Site icon TUNGATARANGA

ಭದ್ರಾವತಿ / ಭದ್ರಾವತಿ ಆಹಾರ ಇಲಾಖೆಯ ಸಹಾಯಕ ನಿರೀಕ್ಷಕರಾದ ಗಾಯಿತ್ರಿ ರವರು ಸಾವಿರಾರು ಟನ್ ಅಕ್ಕಿ ಗೋಧಿ ಪಡಿತರವನ್ನು ಸ್ವಂತಕ್ಕೆ ಬಳಸಿಕೊಂಡು ಮಾರಾಟ :ಶಶಿಕುಮಾರ್ ಗೌಡ ಆರೋಪ

ಭದ್ರಾವತಿ ನಗರದಲ್ಲಿರುವ 7 ನ್ಯಾಯಬೆಲೆ ಅಂಗಡಿ ಮಾಲೀಕರಿಂದ ಪಡಿತರ ವಿತರಣೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಂಯುಕ್ತ ಜನತಾದಳದ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಗೌಡ ಇಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಏಕಾಂಗಿಯಾಗಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಆಹಾರ ನಾಗರೀಕ ಗ್ರಾಹಕ ವ್ಯವಹಾರಗಳ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಿದರು. 

ಭದ್ರಾವತಿ ನಗರ ಪ್ರದೇಶದಲ್ಲಿರುವ 7 ನ್ಯಾಯಬೆಲೆ ಅಂಗಡಿ ಮಾಲೀಕರು ಪಡಿತರ ವಿತರಣೆ ಮಾಡುವಲ್ಲಿ ಹಾಗೂ ಭದ್ರಾವತಿ ಆಹಾರ ಇಲಾಖೆಯ ಸಹಾಯಕ ನಿರೀಕ್ಷಕರಾದ ಗಾಯಿತ್ರಿ ರವರ ಪಾಸ್ ವರ್ಡ್ ಲಾಗಿನ್ ನ ಬೆರಳಚ್ಚನ್ನು ಅಕ್ರಮವಾಗಿ ಪಡೆದುಕೊಂಡು ಸಾವಿರಾರು ಟನ್ ಅಕ್ಕಿ ಗೋಧಿ ಪಡಿತರವನ್ನು ಸ್ವಂತಕ್ಕೆ ಬಳಸಿಕೊಂಡು ಮಾರಾಟ ಮಾಡಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಭದ್ರಾವತಿಯ ಹಳೆನಗರ ಪೊಲೀಸ್ ಠಾಣೆಯಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದಾರೆ. ಸರ್ಕಾರದ ಆದೇಶದ ಪ್ರಕಾರ ಈ ಎಲ್ಲಾ 7ನ್ಯಾಯಬೆಲೆ ಅಂಗಡಿಗಳನ್ನು ಸಂಬAಧಪಟ್ಟ ಅಧಿಕಾರಿಗಳು ಸೀಲ್ ಮಾಡಿ ಸಹಕಾರ ಸಂಘಗಳ ಮುಖಾಂತರ ಪಡಿತರದಾರರಿಗೆ ಪಡಿತರ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷದಿಂದ ಈ ಮೇಲ್ಕಂಡ ಯಾವುದೇ ನ್ಯಾಯಬೆಲೆ ಅಂಗಡಿಗಳನ್ನು ಸೀಲ್ ಮಾಡದೆ ಮೂಲ ಅಂಗಡಿಗಳಲ್ಲೇ ಪಡಿತರ ವಿತರಣೆ ಮಾಡುತ್ತಿರುವುದು ಸರ್ಕಾರದ ಆದೇಶದ ವಿರುದ್ಧವಾಗಿದೆ ಹಾಗೂ ಭದ್ರಾವತಿ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಇರುವ ನ್ಯಾಯಬೆಲೆ ಅಂಗಡಿ ಮಾಲೀಕರು ಮತ್ತು ಸಹಕಾರ ಸಂಘದವರು ಸರ್ಕಾರದ ನಿಯಮದ ಪ್ರಕಾರ ಮಂಗಳವಾರ ಹೊರತುಪಡಿಸಿ ಪ್ರತಿದಿನ ಬೆಳಿಗ್ಗೆ 8 ರಿಂದ 12 ಗಂಟೆವರೆಗೆ ಮತ್ತು ಸಂಜೆ 4 ರಿಂದ 8 ಗಂಟೆವರೆಗೆ ನೀಡಬೇಕು ಎಂದು ಇದೆ. ಆದರೆ ತಾಲೂಕಿನ ಯಾವುದೇ ನ್ಯಾಯಬೆಲೆ ಅಂಗಡಿ ಮತ್ತು ಸಹಕಾರ ಸಂಘದವರು ತಿಂಗಳಲ್ಲಿ 3ಅಥವಾ 4 ದಿನ ಬಾಗಿಲು ತೆಗೆದು ವಿತರಣೆ ಮಾಡಿ ಮಿಕ್ಕೆಲ್ಲಾ ದಿನಗಳಲ್ಲಿ ಬಾಗಿಲು ಹಾಕಿಕೊಂಡಿರುತ್ತಾರೆ. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಭದ್ರಾವತಿ ಆಹಾರ ನಿರೀಕ್ಷಕರು ಮತ್ತು ಶಿವಮೊಗ್ಗ ಜಿಲ್ಲಾ ಜಂಟಿ ನಿರ್ದೇಶಕರಿಗೆ ಹಲವು ಬಾರಿ ಮನವಿ ಮಾಡಿದರೂ ಕೂಡ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.

ಅಕ್ರಮವೆಸಗಿರುವ 7 ನ್ಯಾಯಬೆಲೆ ಅಂಗಡಿಗಳನ್ನು ಅಮಾನತು ಮಾಡಿ ಸಂಬಂಧಪಟ್ಟವರಿಗೆ ಸೂಕ್ತ ಕಠಿಣ ಕಾನೂನು ಕ್ರಮ ಜರಗಿಸುವಂತೆ ಆದೇಶಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಮ್ಮ ಕಚೇರಿ ಎದುರು ಹೋರಾಟ ಹಮ್ಮಿಕೊಳ್ಳಬೇಕಾದಿತು ಎಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Exit mobile version