ಶಿವಮೊಗ್ಗ,
ಭದ್ರೆ ಸಂತೃಪ್ತಳಾಗಿದ್ದಾರೆ ನಾವೆಲ್ಲ ಭದ್ರವಾಗಿರುತ್ತೇವೆ. ಲಕ್ಷಾಂತರ ಜನರ ಜೀವನಾಡಿಯಾಗಿರುವ ಭದ್ರೆಗೆ ಭಾವನಾರ್ಪಣೆ ಮಾಡುವ ಮೂಲಕ ಋಣ ತೀರಿ ಸಬೇಕಿದೆ ಎಂದು ಪಾಂಡೋಮಟ್ಟಿ ಮಠದ ಶ್ರೀಗುರುಬಸವ ಸ್ವಾಮೀಜಿ ಹೇಳಿದರು.
ಚನ್ನಗಿರಿ ತಾಲೂಕು ರೈತಸಂಘದ ವತಿಯಿಂದ ಬಿಆರ್‌ಪಿಯಲ್ಲಿ ಭದ್ರಾ ಡ್ಯಾಂಗೆ ಬಾಗಿನ ಅರ್ಪಣೆ ನಂತರ ರೈತರನ್ನುದ್ದೇಶಿಸಿ ಆವರು ಮಾತನಾಡಿದರು.
ರೈತರಿಗೆ ಅರಿವಿನ ಕೊರತೆಯಿಂದ ಸ್ವಯಂ ಆರ್ಥಿಕ ಉದ್ಯೋಗ ಕೈಗೊಳ್ಳಲು ಸಾಧ್ಯವಾಗಿಲ್ಲ. ದೇಶದ ೪೨ ಲಕ್ಷ ಸೈನಿಕರಲ್ಲಿ ಬಹುತೇಕರು ರೈತರ ಮಕ್ಕಳಾಗಿದ್ದಾರೆ. ಆದ್ದರಿಂದ ದೇಶ ಕಾಯುವ, ದೇಶಕ್ಕೆ ಅನ್ನ ನೀಡುವ ಕೆಲಸ ರೈತರಿಂದಲೇ ಆಗುತ್ತಿದೆ. ರೈತರು ಯಾವುದೇ ರಾಜಕೀಯ ಪಕ್ಷದ ಅಧೀನದಲ್ಲಿ ಇರಬಾರದು. ರೈತರು ಸ್ವತಂತ್ರರಾಗಿರಬೇಕೆಂದರು.
ಸರ್ಕಾರದ ಸವಲತ್ತು ಕಟ್ಟ ಕಡೆಯ ರೈತನಿಗೂ ದೊರೆಯುವಂತೆ ರೈತಸಂಘ ನಿಗಾವಹಿಸಬೇಕು. ಇಂತಹ ಸೌಲಭ್ಯಗಳನ್ನು ಬಳಸಿಕೊಂಡು ಉದ್ಯೋಗ ಮತ್ತು ಅರ್ಥಿಕ ವೃದ್ಧಿಗೆ ರೈತ ಸಮೂಹ ಮುಂದಾಗಬೇಕೆಂದು ಹೇಳಿದರು.
ಗೊಬ್ಬರ ವರ್ತಕ ಸಂತೇಬೆನ್ನೂರು ಸಿರಾಜ ಅಹಮದ್ ಮಾತನಾಡಿ ಇಂದು ರೈತರು ಕೃಷಿಗೆ ಬಳಸುವ ಪ್ರತಿ ವಸ್ತುಗಳು ಅನ್ಯ ರಾಜ್ಯದ್ದವುಗಳಾಗಿವೆ. ಬಿತ್ತನೆ ಬೀಜಗಳು, ಕೀಟನಾಶಕ, ಕೃಷಿ ಯಂತ್ರಗಳು ಹಾಗೂ ವಿವಿಧ ತಳಿಯ ಸಸಿಗಳು ಅನ್ಯರಾಜ್ಯದಿಂದ ಬರುತ್ತಿವೆ. ರೈತರು ಸ್ವಾಭಿಮಾನದಿಂದ ತಾವು ಬಳಸುವ ವಸ್ತುಗಳನ್ನು ಉತ್ಪಾದಿಸುವತ್ತ ಗಮನ ಕೊಟ್ಟರೆ ರೈತ ಆರ್ಥಿಕವಾಗಿ ಮತ್ತು ಸ್ವಾವಲಂಬಿಯಾಗಿ ಅಭಿವೃದ್ಧಿಗೊಳ್ಳಲು ಸಾಧ್ಯವೆಂದು ತಿಳಿಸಿದರು.
ತಾಲ್ಲೂಕು ರೈತಸಂಘದ ಅಧ್ಯಕ್ಷ ಗರಗ ನಾಗೇಂದ್ರಪ್ಪ, ಶಿವಮೂರ್ತಿ, ಹಾಲೇಶ್, ಮುಗಳಳ್ಳಿ ರತ್ಮಮ್ಮ, ಗೂಡಾಳ್ ಮಹೇಶ್ವರಪ್ಪ, ಮೇದಿಕೆರೆ ಅಣ್ಣಪ್ಪ, ಉಮಾಪತಿ, ಲಕ್ಷ್ಮಿಪತಿ, ಏಕಲವ್ಯ ನಾಗರಾಜ್, ಹಳಕಟ್ಟದ ರೂಪ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಕಾಕನೂರು ಎಂ.ಬಿ. ನಾಗರಾಜ್, ಕಿರಣ್ ಹಾಗೂ ತಾಲೂಕಿನ ಮಹಿಳಾ ಘಟಕ ಮತ್ತು ರೈತಸಂಘದ ನೂರಾರು ರೈತರು ಭಾಗವಹಿಸಿದ್ದರು.