Site icon TUNGATARANGA

ಶಿವಮೊಗ್ಗ / ನೆಹರು ಕ್ರೀಡಾಂಗಣದಲ್ಲಿ ಪೌರಕಾರ್ಮಿಕರಿಗೆ ಕ್ರೀಡಾಕೂಟ ಎಲ್ಲರೂ ಸಂತೋಷದಿಂದ ಭಾಗವಹಿಸಲು ಮೇಯರ್ : ಸುನೀತಾ ಅಣ್ಣಪ್ಪ ಕರೆ

ಸದಾ ನಗರದ ಸ್ವಚ್ಛತೆಯಲ್ಲಿ ಭಾಗವಹಿಸುವ ಪೌರ ಕಾರ್ಮಿಕರು ಮತ್ತು ಒತ್ತಡದ ನಡುವೆ ಕಾರ್ಯ ನಿರ್ವಹಿಸುವ ಪಾಲಿಕೆ ಸಿಬ್ಬಂದಿಗಳಿಗೆ ಪ್ರತಿ ವರ್ಷದಂತೆ ಈ ವರ್ಷವೂ ಕ್ರೀಡಾಕೂಟ ಆಯೋಜನೆ ಮಾಡಲಾಗಿದ್ದು, ಎಲ್ಲರೂ ಸಂತೋಷದಿಂದ ಭಾಗವಹಿಸುವಂತೆ ಮೇಯರ್ ಸುನಿತಾ ಅಣ್ಣಪ್ಪ ಪೌರ ಕಾರ್ಮಿಕರಿಗೆ ಕರೆ ನೀಡಿದರು.

ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಪೂರ್ವಭಾವಿಯಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಗರದ ನೆಹರೂ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ವಿವಿಧ ಕ್ರೀಡೆಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಭಾನುವಾರ ಹೆಚ್ಚುವರಿ ಕೆಲಸ ಮಾಡಿ, ಮಂಗಳವಾರ ಅರ್ಧ ದಿನ ರಜೆ ಇದ್ದುದರಿಂದ ಇಂದು ಪೌರ ಕಾರ್ಮಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ವಿಜೇತರಿಗೆ ಪೌರ ಕಾರ್ಮಿಕರ ದಿನಾಚರಣೆಯಂದು ಸತ್ಕರಿಸಲಾಗುವುದು ಎಂದರು. 

ಸೆ. 17 ರಂದು ಪಾಲಿಕೆ ಸದಸ್ಯರು, ಅಧಿಕಾರಿಗಳು ಮತ್ತು ಪೌರ ಕಾರ್ಮಿಕರಿಗೆ ಕ್ರಿಕೆಟ್ ಟೂರ್ನಿಮೆಂಟ್ ಕೂಡ ಹಮ್ಮಿಕೊಳ್ಳಲಾಗಿದೆ. ಪಾಲಿಕೆ ಕಾರ್ಮಿಕರು ಖುಷಿಯಾಗಿರಬೇಕು ಎಂಬ ದೃಷ್ಠಿಯಿಂದಪ್ರತಿವರ್ಷ ಅವರಿಗೆ ಪ್ರವಾಸ ಕೂಡ ಹಮ್ಮಿಕೊಂಡಿದೆ. ಈ ಬಾರಿ ಮೊದಲ ಹಂತದಲ್ಲಿ ಕಾರ್ಮಿಕರು ಪ್ರವಾಸ ಮುಗಿಸಿದ್ದಾರೆ. ಉಳಿದವರಿಗೂ ಅವಕಾಶ ಮಾಡಿಕೊಡಲಾಗುವುದು ಎಂದರು. 

ಕೊರೋನಾ ಸಂದರ್ಭದಲ್ಲಿ ಪ್ರವಾಸಕ್ಕೆ ಮತ್ತು ಕ್ರೀಡಾಕೂಟಕ್ಕೆ ಬ್ರೇಕ್ ಬಿದ್ದಿತ್ತು. ಈಗ ಮತ್ತೆ ಕ್ರೀಡಾಕೂಟ, ಪ್ರವಾಸ ಆಯೋಜಿಸಿದ್ದು, ಎಲ್ಲರೂ ಭಾಗವಹಿಸುಬೇಕು. ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದರು. 

ಈ ಸಂದರ್ಭದಲ್ಲಿ ಉಪಮೇಯರ್ ಶಂಕರ್ ಗನ್ನಿ, ಪಾಲಿಕೆ ವಿಪಕ್ಷ ನಾಯಕಿ ರೇಖಾ ರಂಗನಾಥ್, ಸದಸ್ಯರಾದ ಧೀರರಾಜ್ ಹೊನ್ನವಿಲೆ, ಅನಿತಾ ರವಿಶಂಕರ್, ಆರ್.ಸಿ. ನಾಯ್ಕ್, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಮಾರಪ್ಪ, ಕಾರ್ಯದರ್ಶಿ ಗೋವಿಂದ್ ಮೊದಲಾದವರಿದ್ದರು.

Exit mobile version