Site icon TUNGATARANGA

ಶಿವಮೊಗ್ಗ / ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಪಾಲಿಕೆಯಿಂದ ಸಂಪೂರ್ಣ ಸಹಕಾರ :ಮೇಯರ್ ಸುನಿತಾ ಅಣ್ಣಪ್ಪ

ಗಣೇಶ ಹಬ್ಬವನ್ನು ಸಂತೋಷ ಹಾಗೂ ಸಂಭ್ರಮದಿಂದ ಆಚರಿಸಲು ಮಹಾನಗರ ಪಾಲಿಕೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಮೇಯರ್ ಸುನಿತಾ ಅಣ್ಣಪ್ಪ ತಿಳಿಸಿದರು.


ಅವರು ಪಾಲಿಕೆ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೊರೋನಾದಿಂದಾಗಿ ಕಳೆದ ಎರಡು ವರ್ಷ ಗಳಿಂದ ಸರಳವಾಗಿ ಹಬ್ಬ ಆಚರಿಸಲಾಗಿದೆ. ಈ ಬಾರಿ ವಿಜೃಂಭಣೆಯಿಂದ ಹಬ್ಬ ಆಚರಿಸಲು ಪಾಲಿಕೆಯಿಂದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.


ಯಾರಿಗೂ ತೊಂದರೆಯಾಗದಂತೆ ಹಬ್ಬ ಆಚರಿಸಬೇಕು. ಗಣೇಶೋತ್ಸವ ಸಮಿತಿಗಳಿಗೆ ಅನುಮತಿಗಾಗಿ ಏಕಗವಾಕ್ಷಿ ಕೇಂದ್ರಗಳನ್ನು ಮೂರು ಕಡೆ ತೆರೆಯಲಾಗಿದೆ. ಪಾಲಿಕೆ, ಪೊಲೀಸ್, ಮೆಸ್ಕಾಂ ಸಿಬ್ಬಂದಿಗಳು ಅನುಮತಿ ನೀಡಲಿದ್ದಾರೆ. ಫ್ಲೆಕ್ಸ್ ಗಳಿಗೆ ದಿನಕ್ಕೆ ೧ ರೂ. ಚ.ಅಡಿ ಬದಲಾಗಿ ಹಬ್ಬದ ಹಿನ್ನಲೆಯಲ್ಲಿ ೨೫ ಪೈಸೆಗೆ ಇಳಿಸಲಾಗಿದೆ. ಅನಧಿಕೃತ ಫ್ಲೆಕ್ಸ್ ಗಳ ನಿಯಂತ್ರಣ ಮಾಡಲಾಗಿದೆ ಎಂದರು.


ಗಣಪತಿ ಮೂರ್ತಿ ವಿಸರ್ಜನಾ ಸ್ಥಳದಲ್ಲಿ ಸೂಕ್ತ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಹಾಗೂ ಸೂಕ್ತ ಸಿಬ್ಬಂದಿ ನಿಯೋಜಿಸಲಾಗಿದೆ. ಹಬ್ಬದ ಅವಧಿ ಹಾಗೂ ಸಾರ್ವಜನಿಕ ಗಣೇಶೋತ್ಸವದ ಸಂದರ್ಭದಲ್ಲಿ ಸ್ವಚ್ಛತೆ ಹಾಗೂ ಸರ್ಕಾರದ ಆದೇಶಗಳ ಅನುಸಾರ ಕರ್ತವ್ಯ ನಿರ್ವಹಣೆ ಮಾಡಲಾಗುವುದು. ಆಯಾ ವಾರ್ಡ್ ಗಳಲ್ಲಿ ಗಣೇಶ ಚತುರ್ಥಿ ಆರಂಭ ದಿನದಿಂದ ೫ ದಿನಗಳವರೆಗೆ ವಾರ್ಡ್ ವಾರು ಸಂಚಾರಿ ಗಣೇಶ ಮೂರ್ತಿ ವಿಸರ್ಜನಾ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ ಎಂದರು.

೩೫ ವಾರ್ಡ್ ಗಳಲ್ಲಿ ಗಣೇಶ ಮೂರ್ತಿ ವಿಸರ್ಜನಾ ಸ್ಥಳಗಳನ್ನು ಗುರುತಿಸಲಾಗಿದೆ. ಸದರಿ ಸ್ಥಳಗಳಲ್ಲಿ ಸಾರ್ವಜನಿಕ ಸುರಕ್ಷತಾ ಬ್ಯಾರಿಕೇಡ್ ಅಳವಡಿಸುವುದು, ಪೊಲೀಸ್ ಮತ್ತು ಇತರೆ ಇಲಾಖೆಗಳ ಸಮನ್ವಯತೆ, ಸುರಕ್ಷತಾ ಕ್ರಮಗಳು, ಸೂಚನಾ ಫಲಕಗಳು, ಮುನ್ನೆಚ್ಚರಿಕಾ ಕ್ರಮಗಳು ಹಾಗೂ ರಸ್ತೆ ಮಾರ್ಗ ದುರಸ್ತಿ ಹಾಗೂ ಇತರೆ ಸಾರ್ವಜನಿಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.


ಹಬ್ಬದ ಅವಧಿಯಲ್ಲಿ ನೀರಿನ ಕೊರತೆ ಬರದಂತೆ ಕ್ರಮ ಕೈಗೊಳ್ಳಲಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ ದೂರವಾಣಿ ಮೂಲಕ ತಿಳಿಸಿದಲ್ಲಿ ಟ್ಯಾಂಕರ್ ನೀರು ಸರಬರಾಜು ವ್ಯವಸ್ಥೆ ಮಾಡಲಾಗುವುದು. ಸೂಚಿತ ಗಣಪತಿ ವಿಸರ್ಜನೆ ಸ್ಥಳಗಳಲ್ಲಿ ಬೆಳಕಿನ ಹಾಗೂ ಬೀದಿ ದೀಪ ತಾತ್ಕಾಲಿಕ ಸಿಸಿ ಟಿವಿ ಕ್ಯಾಮೆರಾ ವ್ಯವಸ್ಥೆ ಮಾಡಲಾಗುವುದು. ತುರ್ತು ಸ್ಥಳಗಳಲ್ಲಿ ಅವಶ್ಯಕ ಜನರೇಟರ್ ವ್ಯವಸ್ಥೆ ಮಾಡಲಾಗುವುದು. ಪ್ರತಿ ವಾರ್ಡ್ ನಲ್ಲೂ ಒಬ್ಬರು ಇಂಜಿನಿಯರ್ ರನ್ನು ನೇಮಿಸಲಾಗಿದೆ. ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆ ೧೮೦೦ ೪೨೫೭ ೬೭೭ ಕ್ಕೆ ಸಂಪರ್ಕಿಸಬಹುದು ಎಂದರು.


ಪತ್ರಿಕಾಗೋಷ್ಠಿಯಲ್ಲಿ ಉಪ ಮೇಯರ್ ಶಂಕರ್ ಗನ್ನಿ, ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ, ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಧೀರರಾಜ್ ಹೊನ್ನವಿಲೆ, ಶಿವಕುಮಾರ್, ಅನಿತಾ ರವಿಶಂಕರ್, ಸದಸ್ಯ ಎಸ್. ಜ್ಞಾನೇಶ್ವರ್, ಆಯುಕ್ತ ಮಾಯಣ್ಣ ಗೌಡ ಉಪಸ್ಥಿತರಿದ್ದರು.

Exit mobile version