Site icon TUNGATARANGA

ಗುರುತರ ಅವಕಾಶ ಸಿಕ್ಕಾಗ ಸಮರ್ಪಕವಾಗಿ ಬಳಿಸಿಕೊಳ್ಳಲು ಶೋಭಾ ವೆಂಕಟರಮಣ ಕರೆ

ಚೆಸ್- ಯೋಗ ಸ್ಪರ್ಧೆ ಆರಂಭ

ಶಿವಮೊಗ್ಗ, ಆ.೧೯:
ಅವಕಾಶಗಳು ದೊರೆತಾಗ ಅದನ್ನು ಸಮರ್ಪಕವಾಗಿ ಬಳಸಿಕೊಂಡು ಅಲ್ಲಿಂದ ತಮ್ಮಸಾಧನೆಯ ಗುರಿ ಮುಟ್ಟಬಹುದು. ಇಂತಹ ಆದ್ಯತೆಗಳು ಕ್ರೀಡೆಗಳಲ್ಲಿ ಅದರಲ್ಲೂ ಚೆಸ್ ಹಾಗೂ ಯೋಗಾಸನದಲ್ಲಿ ಹೆಚ್ಚಾಗಿ ದೊರಕುತ್ತವೆ ಎಂದು ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಶೋಭಾ ವೆಂಕಟರಮಣ ಇಂದಿಲ್ಲಿ ತಿಳಿಸಿದರು.


ಅವರು ಇಂದು ಬೆಳಗ್ಗೆ ರಾಮಕೃಷ್ಣ ವಿದ್ಯಾನಿಕೇತನ ಶಾಲೆಯಲ್ಲಿ ಆರಂಭಗೊಂಡ ಅನುದಾನರಹಿತ ಶಾಲೆಗಳ ವಲಯಮಟ್ಟದ ಚೆಸ್ ಹಾಗೂ ಯೋಗಾಸನ ಪಂದ್ಯಾವಳಿಯ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.
೫೦ಕ್ಕೂ ಹೆಚ್ಚು ಶಾಲೆಗಳಿಂದ ನೀವು ತಲಾ ೫ಜನ ಮಕ್ಕಳಂತೆ ಆಯ್ಕೆಯಾಗಿರುವುದು ಸಹ ನಿಮಗೆ ದೊರೆತ ಅವಕಾಶ. ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಉನ್ನತಸ್ಥಾನಕ್ಕೆರಲು ಕರೆ ನೀಡಿದರು.
ಪ್ರಸಕ್ತವರ್ಷ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ದೇಶದ ಬಾವುಟವನ್ನು ಅತಿ ಎತ್ತರಕ್ಕೆ ಏರಿಸಿದ ಸಾಧನೆ ನಮ್ಮ ದೇಶದ ಪ್ರತಿಭಾನ್ವಿತ ಕ್ರೀಡಾಪಟುಗಳಿಂದ ಸಾಧ್ಯವಾಯಿತು. ಕೊನೆಯ ಸ್ಥಾನದಲ್ಲಿ ಸದಾ ನಿರಾಶೆಯನ್ನೇ ಕಾಣುತ್ತಿದ್ದ ದೇಶದ ತಂಡ ಈ ಭಾರಿ ೪ನೇ ಸ್ಥಾನಕ್ಕೇರಿದ್ದು ಶ್ಲಾಘನೀಯ ಸಂಗತಿ. ಇದು ನಿಮಗೆಲ್ಲ ಸ್ಪೂರ್ತಿಯಾಗಬೇಕು ಎಂದು ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ತುಂಗಾ ತರಂಗ ದಿನಪತ್ರಿಕೆಯ ಸಂಪಾದಕ ಎಸ್.ಕೆ.ಗಜೇಂದ್ರಸ್ವಾಮಿ ಮಾತನಾಡುತ್ತಾ, ಆರಂಭದ ವಲಯಮಟ್ಟದ ವಿಭಾಗದಲ್ಲಿನ ಆಯ್ಕೆ ನಿಮ್ಮ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ವಿಭಾಗಕ್ಕೆ ಕೊಂಡೊಯ್ಯುವ ಸಾಧನವಾಗಿದೆ. ಸಂಪೂರ್ಣ ಮಾನಸಿಕ ಸ್ಥಿಮಿತತೆ ಮತ್ತು ಏಕಾಗ್ರತೆಯನ್ನು ಕ್ರೂಢೀಕರಿಸುವ ಚೆಸ್ ಹಾಗೂ ಯೋಗಕ್ಕೆ ಸೂಕ್ತ ತರಬೇತಿ ಅತ್ಯಗತ್ಯ. ಇದರ ಸದ್ಬಳಕೆ ನಿಮಗಾಗಲೀ ಜಿಲ್ಲೆ ಮೆಚ್ಚುವ ಕ್ರೀಡಾಪಟುಗಳಾಗಿ ಹೊರಹೊಮ್ಮಿ ಎಂದು ಶುಭಹಾರೈಸಿದರು.


ಮುಖ್ಯಅತಿಥಿಗಳಾಗಿದ್ದ ಅನುದಾನರಹಿತ ಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ರಾ.ಹ.ತಿಮ್ಮೇನಹಳ್ಳಿ ಅವರು ಮಕ್ಕಳಿಗೆ ಶುಭಹರಿಸಿದರು.
ಯೋಗ ಸ್ಪರ್ಧೆಯ ಮುಖ್ಯತೀರ್ಪುಗಾರರಾದ ಸುನೀತಾ, ರಾಮಕೃಷ್ಣ ಶಾಲೆಯ ಮುಖ್ಯಶಿಕ್ಷಕ ತೀರ್ಥೇಶ್, ಗಜೇಂದ್ರನಾಥ ಹಾಗೂ ಶಿಕ್ಷಕರು, ಎಲ್ಲಾ ಶಾಲೆಯ ದೈಹಿಕ ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು.

Exit mobile version