ಶಿವಮೊಗ್ಗ,
ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆದಲ್ಲಿ ತಂದೆ -ತಾಯಿಗೆ, ಶಾಲಾ ಶಿಕ್ಷಕರಿಗೆ ಮತ್ತು ಕಲಿಸಿದ ಶಾಲಾ ಆಡಳಿತ ಮಂಡಳಿಯವರಿಗೆ ಮತ್ತು ಅಂಕ ಪಡೆದ ವಿದ್ಯಾರ್ಥಿಗೂ ಅತ್ಯಂತ ಸಂತೋಷ ತರುವ ವಿಚಾರ. ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪುರಸ್ಕರಿಸುತ್ತಿರುವ ನಂದಿ ವಿದ್ಯಾಸಂಸ್ಥೆ ಉತ್ತಮ ಕಾರ್ಯ ಹಮ್ಮಿಕೊಂಡಿದೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಇಂದು ನಗರದ ಸರ್ಕಾರಿ ನೌಕರರ ಭವನದಲ್ಲಿ ನೊಳಂಬ ವೀರಶೈವ ಸಮಾಜ ಮತ್ತು ನಂದಿ ವಿದ್ಯಾಸಂಸ್ಥೆ ಹಮ್ಮಿ ಕೊಂಡಿದ್ದ ಗುರುವಂದನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಏಕಾಗ್ರತೆಯಿಂದ ಕಠಿಣ ಶ್ರಮ ಹಾಕಿ ಶಿಕ್ಷಣ ಪಡೆದಲ್ಲಿ ಅವರ ಮುಂದಿನ ಭವಿಷ್ಯಕ್ಕೆ ಅನುಕೂಲವಾಗಲಿದೆ. ದೊಡ್ಡ ದೊಡ್ಡ ಕಂಪನಿಯಲ್ಲಿ ದೊಡ್ಡ ಹುದ್ದೆಯಲ್ಲಿ ಇದ್ದು, ಹೆಸರು ಗಳಿಸಿದಾಗ ನಮ್ಮ ಶಿವಮೊಗ್ಗಕ್ಕೂ ಒಂದು ಗೌರವ. ವಿದೇಶದಲ್ಲಿ ಕೂಡ ಇತ್ತೀಚೆಗೆ ಭಾರತೀಯರ ಬುದ್ಧಿವಂತಿಕೆ ಮೆಚ್ಚಿ ಗೌರವಿಸುತ್ತಿದ್ದಾರೆ ಎಂದರು.
ಹಿಂದೆ ಭಾರತೀಯರೆಂದರೆ ಕಡು ಬಡವರು, ಹಾವಾಡಿಗರು ಎಂಬ ಕೀಳರಿಮೆ ವಿದೇಶಗಳಲ್ಲಿತ್ತು. ಆದರೆ, ಈಗ ವಿಶ್ವದೆಲ್ಲೆಡೆ ಭಾರತೀಯರನ್ನು ಮತ್ತು ಭಾರತದ ಪ್ರತಿಭೆಯನ್ನು ಕೊಂಡಾಡುತ್ತಿದ್ದಾರೆ. ಭಾರತೀಯ ಸಂಸ್ಕೃತಿಯ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ವಿಲಾಸಮಯ ಜೀವನವನ್ನು ಬಿಟ್ಟು ಭಾರತೀಯ ಸಂಸ್ಕೃತಿಯ ಕಡೆಗೆ ಆಕರ್ಷಿತರಾಗುತ್ತಿದ್ದಾರೆ.
ನಂದಿ ವಿದ್ಯಾಸಂಸ್ಥೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ಸಿನತ್ತ ದಾಪುಗಾಲು ಇಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ನಂದಿಗುಡಿ ಬೃಹನ್ಮಠದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಬಸವಕೇಂದ್ರದ ಚರಮೂರ್ತಿಗಳಾದ ಶ್ರೀ ಡಾ. ಬಸವಮರುಳಸಿದ್ಧ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ನಂದಿ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್. ರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಡಾ. ಡಿ.ಬಿ. ಗಂಗಪ್ಪ, ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ನಿರ್ದೇಶಕ ರುದ್ರೇಶ್ ಮೊದಲಾದವರಿದ್ದರು.