Site icon TUNGATARANGA

ಶಿವಮೊಗ್ಗ / ಆ. 21 ರಂದು ನಡೆಯಲಿರುವ ವೀರಶೈವ ಸಮಾಜದ ಚುನಾವಣೆಯಲ್ಲಿ ನಮ್ಮ ತಂಡಕ್ಕೆ ಮತ ನೀಡಿ: ಎಸ್.ಎಸ್. ಜ್ಯೋತಿಪ್ರಕಾಶ್

ಶಿವಮೊಗ್ಗ,
ವೀರಶೈವ ಸಮಾಜದ ಅಭಿವೃದ್ಧಿಗಾಗಿ ವಯೋವೃದ್ಧರಿಗೆ ಜೀವನ ಸಂಧ್ಯಾ ಆಶ್ರಮ, ಕೌಶಲ್ಯ ಶೈಕ್ಷಣಿಕ ವಿದ್ಯಾಸಂಸ್ಥೆ ಸೇರಿದಂತೆ ಹಲವಾರು ಯೋಜನೆ ಗಳನ್ನು ನಮ್ಮ ತಂಡ ಹಮ್ಮಿಕೊಂಡಿದೆ ಎಂದು ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್ ತಿಳಿಸಿದರು.


ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಘದ ಆಡಳಿತ ಮಂಡಳಿಯ ೧೫ ಸ್ಥಾನಕ್ಕೆ ಆ. ೨೧ ರಂದು ಚುನಾವಣೆ ನಡೆಯಲಿದ್ದು, ಹಿಂದಿನ ಆಡಳಿತ ಮಂಡಳಿಯ ೧೩ ನಿರ್ದೇಶಕರು ಸೇರಿದಂತೆ ಇಬ್ಬರು ಹೊಸಬರು ಸೇರಿಕೊಂಡು ೧೫ ಜನರ ತಂಡ ರಚಿಸಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದ್ದೇವೆ ಎಂದರು.


ಪಾಲಿಕೆ ವ್ಯಾಪ್ತಿಯಲ್ಲಿ ಜನನ ಮತ್ತು ಮರಣ ನೋಂದಾಯಿಸಿ, ದಾಖಲಿಸಿ ಪ್ರಮಾಣ ಪತ್ರ ವಿತರಿಸುವುದು, ವಾರ್ಡ್ ಮಟ್ಟದಲ್ಲಿ ವೀರಶೈವ ಜನಗಣತಿ ಮಾಡುವುದು, ಸಂಘದ ಸದಸ್ಯರ ಸಂಖ್ಯೆಯನ್ನು ೧೫ ಸಾವಿರಕ್ಕೆ ಮುಟ್ಟಿಸುವ ಗುರಿ, ಸಮಾಜದ ಪ್ರತಿಭಾವಂತ ಒಂದು ಸಾವಿರ ಮಕ್ಕಳಿಗೆ ಪುರಸ್ಕರಿಸುವುದು, ಐಎಎಸ್, ಕೆಎಎಸ್ ಪರೀಕ್ಷೆ ಬರೆಯಲಿಚ್ಛಿಸುವ ಸುಮಾರು ೨೫ -೫೦ ಅರ್ಹ ವಿದ್ಯಾರ್ಥಿಗಳನ್ನು ಸಂಘದ ವತಿಯಿಂದ ದತ್ತು ಪಡೆದು ಸೂಕ್ತ ವ್ಯವಸ್ಥೆ ಕಲ್ಪಿಸುವುದು, ಶವ ಸಂಸ್ಕಾರಕ್ಕೆ ಉಚಿತ ವಾಹನ ವ್ಯವಸ್ಥೆ, ಕಡು ಬಡವರಿಗೆ ಕೌಶಲ್ಯ ತರಬೇತಿ, ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ಹಲವಾರು ಯೋಜನೆಗಳನ್ನು ನಮ್ಮ ತಂಡ ಹೊಂದಿದೆ ಎಂದರು.


೨೦೦೩ ರಲ್ಲಿ ಸಂಘದ ಮೊದಲ ಚುನಾವಣೆ ನಡೆದಿದ್ದು, ಇದಕ್ಕೂ ಮೊದಲು ನಮ್ಮ ಸಂಸ್ಥೆಗೆ ಆಡಳಿತಾಧಿಕಾರಿಗಳು ಕಾರ್ಯಭಾರ ನಡೆಸುತ್ತಿದ್ದರು. ನಂತರ ಇದು ರದ್ದಾಗಿ ೨೦೧೨ ರಲ್ಲಿ ಆಡಳಿತ ಮಂಡಳಿಗೆ ಚುನಾವಣೆ ನಡೆದು ೧೫ ನಿರ್ದೇಶಕರು ಆಯ್ಕೆಯಾದರು. ೨೦೧೨ -೧೩ ನೇ ಸಾಲಿನಲ್ಲಿ ನೂತನ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡ ಸಮಯದಲ್ಲಿ ಸಂಘಕ್ಕೆ ಬಾಡಿಗೆ ರೂಪದಲ್ಲಿ ವಾರ್ಷಿಕ ೫೨.೦೭ ಲಕ್ಷ ರೂ. ಆದಾಯ ಬರುತ್ತಿತ್ತು. ೨೦೨೨ ನೇ ಆರ್ಥಿಕ ವರ್ಷದಲ್ಲಿ ೧.೮೯ ಕೋಟಿ ರೂ. ಆದಾಯ ಬರುತ್ತಿದೆ. ಪ್ರಸ್ತುತ ಸಂಘದ ಹೆಸರಿನಲ್ಲಿ ನೋಂದಾಯಿಸಿರುವ ಬ್ಯಾಂಕ್ ಖಾತೆಯಲ್ಲಿ ೪.೧೭ ಕೋಟಿ ರೂ. ಠೇವಣಿ ಇಡಲಾಗಿದೆ ಎಂದರು.


ಆ. ೨೧ ರಂದು ಬೆಳಗ್ಗೆ ೯ ರಿಂದ ಸಂಜೆ ೪ ಗಂಟೆಯವರೆಗೆ ಶ್ರೀ ಬಸವೇಶ್ವರ ವಿದ್ಯಾಸಂಸ್ಥೆಯಲ್ಲಿ ನಡೆಯಲಿರುವ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ನಮ್ಮ ತಂಡ ಎಲ್ಲಾ ೧೫ ಸ್ಪರ್ಧಿಗಳಿಗೆ ಮತ ನೀಡುವುದರ ಮೂಲಕ ಜಯಶೀಲರನ್ನಾಗಿ ಮಾಡಬೇಕೆಂದು ಜ್ಯೋತಿಪ್ರಕಾಶ್ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸ್ಪರ್ಧಿಗಳಾದ ಆನಂದ್ ಪಿ. ವಾಲಿ, ಎಂ.ಎನ್. ಒಡೆಯರ್, ಹೆಚ್.ಜೆ. ಚಂದ್ರಶೇಖರ್, ಟಿ.ಬಿ. ಜಗದೀಶ್, ಕೆ.ಎಸ್. ತಾರಾನಾಥ್, ಕೆ.ಸಿ. ನಾಗರಾಜ್, ಎನ್.ಜೆ.ರಾಜಶೇಖರ್ ಇತರರಿದ್ದರು.

Exit mobile version