Site icon TUNGATARANGA

ಶಿವಮೊಗ್ಗ / ಹಿಂದುಳಿದ ವರ್ಗಗಳಿಗೆ ಸ್ಥಾನಮಾನ ಸಿಕ್ಕಿದೆ ಎಂದರೆ ಕಾರಣ ಡಿ.ದೇವರಾಜ ಅರಸು : ಮೇಯರ್ ಸುನೀತಾ ಅಣ್ಣಪ್ಪ


ಶಿವಮೊಗ್ಗ
   ಇಂದು ಹಿಂದುಳಿದ ವರ್ಗಗಳಿಗೆ ಸ್ಥಾನಮಾನ ಸಿಕ್ಕಿದೆ ಎಂದರೆ ಅದಕ್ಕೆ ಡಿ.ದೇವರಾಜ ಅರಸುರವರೇ ಕಾರಣ ಎಂದು ಮಹಾನಗರಪಾಲಿಕೆ ಮಹಾಪೌರರಾದ ಸುನೀತಾ ಅಣ್ಣಪ್ಪ ನುಡಿದರು.


      ಜಿಲ್ಲಾಡಳಿತ, ಜಿಲ್ಲಾ ಪಂಚಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಸುವರ್ಣ ಸಾಂಸ್ಕøತಿಕ ಭವನದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿಪರ ಸಾಧನೆಗಳ ಹರಿಕಾರ-ಸಾಮಾಜಿಕ ಪರಿವರ್ತನೆಯ ಹರಿಕಾರ-ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸುರವರ 107 ನೇ ಜನ್ಮ ದಿನಾಚರಣೆ ಹಾಗೂ ಡಿ.ದೇವರಾಜ ಅರಸು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.


    ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅನೇಕ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿ ನಿಲಯಗಳ ಸ್ಥಾಪನೆ ಮೂಲಕ ಅವರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ ಅರಸು. ಹಿಂದೆಲ್ಲ ಹಿಂದುಳಿದವರು ಶಿಕ್ಷಣ ನಗರ ಪ್ರದೇಶಗಳಿಗೆ ಹೋಗಿ ಶಿಕ್ಷಣ ಪಡೆಯಬೇಕೆಂದರೆ ಊರಿನ ಶ್ರೀಮಂತರ ಬಳಿ ಬೇಡಬೇಕಿತ್ತು. ಆದರೆ ಅರಸುರವರು ಹಿಂದುಳಿದವರಿಗಾಗಿ ಅನೇಕ ಶಾಲಾ, ಕಾಲೇಜು, ಹಾಸ್ಟೆಲ್,

ವಿದ್ಯಾರ್ಥಿವೇತನ ನೀಡುವ ಮೂಲಕ ಇಂದು ಆ ವಿದ್ಯಾರ್ಥಿಗಳು ಕೆಎಎಸ್, ಐಎಎಸ್ ಅಂತಹ ಉನ್ನತ ಶಿಕ್ಷಣ ಸಹ ಪಡೆಯುವಂತೆ ಮಾಡಿದ್ದಾರೆ. ಹಾಗೂ ಅವರು ತಮ್ಮ ಕಾಲ ಮೇಲೆ ನಿಲ್ಲುವ ವ್ಯವಸ್ಥೆಯನ್ನು ಸಾಧ್ಯವಾಗಿಸಿದ್ದಾರೆ.


    ಮಹಿಳಾ ಸ್ವಾವಲಂಬನೆ ಕೂಡ ಅವರಿಂದ ಸಾಧ್ಯವಾಗಿದೆ. ಪಾಲಿಕೆ ವತಿಯಿಂದ ಸಹ ಹೊಸದಾಗಿ ಮಹಿಳಾ ಬಜಾರ್ ನಿರ್ಮಿಸಲಾಗುತ್ತಿದ್ದು, ಮಹಿಳಾ ಉದ್ಯಮಿಗಳು ಅನೇಕರಿಗೆ ಕೆಲಸ ಕೊಡಬಹುದು. ಈ ನಿಟ್ಟಿನಲ್ಲಿ ಮುಂದೆ ಬರಬೇಕೆಂದು ತಿಳಿಸಿದರು.


       ಸಹ್ಯಾದ್ರಿ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಮೋಹನ ಚಂದ್ರಗುತ್ತಿ ಡಿ.ದೇವರಾಜ ಅರಸುರವರ ಜೀವನ ಚರಿತ್ರೆ ಮತ್ತು ಸಾಧನೆಗಳ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಬಸವಳಿದ ಜನರ ಆಶಾಕಿರಣವಾಗಿದ್ದವರು ಅರಸು. ಅವರೊಬ್ಬ ಸಾಮಾಜಿಕ ಚಿಕಿತ್ಸಕ, ತಜ್ಞ. ಕಷ್ಟ ಕಾರ್ಪಣ್ಯದಿಂದ ವಿಕಾಸ ಹೊಂದಿದವರು ಎಂದು ವಿದ್ಯಾರ್ಥಿಗಳಿಗೆ ಅರಸುರವರ ಇಡೀ ಜೀವನದ ಚಿತ್ರಣ ನೀಡಿದರು


       ಇಂದಿನ ಪೀಳಿಗೆಗೆ ಅಂದಿನ ಸಾಮಾಜಿಕ ಸ್ಥಿತಿಗತಿ, ಕಷ್ಟಗಳು ಗೊತ್ತಿಲ್ಲ. ಅವರಂತಹವರ ಹೋರಾಟದ ಫಲದಿಂದಲೇ ಇಂದು ನೀವೆಲ್ಲ ಉತ್ತಮ ಶಿಕ್ಷಣ ಪಡೆಯುತ್ತಿದ್ದೀರಿ. ಹಿಂದುಳಿದ ವರ್ಗಗಳ ಆತ್ಮಚೈತನ್ಯ ಎಂದು ಹೇಳಬಹುದಾದ ಹಾವನೂರು ವರದಿಯನ್ನು ಜಾರಿಗೆ ತಂದು ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಿದರು. ಅತ್ಯಂತ ಹೀನಾಯವಾದ ತಲೆ ಮೇಲೆ ಮಲ ಹೊರುವ ಪದ್ದತಿ ರದ್ದತಿಗೊಳಿಸಿದರು. ಕ್ರಾಂತಿಕಾರಿಯಾದ ಭೂಸುಧಾರಣೆ ಕಾಯ್ದೆ ಜಾರಿಗೆ ತಂದರು. ಅಂಬೇಡ್ಕರ್‍ರವರ ಚಿಂತನ ಕ್ರಮಗಳನ್ನು ಮುಂದುವರೆಸಿದ ಇಂತಹ ಮಹನೀಯರ ಜೀವನ ಚರಿತ್ರೆ, ಗುಣಗಳನ್ನು ತಿಳಿದು, ಅಳವಡಿಸಿಕೊಂಡಾಗ ನಮ್ಮ ಓದು ಮತ್ತು ಬುದ್ದಿಗೆ ಶಕ್ತಿ ಬರುತ್ತದೆ ಎಂದು ತಿಳಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶೋಭ.ಕೆ.ಆರ್ ಸ್ವಾಗತಿಸಿದರು. ವೇದಿಕೆಯಲ್ಲಿ ಸವಿತಾ ಸಮಾಜದ ಅಧ್ಯಕ್ಷ ಎಂ.ವಿಜಯಭಾಸ್ಕರ್, ದೇವರಾಜ ಅರಸು ಅಭಿವೃದ್ದಿ ನಿಗಮದ ನಿರ್ದೇಶಕ ಮಾಲತೇಶ್, ಜಿಲ್ಲಾ ಹಿಂದುಳಿದ ಒಕ್ಕೂಟದ ಅಧ್ಯಕ್ಷ ರಾಜೇಶ್, ಕಾರ್ಯದರ್ಶಿ ಅಶೋಕ್, ಜಿಲ್ಲಾ ಮೊಗವೀರ ಸಮಾಜದ ಅಧ್ಯಕ್ಷ ಅಣ್ಣಪ್ಪ, ಡಿಎಸ್‍ಎಸ್ ರಾಜ್ಯ ಸಂಚಾಲಕ ಗುರುಮೂರ್ತಿ, ಗವಿಸಿದ್ದಪ್ಪ ತೆಗ್ಗಿನಮಠ, ಒಕ್ಕೂಟಗಳ ಪದಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Exit mobile version