Site icon TUNGATARANGA

ಭಾರತ ವಿಶ್ವಗುರು ಆಗುವಲ್ಲಿ ಯುವಜನರ ಪಾತ್ರ ಮಹತ್ವಪೂರ್ಣ- ಡಾ. ಬಿ.ಪಿ ವೀರಭದ್ರಪ್ಪ

ಇಎಸ್ ಪದವಿ ಕಾಲೇಜಿನ Graduation Day ಸಮಾರಂಭ


ಶಿವಮೊಗ್ಗ,ಆ.೨೨:
ನಮ್ಮ ದೇಶದ ಯುವಕರು ಹೆಚ್ಚು ಪ್ರಮಾಣದಲ್ಲಿ ಉನ್ನತಶಿಕ್ಷಣವನ್ನು ಪಡೆಯಬೇಕು ಹಾಗೂ ಇಂದಿನ ಆಧುನಿಕ ಜಾಗತಿಕ ವ್ಯವಸ್ಥೆಗೆ ಅನುಗುಣವಾಗಿ ಕೌಶಲ್ಯಗಳನ್ನು ಕರಗತಮಾಡಿಕೊಳ್ಳಬೇಕು. ಭಾರತವು ಇಂದು ಹಲವಾರು ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಸಾಧಿಸಿ ದಾಪುಗಾಲನ್ನು ಇಡುತ್ತಿದೆ. ಇಂದಿನ ಜವಾಬ್ದಾರಿಯುತ ಯುವಜನತೆಯು ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡುವುದರ ಮೂಲಕ ಭಾರತವು ವಿಶ್ವಗುರುವಾಗಲು ನೆರವಾಗಬೇಕು ಎಂದು ಕುವೆಂಪು ವಿವಿ ಕುಲಪತಿ ಡಾ. ಬಿ.ಪಿ ವೀರಭದ್ರಪ್ಪ ತಿಳಿಸಿದರು.
ಸ್ವಾತಂತ್ರ್ಯದ ಅಮೃತಮಹೋತ್ಸವವನ್ನು ಆಚರಿಸುವ ಸಂಭ್ರಮದಲ್ಲಿ ಇದ್ದರೂ ಕೂಡ ನಾವು ಉನ್ನತ ಶಿಕ್ಷಣವನ್ನು ನೀಡುವುದರಲ್ಲಿ ಬಹಳ ಹಿಂದೆ ಇದ್ದೇವೆ. ಕೇಂದ್ರ ಸರ್ಕಾರವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ- ೨೦೨೦ ಯನ್ನು ರೂಪಿಸಿದ್ದು ದೇಶದಲ್ಲಿಯೇ ಮೊಟ್ಟ ಮೊದಲಿಗೆ ಅದನ್ನು ಅನುಷ್ಠಾನಕ್ಕೆ ತಂದ ರಾಜ್ಯ ಕರ್ನಾಟಕವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದೇವೆ. ಯುವಶಕ್ತಿಯು ದೇಶದ ಬಹುದೊಡ್ಡ ಶಕ್ತಿಯಾಗಿದೆ. ನಮ್ಮ ದೇಶದಲ್ಲಿ ಶೇ ೬೫% ರಷ್ಟು ೩೫ ವರ್ಷದ ಒಳಗಿನ ಯುವಜನತೆಯಾಗಿದ್ದು ಆರ್ಥಿಕವಾಗಿ ಸದೃಢವಾಗಲು ಇದು ಸೂಕ್ತವಾದ ಕಾಲವಾಗಿದೆ ಎಂದು ಅವರು ನಗರದ ಪಿಇಎಸ್ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಪಿಇಎಸ್ ಪದವಿ ಕಾಲೇಜಿನ ಎಂಕಾಂ, ಬಿಬಿಎ, ಬಿ.ಕಾಂ, ಬಿಸಿಎ, ಬಿಎಸ್ಸಿ ಪದವಿಗಳ ವಿದ್ಯಾರ್ಥಿಗಳಿಗೆ ೨೦೧೯-೨೦, ೨೦೨೦-೨೧, ೨೦೨೧-೨೨ನೇ ಶೈಕ್ಷಣಿಕ ಸಾಲುಗಳ Graduation Day ಸಮಾರಂಭದಲ್ಲಿ ತಿಳಿಸಿದರು.


ಕಳೆದ ಎರಡು ವರ್ಷಗಳಿಂದ ಕರೋನ ಮಹಾ ಮಾರಿಯ ಕಾರಣಕ್ಕಾಗಿ ಸಮಾರಂಭವನ್ನು ಮಾಡಲಾಗದ ಕಾರಣದಿಂದ ಮೂರು ವರ್ಷಗಳ ಪದವಿ ಸಮಾರಂಭವನ್ನು ಒಟ್ಟಿಗೆ ನೆರವೇರಿಸಲಾಯಿತು.
ಪದವಿ ಪ್ರದಾನ ಸಮಾರಂಭದ ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ್ದ ವಿಜಯ್ ಟೆಕ್ನೋಕ್ರಾಫ್ಟ್ ಪ್ರೈ ಲಿಮಿಟೆಡ್‌ನ ನಿರ್ದೇಶಕರಾದ ಶ್ರೀ ಡಿ ಜಿ ಬೆನಕಪ್ಪ ಅವರು ಮಾತನಾಡುತ್ತಾ, ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕುರಿತು ನಿಖರವಾದ ಗುರಿಯನ್ನು ಇರಿಸಿಕೊಳ್ಳಬೇಕು. ಅಲ್ಲದೆ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಜೀವನದಲ್ಲಿ ಯಾವುದೂ ಕೂಡ ಚಿಕ್ಕದು ಎಂದು ಭಾವಿಸದೆ ಪ್ರತಿಯೊಂದು ಸಣ್ಣ ವಿಷಯಗಳಿಗೂ ಮಹತ್ವವನ್ನು ನೀಡಬೇಕು. ಪ್ರತೀ ಹಂತದಲ್ಲಿ ನಮಗೆ ನೆರವಾದ ಜನರನ್ನು ಸ್ಮರಿಸಬೇಕು. ಯಾವುದೇ ಸಂದರ್ಭದಲ್ಲಿಯೂ ಕೂಡ ಬಂದಂತಹ ಅವಕಾಶಗಳನ್ನು ಕಳೆದುಕೊಳ್ಳಬಾರದು, ಸಾಧಿಸುತ್ತೇನೆಂಬ ಛಲ ಮತ್ತು ಆತ್ಮವಿಶ್ವಾಸಗಳನ್ನು ರೂಢಿಸಿಕೊಳ್ಳಬೇಕು. ಎಂದರು.
ಅಲ್ಲದೆ ಇಂದಿನ ತಂತ್ರಜ್ಞಾನ ಯುಗಕ್ಕೆ ಅನುಗುಣವಾಗಿ ಹೊಸ ಕೌಶಲ್ಯಗಳನ್ನು ಕಲಿಯಬೇಕು ಹಾಗೂ ಬದಲಾವಣೆಗಳಿಗೆ ತಕ್ಷಣ ಹೊಂದುವ ಗುಣವನ್ನು ಅಳವಡಿಸಿಕೊಳ್ಳಬೇಕು ಇಲ್ಲವಾದರೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿಯನ್ನು ಎದುರಿಸುವುದು ಕಷ್ಟವಾಗುತ್ತದೆ. ಹನಿಹನಿಗೂಡಿದರೆ ಹಳ್ಳ ಎಂಬ ಹಿರಿಯರು ಹೇಳುತ್ತಿದ್ದ ಮಾತನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಉದ್ಯಮವನ್ನು ಆರಂಭಿಸುವಾಗ ಸಾಕಷ್ಟು ಮಾಹಿತಿಯ ಜೊತೆಗೆ ಪರಿಣಿತಿಯನ್ನು ಸಾಧಿಸಿಕೊಂಡಿದ್ದರೆ ಉತ್ತಮ ಸಾಧನೆಯನ್ನು ಮಾಡಬಹುದು ಎಂದು ಹೇಳಿದರು.
ಸಮಾರಂಭದಲ್ಲಿ ಪಿಇಎಸ್ ಟ್ರಸ್ಟ್‌ನ ಮುಖ್ಯ ಆಡಳಿತ ಸಂಯೋಜನಾಧಿಕಾರಿಗಳಾದ ಡಾ. ಆರ್. ನಾಗರಾಜ, ಪ್ರಾಂಶುಪಾಲರಾದ ಡಾ. ಕೆ. ಸಾಯಿಲತ, ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಸಂಚಾಲಕರಾದ ಡಾ. ದಿಲೀಪ್ ಕುಮಾರ್ ಎಸ್. ಡಿ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ರೂಪ ಡಿ ಎಸ್, ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಕೃಷ್ಣ ಎಂ ಎಂ ಅವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪೂಜಾ ರಾನಡೆಯವರು ವಂದಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಅಭಿಷೇಕ್ ಎಸ್ ನಿರೂಪಿಸಿದರು.

Exit mobile version