ಶಿವಮೊಗ್ಗ,ಸೆ.03:
ಮದುವೆಯಾಗಿ ಆರು ವರುಷವಾದರೂ ಮಕ್ಕಳಾಗಲಿಲ್ಲ ಎಂದು ಹೆಂಡತಿಯನ್ನೇ ಕೊಂದ ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಇಂದು ಮಹತ್ತರ ತೀರ್ಪು ನೀಡಿದೆ.
ಘಟನೆಯ ಸಮಗ್ರ ವಿವರ:
ದಿನಾಂಕ 13-04-2020 ರಂದು ರಾತ್ರಿ ಶಿರಾಳಕೊಪ್ಪ ಠಾಣಾ ವ್ಯಾಪ್ತಿಯ ಬಿಳಕಿ ಗ್ರಾಮದ ವಾಸಿ ಮಹೇಶ ಕುಮಾರ, 31 ವರ್ಷ ಈತನು ತನ್ನ ಪತ್ನಿಯಾದ ಮಂಗಳ @ ಚೈತ್ರಾ, 28 ವರ್ಷ, ಬಿಳಕಿ ಗ್ರಾಮ ಇವರಿಗೆ 6 ವರ್ಷಗಳಾದರು ಮಕ್ಕಳಾಗಿರುವುದಿಲ್ಲವೆಂದು ಗಲಾಟೆ ತೆಗೆದು, ಆಕೆಯು ಮಲಗಿಕೊಂಡಿದಾಗ ಚೈತ್ರಳ ಕುತ್ತಿಗೆಯನ್ನು ಹಿಸುಕಿ, ಬಾಯಿ ಮುಚ್ಚಿ ಉಸಿರುಗಟ್ಟಿಸಿ ಕೊಲೆ ಮಾಡಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0038/2020 ಕಲಂ 498(ಎ), 504, 506, 302 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.
ಆಗಿನ ತನಿಖಾಧಿಕಾರಿಗಳಾದ ಬಸವರಾಜ್ ಪಿಎಸ್, ಸಿಪಿಐ, ಶಿಕಾರಿಪುರ ವೃತ್ತರವರು ಪ್ರಕರಣದ ತನಿಖೆ ಕೈಗೊಂಡು ಆರೋಪಿತನ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಶ್ರೀ ಶಾಂತರಾಜ್, ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು, 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು ಮಾನ್ಯ ನ್ಯಾಯಧೀಶರಾದ ಶ್ರೀ ಮಾನು ಕೆ. ಎಸ್ ರವರು ದಿನಾಂಕಃ- 03-09-2022 ರಂದು ಆರೋಪಿ ಮಹೇಶಕುಮಾರ, 31 ವರ್ಷ, ಬಿಳಕಿ ಗ್ರಾಮ, ಶಿರಾಳಕೊಪ್ಪ ಈತನ ವಿರುದ್ಧ ಕಲಂ 302 ಐಪಿಸಿ ಅಡಿಯಲ್ಲಿ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 40,000/- ರೂ ದಂಡ, ದಂಡವನ್ನು ಕಟ್ಟಲು ವಿಫಲನಾದರೆ ಹೆಚ್ಚುವರಿಯಾಗಿ 04 ತಿಂಗಳ ಕಾಲ ಸಾದಾ ಕಾರವಾಸ ಶಿಕ್ಷೆ ನೀಡಿ ಆದೇಶ ನೀಡಿರುತ್ತಾರೆ.