ಶಿವಮೊಗ್ಗ,
ಕೊರೋನಾ ಸಂದರ್ಭದಲ್ಲಿ ಪೌರ ಕಾರ್ಮಿಕರು ತಮ್ಮ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸಿ ದ್ದಾರೆ. ಅವರ ಸೇವೆ ಗುರುತಿಸುವುದು ಮತ್ತು ಅವರನ್ನು ಅಭಿನಂದಿಸಬೇಕಾಗಿರುವುದು ಎಲ್ಲರ ಕರ್ತವ್ಯ ಎಂದು ಮಾಜಿ ಮೇಯರ್, ಹಾಲಿ ಸದಸ್ಯ ನಾಗರಾಜ್ ಕಂಕಾರಿ ಹೇಳಿದರು.
ಅವರು ಇಂದು ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಜಿಲ್ಲಾ ಜಾತ್ಯತೀತ ಜನತಾದಳ ವತಿಯಿಂದ ಎಂ. ಶ್ರೀಕಾಂತ್ ನೇತೃತ್ವದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಮಹಿಳಾ ಪೌರ ಕಾರ್ಮಿಕರಿಗೆ ಗೌರಿ ಗಣೇಶ ಹಬ್ಬದ ಪ್ರಯುಕ್ತ ಬಾಗಿನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ಕಾರ್ಮಿಕರು ಕೊರೊನಾ ಮೂರನೇ ಡೋಸ್ ಲಸಿಕೆ ಪಡೆಯಲೇಬೇಕು. ಬೆಂಗಳೂರಿನಲ್ಲಿ ನಿಧಾನವಾಗಿ ಕೊರೋನಾ ಹೆಚ್ಚಾಗುತ್ತಿದೆ. ಶಿವಮೊಗ್ಗದಲ್ಲಿ ಕೂಡ ನಾವು ಮುಂಜಾಗ್ರತೆ ವಹಿಸಬೇಕಾಗುತ್ತದೆ. ನಮ್ಮ ಕಣ್ಣೆದುರಿನಲ್ಲೇ ಅನೇಕ ಜೀವಗಳನ್ನು ನಾವು ಕಳೆದುಕೊಂಡಿದ್ದೇವೆ. ಪೌರ ಕಾರ್ಮಿಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಅತಿಮುಖ್ಯ ಎಂದರು.
ಈ ಸಂದರ್ಭದಲ್ಲಿ ಪೌರ ಮಹಿಳಾ ಕಾರ್ಮಿಕರಿಗೆ ಬಾಗಿನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಉಪ ಮೇಯರ್ ಹೆಚ್. ಪಾಲಾಕ್ಷಿ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಮಾರಪ್ಪ, ಕಾರ್ಯದರ್ಶಿ ಎನ್. ಗೋವಿಂದ್, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸತೀಶ್ ಮತ್ತಿತರರಿದ್ದರು.