Site icon TUNGATARANGA

761 ಆಸ್ತಿಗಳನ್ನು ವಕ್ಫ್ ಸಂಸ್ಥೆಗೆ ಉಳಿಸಲಾಗಿದೆ: ಹಬೀಬುಲ್ಲಾ

ಶಿವಮೊಗ್ಗ ,ಆ.31:

ತಮ್ಮ ಅಧಿಕಾರ ಅವಧಿಯಲ್ಲಿ ಪ್ರಾಮಾಣಿಕವಾಗಿ ಸಾಕಷ್ಟು ಅಭಿವೃದ್ಧಿಯ ಕೆಲಸ ಮಾಡಿರುವೆ ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ. ಹಬೀಬುಲ್ಲಾ ಹೇಳಿದರು.
ಅವರು ತಮ್ಮ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ, ಮೂರು ವರ್ಷಗಳ ಸಾಧನೆ ಮತ್ತು ಯಶಸ್ಸು ಕುರಿತ ಕಿರುಹೊತ್ತಿಗೆ ಬಿಡುಗಡೆ ಮಾಡಿ, ಮಾತನಾಡುತ್ತಿದ್ದರು.
ಸರ್ಕಾರ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾಗಿ ಮೂರು ವರ್ಷದ ಅವಧಿಗೆ ನನ್ನ ನೇಮಕ ಮಾಡಿದ್ದು, ಈ ಅವಧಿಯಲ್ಲಿ ನಾನು ಸಮುದಾಯದ ಕೆಲಸವನ್ನು ನಿಷ್ಠೆ ಮತ್ತು ಭಕ್ತಿಯಿಂದ ಮಾಡಿದ್ದೇನೆ. ವಕ್ಫ್ ಮಂಡಳಿಗೆ ಸೇರಿದ್ದ ಆಸ್ತಿಯನ್ನು ಉಳಿಸಿಕೊಳ್ಳುವ ಎಲ್ಲಾ ಪ್ರಯತ್ನ ಮಾಡಿದ್ದೇನೆ. ಮತ್ತು ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ ಎಂದು ವಿವರಣೆ ನೀಡಿದರು.
ತಿಲಕ್ ನಗರದ ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ ಇದ್ದ ಒಂದು ಎಕರೆ ಜಾಗದ ವಿವಾದವನ್ನು ಜಿಲ್ಲಾಧಿಕಾರಿಗಳ ಜೊತೆ, ತಹಶೀಲ್ದಾರ್‍ಗಳ ಜೊತೆ ಮಾತನಾಡಿ, ಅದನ್ನು ಉಳಿಸಿಕೊಂಡಿರುವೆ. ಹಾಗೆಯೇ ಗೋಪಾಳದ ಸುನ್ನೀ ಕಬರ್‍ಸ್ತಾನಿನ 2.12 ಎಕರೆ ಜಾಗದಲ್ಲಿ ಒತ್ತುವರಿ ಮಾಡಿಕೊಳ್ಳಲಾಗಿದ್ದು, ಇದನ್ನು ಕೂಡಾ ಪರಿಶೀಲನೆ ಮಾಡಿ ಉಳಿಸಿಕೊಂಡಿದ್ದೇವೆ ಎಂದರು.
ಎ.ಎ. ಸರ್ಕಲ್ ಬಳಿ ಇರುವ ಮಖಾನ್ ಕಬರ್‍ಸ್ತಾನ್ ಜಾಗದಲ್ಲಿ ಹಲವು ವ್ಯಾಪಾರಸ್ಥರು ಹಲವಾರು ವರ್ಷಗಳಿಂದ ವ್ಯಾಪಾರ ಮಾಡುತ್ತಾ ಬಂದಿದ್ದರು. ಈ ಜಾಗವು ವಕ್ಫ್ ಮಂಡಳಿಗೆ ಸೇರಿತ್ತಾದರೂ ಅಲ್ಲಿನ ಸುನ್ನೀ ಜಮಾತ್ ಕಮಿಟಿಯವರು ಬಾಡಿಗೆದಾರರಿಂದ ತಾವೇ ಬಾಡಿಗೆ ಪಡೆಯುತ್ತಿದ್ದರು. ಇದನ್ನು ನ್ಯಾಯಾಲಯದ ಮೂಲಕ ಬಗೆಹರಿಸಿ, ಬಾಡಿಗೆದಾರರ ಮನವೊಲಿಸಿ ವಕ್ಫ್ ಮಂಡಳಿಗೆ ಬಾಡಿಗೆ ಬರುವಂತೆ ಮಾಡಿದ್ದೇನೆ ಎಂದರು.
ಇದಲ್ಲದೇ ಸಹ್ಯಾದ್ರಿ ಕಾಲೇಜಿನ ಹಿಂಭಾಗದಲ್ಲಿದ್ದ 2.30 ಎಕರೆ ಜಾಗದಲ್ಲಿ ಲೋಕೋಪಯೋಗಿ ಇಲಾಖೆಯವರು ತುಂಗಾನಾಲೆಯನ್ನು ನಿರ್ಮಿಸುತ್ತಿದ್ದರು. ಇದನ್ನು ತಪ್ಪಿಸಿ ಕುವೆಂಪು ವಿವಿ ಅಧಿಕಾರಿಗಳ ಜೊತೆ ಮಾತನಾಡಿ, ಈ ಜಾಗವನ್ನು ಉಳಿಸಿಕೊಂಡಿದ್ದೇವೆ ಮತ್ತು ಇಲ್ಲಿ ಒಂದು ಕೋಟಿ ರೂ. ವಿಶೇಷ ಅನುದಾನದಲ್ಲಿ ಹಾಸ್ಟೆಲ್ ಸ್ಥಾಪಿಸುವ ಇರಾದೆ ಹೊಂದಲಾಗಿದೆ ಎಂದರು.
ಒಟ್ಟಾರೆ ಇಡೀ ಶಿವಮೊಗ್ಗ ಜಿಲ್ಲೆಯಲ್ಲಿ ಕೈತಪ್ಪಿ ಹೋಗಲಿದ್ದ ಸುಮಾರು 761 ಆಸ್ತಿಗಳನ್ನು ವಕ್ಫ್ ಸಂಸ್ಥೆಗೆ ಉಳಿಸಿಕೊಂಡಿದ್ದೇವೆ. ಇದರಲ್ಲಿ 621 ಆಸ್ತಿಗಳು ಕ್ಲೀಯರ್ ಆಗಿವೆ. 228 ಆಸ್ತಿಗಳನ್ನು ಲಾಕ್ ಮಾಡಿಸಿದ್ದೇವೆ. 140 ಆಸ್ತಿಗಳು ಪ್ರಗತಿಯಲ್ಲಿವೆ ಎಂದರು.
ಸುಮಾರು 6 ಕೋಟಿ ಅನುದಾನದ ಹಣವನ್ನು ಸಮುದಾಯದ ವಿವಿಧ ಅಭಿವೃದ್ಧಿಗೆ ಸಮರ್ಪಕವಾಗಿ ಬಳಸಿಕೊಂಡಿದ್ದೇವೆ. ಮಸೀದಿಗಳ, ಕಬರ್‍ಸ್ತಾನಗಳ, ದರ್ಗಾಗಳ, ಮದರಸಗಳ ಅಭಿವೃದ್ಧಿಗಾಗಿ ಅನುದಾನದ ಹಣ ಮತ್ತು ವಿಶೇಷ ಅನುದಾನದ ಹಣ ಬಳಸಿಕೊಂಡು ಕಳೆದ ಮೂರು ವರ್ಷಗಳಲ್ಲಿ ಬಹುದೊಡ್ಡ ಸಾಧನೆ ಮಾಡಿದ್ದೇವೆ ಎಂದು ಹಬೀಬುಲ್ಲಾ ತಿಳಿಸಿದರು.
ಇದಲ್ಲದೇ ಮದರಸಗಳಿಗೆ ಒಂದು ಕೋಟಿ, ದರ್ಗಾಗಳ ಅಭಿವೃದ್ದಿಗೆ 12 ಕೋಟಿ4 ಸೇರಿದಂತೆ ಹಲವಾರು ಕೋಟಿಗಳ ವಿಶೇಷ ಅನುದಾನದ ನಿರೀಕ್ಷೆಯಲ್ಲಿದ್ದೇವೆ. ನಮ್ಮ ಸಮಿತಿ ಕಳೆದ ಅತಿವೃಷ್ಟಿಗೆ ತುತ್ತಾದವರಿಗೆ ಮತ್ತು ಕೋವಿಡ್ ಸಂಕಷ್ಟದಲ್ಲಿರುವವರಿಗೆ ಹೆಚ್ಚಿನ ನೆರವನ್ನು ನೀಡಿದ್ದೇವೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಸದಸ್ಯರಾದ ಬುಡೇನ್‍ಖಾನ್, ಇನಾಯಿತ್ ಮೌಲಾನ, ನಜ್ಮೂಲ್ ಇಸ್ಲಾಮ್ ಖಾನ್, ಮಹಮ್ಮದ್ ಹುಸೇನ್, ನಸೀಮ್‍ಖಾನ್, ಜೇನುಬ್ ಸೇರಿದಂತೆ ಹಲವರಿದ್ದರು.

Exit mobile version