಗಲೇ ಶೇಕಡ 60 ರಷ್ಟು ಕಾಮಗಾರಿ ಈಗಾಗಲೇ ಮುಗಿದಿದೆ. ಇನ್ನು ಉಳಿದ ಕಾಮಗಾರಿ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಸಾಮಗ್ರಿಗಳನ್ನು ಬಳಸಲಾಗುವುದು ಎಂದರು.
ಈ ಸಂದರ್ಭದಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಕೆ.ವಿ. ವಸಂತಕುಮಾರ್, ಸತೀಶ್ ಕುಮಾರ್ ಶೆಟ್ಟಿ, ನೀರು ಸರಬರಾಜು ಮಂಡಳಿ ಅಧಿಕಾರಿಗಳಾದ ಸಿದ್ದಪ್ಪ ಮೊದಲಾದವರಿದ್ದರು