ಶಿವಮೊಗ್ಗ, ಸೆ.10: ಪೊಲೀಸರಾಗಲೀ, ಹಿಂದೂ ಮಹಾಸಭಾ ಸಮಿತಿಯಾಗಲಿ ಭಕ್ತರ ಸಂತಸಕ್ಕೆ ಅಡ್ಡಿಯಾಗಲೇ ಇಲ್ಲ. ಅಂತೂ ಇಂತು ಶಿವಮೊಗ್ಗದ ಹಿಂದೂ ಮಹಾಸಭಾ ಗಣಪ ಬರೋಬ್ವರಿ ಹದಿನೇಳು ಗಂಟೆ ಸಹಸ್ರಾರು ಭಕ್ತರೊಂದಿಗೆ ಮೆರವಣಿಗೆ ಮುಗಿಸಿ ತಾಯಿಯ ಸನ್ನಿದಿಗೆ ತೆರಳಿದ್ದು ವಿಶೇಷ. ಇಂದು ಬೆಳಗಿನ ಜಾವ ನಾಲ್ಕು ಗಂಟೆಗೆ ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ವಿಸರ್ಜಿಸಲಾಯಿತು.
ನಿನ್ನೆ ಬೆಳಿಗ್ಗೆ 11 ಗಂಟೆಗೆ ಹೊರಟ ರಾಜಬೀದಿ ಉತ್ಸವ ಇಂದು ಬೆಳಗಿನ ಜಾವ ನಾಲ್ಕರ ಹೊತ್ತಿಗೆ ಮುಕ್ತಾಯಗೊಂಡಿದೆ.
ತುಂಗೆಯ ಸನ್ನಿದಿಯಲ್ಲಿರುವ ಭೀಮೇಶ್ವರ ದೇವಾಲಯದಿಂದ ಕೋಟೆ ಮಾರಿಕಾಂಬ ರಸ್ತೆ, ರಾಮಣ್ಣ ಶ್ರೇಷ್ಟಿ ಪಾರ್ಕ್, ಗಾಂಧಿ ಬಜಾರ್, ಶಿವಪ್ಪ ನಾಯಕನ ವೃತ್ತ, ಹಳೇ ಮಾರ್ಕೇಟ್ ರಸ್ತೆ, ನೆಹರೂ ರಸ್ತೆ, ಗೋಪಿ ವೃತ್ತ, ದುರ್ಗಿಗುಡಿ ಜೈಲ್ ರಸ್ತೆ, ಶಿವಮೂರ್ತಿ ಸರ್ಕಲ್, ಮಹಾವೀರ ವೃತ್ತ, ಡಿವಿಎಸ್ ಸರ್ಕಲ್, ಕೋಟೆ ರಸ್ತೆ ಮೂಲಕ ಭೀಮೇಶ್ವರ ದೇವಸ್ಥಾನದ ಹಿಂಬದಿಯ ತುಂಗನದಿಯ ಭೀಮನ ಮಡಿಲಿನಲ್ಲಿ ಗಣಪತಿಯನ್ನ ವಿಸರ್ಜಿಸಲಾಗಿದೆ.
ಕಳೆದ ಬಾರಿಗೆ ಹೋಲಿಸಿಕೊಂಡರೆ ಈ ಬಾರಿ ಮೂರು ಗಂಟೆ ತಡವಾಗಿ ಗಣಪತಿ ವಿಸರ್ಜಿಸಲಾಗಿದೆ. ಲಕ್ಷಾಂತರ ಜನ ರಾಜಬೀದಿ ಉತ್ಸವದಲ್ಲಿ ಪಾಲ್ಗೊಂಡ ಕಾರಣ ಗಣಪತಿ ತಡವಾಗಿ ವಿಸರ್ಜನೆಗೊಂಡಿದೆ ಎನ್ನಬಹುದು. ರಾಮಣ್ಣ ಶ್ರೇಷ್ಠಿ ಪಾರ್ಕ್ ಗೆ ನಿನ್ನೆ ಮಧ್ಯಾಹ್ನ 2 ಗಂಟೆಗೆ ಬಂದ ಗಣಪತಿ ಮೆರವಣಿಗೆ ಗಾಂಧಿ ಬಜಾರ್ ತಲೆಗೆ ಬರುವಷ್ಟರಲ್ಲಿ ಸಂಜೆ 7 ಗಂಟೆ ಆಗಿತ್ತು.
ನಂತರ ಹಳೇ ಮಾರ್ಕೆಟ್ ವೃತ್ತದಿಂದ ನೆಹರೂ ರಸ್ತೆಗೆ ರಾತ್ರಿ 10 ಗಂಟೆ ಆಗಿದೆ. ಗೋಪಿ ವೃತ್ತದಿಂದ ದುರ್ಗಿಗುಡಿ ಶನೀಶ್ವರ ದೇವಾಲಯಕ್ಕೆ ಬರುವಷ್ಟರಲ್ಲಿ ರಾತ್ರಿ ಸರಿಸುಮಾರು 11-30 ಕ್ಕೆ ತಲುಪಿದೆ. ಶಿವಮೂರ್ತಿ ವೃತ್ತಕ್ಕೆ ಬರುವಷ್ಟರಲ್ಲಿ ರಾತ್ರಿ 1-45 ಆಗಿತ್ತು. ಇಲ್ಲಿಂದ ಭೀಮನ ಮಡಿಲು ತಲುಪಲು ಬೆಳಗ್ಗಿನ ಜಾವ 4 ಗಂಟೆ ಆಗಿದೆ.
ಪ್ರತಿಸಲ ರಾತ್ರಿ 12-30 ರಿಂದ 1-30 ರ ಒಳಗೆ ಗಣಪತಿ ವಿಸರ್ಜನೆಗೊಳ್ಳುತ್ತಿತ್ತು. ಆದರೆ ಹಬ್ಬದ ವಾತಾವರಣದಂತಾಗಿದ್ದ ಕಾರಣ ಗಣಪತಿ ವಿಸರ್ಜನಾ ಮೆರವಣಿಗೆ ಭಾರಿ ಜನಸ್ತೋಮದ ಕಾರಣ ಬೆಳಗ್ಗಿನ ಜಾವ ನಾಲ್ಕು ಗಂಟೆ ಆಗಿದೆ. ಮೆಡಿಕಲ್ ವಿದ್ಯಾರ್ಥಿಗಳು, ಪಿಜಿ, ಲೇಡಿಸ್ ಪಿಜಿಗಳು, ಹಾಗೂ ಸಣ್ಣ ಸಣ್ಣ ಮಗುವನ್ನ ಹೊತ್ತುಕೊಂಡು ಮಹಿಳೆಯರು ಭಾಗಿಯಾದ ಕಾರಣ ಹಬ್ಬದ ವಾತಾವರಣದಂತೆ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ನಡೆದಿದೆ.