ಶಿವಮೊಗ್ಗ, :
‘ವಠಾರೆ ಹಠಾವೋ ಸ್ಮಾರ್ಟ್ ಸಿಟಿ ಬಚಾವೋ’ ಎಂಬ ಘೋಷಣೆಯಡಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಅವೈಜ್ಞಾನಿಕ ಕಾಮಗಾರಿಗಳ ವಿರೋಧಿಸಿ ಇಂದು7 ನೇ ಬಾರಿಗೆ ಜಿಲ್ಲಾಧಿ ಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ನಗರದಲ್ಲಿ ಅವೈಜ್ಞಾನಿಕ ಕಾಮಗಾರಿ ಮುಂದುವರೆದಿದೆ. ಸ್ವಾಮಿ ವಿವೇಕಾನಂದ ಬಡಾವಣೆಯ ಯುವಜನ ಇಲಾಖೆಗೆ ಸೇರಿದ ಕ್ರೀಡಾಂಗಣದಲ್ಲಿ ಅವೈಜ್ಞಾನಿಕವಾಗಿ ಕ್ರಿಕೆಟ್ ಒಳ ಕ್ರೀಡಾಂಗಣ ನಿರ್ಮಿಸಲಾಗುತ್ತಿದ್ದು, ಇದು ಸಂಪೂರ್ಣ ಲೋಪದಿಂದ ಕೂಡಿದೆ. ಕಳಪೆ ಕಾಮಗಾರಿ ಮಾಡಲಾಗಿದೆ. ಸ್ಮಾರ್ಟ್ ಸಿಟಿ ಎಂಡಿ ಚಿದಾನಂದ ವಠಾರೆ ಅವರ ನೇತೃತ್ವ ದಲ್ಲಿ ತಾಂತ್ರಿಕ ಮಾನ್ಯತೆ ಇಲ್ಲದ ಅವೈಜ್ಞಾನಿಕ ಕಾಮಗಾರಿ ಇದು ಎಂದು ದೂರಿದರು.
ಕ್ರೀಡಾಂಗಣದ ಉದ್ದ ಕೇವಲ ೧೧೦ ಅಡಿ ಇದೆ, ಕ್ರೀಸ್ ಉದ್ದ ಕೇವಲ ೬೬ ಅಡಿ ಇದೆ. ವೇಗದ ಬೌಲರ್ ೭೦ ಅಡಿಯಿಂದ ಓಡಿ ಬರುತ್ತಾರೆ. ಬೌಲರ್ ಹಿಂಭಾಗ ಕನಿಷ್ಠ ತಲಾ ೨೦ ಅಡಿ ಇರಬೇಕು. ಅಂದರೆ ಇದರ ಉದ್ದ ಕನಿಷ್ಠ ೧೭೬ ಅಡಿ ಉದ್ದವಾಗಿರಬೇಕಿತ್ತು. ಹಾಗಾಗಿ ಈ ಕ್ರೀಡಾಂಗಣ ತಾಂತ್ರಿಕವಾಗಿ ದೋಷಪೂರಿತವಾಗಿದೆ ಎಂದು ಆರೋಪಿಸಿದರು.
ಕ್ರೀಡಾಂಗಣಕ್ಕೆ ಬಳಸಿರುವ ಲೈಟಿಂಗ್ ವ್ಯವಸ್ಥೆ ಕೂಡ ಅವೈಜ್ಞಾನಿಕವಾಗಿದೆ. ಫ್ಲಡ್ ಲೈಟ್ ೪೦೦ ರಿಂದ ೨೦೦೦ ವೋಲ್ಟ್ ಅವಶ್ಯ ಕತೆ ಇದೆ. ಆದರೆ, ವೇಗದ ಬಾಲ್ ಗಳು ಈ ಬೆಳಕಲ್ಲಿ ಕಾಣಿಸುವುದೇ ಇಲ್ಲ. ಆಧುನಿಕ ಮ್ಯಾಟ್ ಅಳವಡಿಸಿಲ್ಲ. ಜನರೇಟರ್ ವ್ಯವಸ್ಥೆ ಇಲ್ಲ. ಸಿಮೆಂಟ್ ಕಾಮಗಾರಿ ಕಳಪೆಯಾಗಿದೆ ಎಂದು ದೂರಿದರು.
ಸುಮಾರು ೫೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಈ ಕ್ರೀಡಾಂಗಣಕ್ಕೆ ಯಾವ ತಾಂತ್ರಿಕ ತಜ್ಞರ ಸಲಹೆಯನ್ನೂ ಪಡೆದಿಲ್ಲ. ಆದ್ದರಿಂದ ಈ ಕಾಮಗಾರಿಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಬೇಕು. ಕಳಪೆ ಕಾಮಗಾರಿಗೆ ಕಾರಣರಾದ ಸ್ಮಾರ್ಟ್ ಸಿಡಿ ಎಂಡಿ ಸೇರಿದಂತೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಕಾಮಗಾರಿ ಪುನರ್ ನಿರ್ಮಾಣದಿಂದ ಉಂಟಾಗುವ ನಷ್ಟವನ್ನು ಸ್ಮಾರ್ಟ್ ಸಿಟಿ ಅಧಿಕಾರಿಗಳಿಂದಲೇ ವಸೂಲು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಒಕ್ಕೂಟದ ಪ್ರಮುಖ ರಾದ ಕೆ.ವಿ. ವಸಂತಕುಮಾರ್, ಸತೀಶ್ ಕುಮಾರ್ ಶೆಟ್ಟಿ, ಎಸ್. ರಾಜು, ಸೀತಾರಾಂ, ಎಸ್.ಬಿ. ಅಶೋಕ್ ಕುಮಾರ್ ಮತ್ತಿತರರಿದ್ದರು.