ಶಿವಮೊಗ್ಗ
ಕುವೆಂಪು ವಿಶ್ವವಿದ್ಯಾಲಯದ ಪದವಿ ಕಾಲೇಜುಗಳ ೪ ಮತ್ತು ೬ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆ ದಿನಾಂಕವನ್ನು ಮುಂದೂಡಬೇಕೆಂದು ಆಗ್ರಹಿಸಿ ಎನ್‌ಎ ಸ್‌ಯುಐ ಜಿಲ್ಲಾ ಘಟಕದ ಕಾರ್ಯಕರ್ತರು ಇಂದು ಶಿವಮೊಗ್ಗದಲ್ಲಿರುವ ಕುವೆಂಪು ವಿಶ್ವ ವಿದ್ಯಾಲಯದ ಆಡಳಿತ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಕುವೆಂಪು ವಿಶ್ವವಿದ್ಯಾಲಯವು ಪದವಿ ಕಾಲೇಜುಗಳ ೪ ಮತ್ತು ೬ನೇ ಸೆಮಿಸ್ಟರ್‌ಗೆ ತರಗತಿಗಳು ಪ್ರಾರಂಭವಾಗಿ ೨ ತಿಂಗಳಲ್ಲೇ ಪರೀಕ್ಷಾ ದಿನಾಂಕ ನಿಗದಿಪಡಿಸಿರುವುದನ್ನು ಖಂಡಿಸಿದ ಪ್ರತಿಭಟನಾಕಾರರು ಪರೀಕ್ಷಾ ದಿನಾಂಕ ಮುಂದೂಡುವಂತೆ ಆಗ್ರಹಿಸಿದರು.
ನಿಗದಿತ ಪಠ್ಯಗಳನ್ನು ಪೂರ್ಣಗೊಳಿಸಲು ಇನ್ನೂ ಕನಿಷ್ಠ ಒಂದು ತಿಂಗಳಾದರೂ ಬೇಕು ಎಂದು ಉಪನ್ಯಾಸಕರು ತಿಳಿಸುತ್ತಿದ್ದಾರೆ. ಹಾಗೆಯೇ ಈ ವರೆಗೂ ಕೇವಲ ೧ ಇಂಟರ್‌ನಲ್ ಪರೀಕ್ಷೆ ನಡೆಸಲಾಗಿದೆ. ಇನ್ನೂ ೧ ಇಂಟರ್‌ನಲ್ ಪರೀಕ್ಷೆ ಬಾಕಿದೆ. ಆದರೆ, ವಿಟಿಯು ಆ.೩೦ರೊಳಗೆ ನಿಗದಿತ ಪಠ್ಯವನ್ನು ಪೂರ್ಣಗೊಳಿಸುವಂತೆ ಆದೇಶ ಹೊರಡಿಸಿದೆ.
ಪಾಠಗಳು ಪೂರ್ಣ ಪ್ರಮಾಣದಲ್ಲಿ ಮುಗಿಯದೇ ಇರುವುದರಿಂದ ಇದೇ ರೀತಿಯ ಸನ್ನಿವೇಶದಲ್ಲಿ ದಾವಣಗೆರೆ ವಿವಿಯವರು ಪರೀಕ್ಷೆ ಮುಂದೂಡಿರುವುದನ್ನು ಗಮನಿಸಿ ಕುವೆಂಪು ವಿವಿಯಲ್ಲೂ ೪ ಮತ್ತು ೬ನೇ ಸೆಮಿ ಸ್ಟರ್ ಪರೀಕ್ಷೆಗಳನ್ನು ಕನಿಷ್ಠ ಒಂದು ತಿಂಗಳು ಪರೀಕ್ಷೆ ಮುಂದೂಡಿ.
ಬಾಕಿ ಉಳಿದಿರುವ ೧ ಇಂಟರ್‌ನಲ್ ಪರೀಕ್ಷೆ ನಡೆಸಲು ಹಾಗೂ ಉಪನ್ಯಾಸಕರಿಗೆ ಪೂರ್ಣ ಪಾಠ ಮಾಡಲು ಅವಕಾಶ ಮಾಡಿಕೊಡಬೇಕೆಂದಿದ್ದಾರೆ.
ಕೇವಲ ಅಂಕಪಟ್ಟಿ ಶುಲ್ಕ ಮಾತ್ರ ಪಡೆಯ ಲಾಗುತ್ತಿತ್ತು. ಆದರೆ ಈ ಬಾರಿ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೂ ಇತರೆ ವಿದ್ಯಾರ್ಥಿಗಳಂತೆ ಪರೀಕ್ಷಾ ಶುಲ್ಕ, ಅಂಕಪಟ್ಟಿ ಶುಲ್ಕ, ಅರ್ಜಿ ಶುಲ್ಕ ವಸೂಲು ಮಾಡುತ್ತಿರುವುದು ಸರಿಯಲ್ಲ. ಆದ್ದರಿಂದ ಕೂಡಲೇ ಕುಲಪತಿಗಳು ಈ ಆದೇಶವನ್ನು ರದ್ದುಗೊಳಿಸಿ, ಹಿಂದಿನಂತೆ ಪರೀಕ್ಷಾ ಶುಲ್ಕ ನಿಗದಿಪಡಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಎಸ್.ಎನ್. ವಿಜಯಕುಮಾರ್, ಕಾರ್ಯಾಧ್ಯಕ್ಷ ಜಿ. ರವಿಕುಮಾರ್, ನಗರಾಧ್ಯಕ್ಷ ಕಿರಣ್, ಗ್ರಾಮಾಂತರ ಅಧ್ಯಕ್ಷ ಹರ್ಷಿತ್, ಪ್ರಧಾನ ಕಾರ್ಯದರ್ಶಿಗಳಾದ ರವಿಕುಮಾರ್, ಜಂದೋಜಿರಾವ್, ಹೌಫಿಕ್, ಕಾರ್ಯದರ್ಶಿ ಗಳಾದ ಪ್ರಮೋದ್, ವಿಕ್ರಮ್, ಸಮರ್ಥಗೌಡ್ರ, ಅಭಿಷೇಕ್ ಇನ್ನಿತರರು ಭಾಗವಹಿಸಿದ್ದರು.