ಶಿವಮೊಗ್ಗ: ಶಿವಮೊಗ್ಗ–ಸಾಗರ ರಸ್ತೆಯಲ್ಲಿ ನಡೆಯುತ್ತಿರುವ ರಸ್ತೆ ಅಪಘಾತದಲ್ಲಿ ತಡೆಯಲು ಕ್ರಮ ವಹಿಸಬೇಕು ಹಾಗೂ ರಸ್ತೆ ಅಪಘಾತಕ್ಕೆ ಕಾರಣರಾಗುತ್ತಿರುವ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸೌತ್ ಏಷಿಯಾ ರಾಷ್ಟ್ರ ಮಾನವ ಹಕ್ಕುಗಳ ಫೆಡರೇಷನ್‌ನ ರಾಜ್ಯ ಘಟಕದ ಅಧ್ಯಕ್ಷ ಹಾಗೂ ರಾಜ್ಯ ಮಾನವ ಹಕ್ಕುಗಳ ಶಿವಮೊಗ್ಗ ಜಿಲ್ಲಾ ಸಮಿತಿಯ ಅಧ್ಯಕ್ಷ ಪ್ರದೀಪ್ ಕುಮಾರ್ ನೇತೃತ್ವದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅನುರಾಧ ಅವರಿಗೆ ಮನವಿ ಸಲ್ಲಿಸಲಾಯಿತು.
ಸಾಗರ ರಸ್ತೆಯ ಸಿಂಹಧಾಮದ ಹತ್ತಿರ ಏತ ನೀರಾವರಿ ಕಾಮಗಾರಿ ನಡೆಯುತ್ತಿದ್ದು, ಇಲ್ಲಿ ಗುತ್ತಿಗೆದಾರರು ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನಾಗಲಿ, ಫಲಕ, ಬ್ಯಾರಿಕೇಡ್‌ಗಳನ್ನಾಗಿ ಅಳವಡಿಸಿಲ್ಲ. ಹಾಗಾಗಿ ವಾಹನ ಸವಾರರು ದಿಢೀರ್ ಕಾಣುವ ಕಾಮಗಾರಿಯಿಂದಾಗಿ ನಾನಾ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಈಗಾಗಲೇ ಹಲವರು ಬಿದ್ದು ಗಾಯ, ಕೈಕಾಲು ಮುರಿದುಕೊಂಡಿದ್ದಾರೆ. ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸ್ಥಳ ಇದೀಗ ಜೀವ ಕಳೆದುಕೊಳ್ಳುವ ರಸ್ತೆಯಾಗಿ ಮಾರ್ಪಟ್ಟಿದೆ.
ಹಾಗಾಗಿ ಶೀಘ್ರವೇ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಬ್ಯಾರಿಕೇಡ್, ಸೂಚನಾ ಫಲಕಗಳನ್ನು ಅಳವಡಿಸಿ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಅನುರಾಧ ಅವರು ‘ಶೀಘ್ರವೇ ಈ ಬಗ್ಗೆ ಕ್ರಮ ವಹಿಸುವುದಾಗಿ’ ತಿಳಿಸಿದರು.
ಈ ವೇಳೆ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷರಾದ ಪ್ರದೀಪ್ ಮಿತ್ತಾಲ್, ಉಪಾಧ್ಯಕ್ಷರಾದ ರವಿಕುಮಾರ್, ತುಮಕೂರು ಗ್ರಾಮಾಂತರ ಯುವ ಘಟಕದ ಅಧ್ಯಕ್ಷ ಸುಧಾಕರ್, ಜಿಲ್ಲಾ ಯುವ ಸಮಿತಿಯ ದೀಪಕ್ ಇದ್ದರು.