Site icon TUNGATARANGA

ಶಿವಮೊಗ್ಗ / ಚಾಕು ಚೂರಿ ಹಾಕಿದವರಿಗೆ ಗುಂಡೇಟು ಕೊಟ್ಟು ಮೂಲೆಯಲ್ಲಿ ಕೂರಿಸಲಾಗಿದೆ. ಇದು ಸ್ಯಾಂಪಲ್ ಅಷ್ಟೇ ಪಿಚ್ಚರ್ ಅಭಿ ಬಾಕಿ ಹೈ:ಮಾಜಿ ಉಪಮುಖ್ಯಮಂತ್ರಿ. ಕೆ.ಎಸ್,ಈಶ್ವರಪ್ಪ

ಶಿವಮೊಗ್ಗ: ಚಾಕು ಚೂರಿ ಹಾಕುವವರಿಗೆ ಗುಂಡೇಟು ಹೊಡೆದು ಕೂರಿಸಲಾಗಿದೆ. ಇದು ಕೇವಲ ಸ್ಯಾಂಪಲ್ ಅಷ್ಟೇ ಪಿಚ್ಚರ್ ಅಭಿ ಬಾಕಿ ಹೈ ಎಂದು ಕೆ.ಎಸ್. ಈಶ್ವರಪ್ಪ ಹೇಳಿದರು.


ಇಂದು ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರೇಮ್ ಸಿಂಗ್ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರೇಮ್ ಸಿಂಗ್ ಕುಟುಂಬಕ್ಕೆ ಎಲ್ಲಾ ರೀತಿಯ ನೆರವು ನೀಡಲಾಗುವುದು. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿ ಗುಣಮುಖರಾಗುತ್ತಿದ್ದಾರೆ. ಮುಸಲ್ಮಾನ್ ಗೂಂಡಾಗಳ ಈ ದುಷ್ಕೃತ್ಯವನ್ನು ನಾನು ಬಲವಾಗಿ ಖಂಡಿಸುತ್ತೇನೆ. ದುಷ್ಕರ್ಮಿಗಳನ್ನು ಮಟ್ಟ ಹಾಕಲು ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದೇವೆ ಎಂದರು.


ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಇಂದು ಒಬ್ಬ ಸಜ್ಜನ ವ್ಯಕ್ತಿಯ ಮೇಲೆ ಹಲ್ಲೆಯಾಗಿದೆ. ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿದ್ದು, ಘಟನೆಗೆ ಕಾರಣರಾಗುತ್ತಿರುವ ದುಷ್ಕರ್ಮಿಗಳ ಮನಸ್ಥಿತಿ ಬದಲಾಗಬೇಕಾಗಿದೆ. ಅನೇಕ ವರ್ಷಗಳಿಂದ ಯಾವುದೋ ಪ್ರಚೋದನೆಗೆ ಒಳಗಾಗಿ ಈ ರೀತಿಯ ಪ್ರಕರಣಗಳು ಕೆಲವು ರಾಜಕೀಯ ವ್ಯಕ್ತಿಗಳ ರಕ್ಷಣೆಯಿಂದಾಗಿ ಮರುಕಳಿಸುತ್ತಿವೆ. ಹರ್ಷ, ಮಂಗಳೂರಿನ ಪ್ರವೀಣ್ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಎರಡು ದಿನಗಳ ಒಳಗೆ ಆರೋಪಿಗಳನ್ನು ಬಂಧಿಸುವ ಪ್ರಕ್ರಿಯೆ ನಡೆದಿದೆ ಎಂದರು.


ಹಿಂದೆ ಆಡಳಿತ ನಡೆಸಿದವರು ಇಂತಹ ಶಕ್ತಿಗಳಿಗೆ ಬೆಂಬಲ ನೀಡುತ್ತಾ ಬಂದಿದ್ದರಿಂದ ಅವರಿಗೆ ಬಲ ಬಂದಂತಾಗಿದ್ದು, ಅದರ ಫಲ ಜನ ಸಾಮಾನ್ಯರು ಅನುಭವಿಸುವಂತಾಗಿದೆ. ಇಡೀ ವ್ಯವಸ್ಥೆಗೆ ಆರ್ಥಿಕ ಹೊಡೆತ ನೀಡುವ ಈ ರೀತಿಯ ಪ್ರಕರಣಗಳನ್ನು ವಿಪಕ್ಷಗಳು ಖಂಡಿಸಬೇಕಿತ್ತು. ಬದಲಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಭಾವಚಿತ್ರವನ್ನು ಮುಸ್ಲಿಂ ಏರಿಯಾದಲ್ಲಿ ಯಾಕೆ ಹಾಕಬೇಕಿತ್ತು ಎಂದು ಪ್ರಶ್ನಿಸುತ್ತಾರೆ. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರಿಗೆ ಈ ರೀತಿ ಅವಮಾನ ಮಾಡುತ್ತಿರುವುದು ಸರಿಯಲ್ಲ. ಇಂತಹ ಹೇಳಿಕೆಗಳೇ ದುಷ್ಕರ್ಮಿಗಳು ಬೆಳೆಸಿದೆ ಎಂದರು.


ದೇಶದ ಹಿತದೃಷ್ಠಿಯಿಂದ ಇಂತಹ ಹೇಳಿಕೆಗಳನ್ನು ಕೊಡಬಾರದು. ಗೃಹ ಸಚಿವರು ಮತ್ತು ಬಿಜೆಪಿ ಸರ್ಕಾರ ಮತೀಯ ಶಕ್ತಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ. ಎಸ್.ಡಿ.ಪಿ.ಐ., ಪಿಎಫ್‌ಐ ಬ್ಯಾನ್ ಮಾಡಿದರೂ ಬೇರೆ ಬೇರೆ ಲೇಬಲ್ ನಲ್ಲಿ ಇವು ಈ ರೀತಿಯ ಕೃತ್ಯಕ್ಕೆ ಕೈಹಾಕುತ್ತವೆ. ಅದಕ್ಕಾಗಿ ಮೂಲ ಬೇರು ತೆಗೆಯುವ ಕೆಲಸ ಮಾಡುತ್ತಿದ್ದೇವೆ. ಅವರ ಬೆಂಬಲ ನೀಡುವವರ ಮನಸ್ಥಿತಿಯೂ ಬದಲಾಗಬೇಕು. ಸ್ವಾತಂತ್ರ್ಯ ಬಂದು ೭೫ ವರ್ಷವಾದರೂ ಈ ರೀತಿಯ ಘಟನೆ ಮರುಕಳಿಸುತ್ತಿರುವುದು ಹಿಂದೂ ಪ್ರೇಮಿಗಳಿಗೆ ಬೇಸರ ತಂದಿದೆ. ಆದರೆ, ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿ ಶಿಕ್ಷೆಗೆ ಗುರಿಪಡಿಸುವ ಕೆಲಸ ಆಗುತ್ತಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳಿಗೆ ಫುಲ್ ಸ್ಟಾಪ್ ಹಾಕಲು ಸರ್ಕಾರ ಬದ್ಧವಾಗಿದೆ.

ದಿನಗೂಲಿ ನೌಕರರು ಮತ್ತು ಪಾನಿ ಪೂರಿ ಮಾರುವಂತಹವರು ಮಧ್ಯಾಹ್ನದ ಸಂದರ್ಭದಲ್ಲಿ ಈ ರೀತಿಯ ಘಟನೆಗಳಾದಾಗ ತಮ್ಮ ದಿನನಿತ್ಯದ ಬದುಕಿಗೆ ತೊಂದರೆ ಅನುಭವಿಸುತ್ತಾರೆ. ನೂರಾರು ಕುಟುಂಬಗಳಿಗೆ ಆರ್ಥಿಕ ಹಿನ್ನಡೆ ಉಂಟಾಗುತ್ತದೆ. ಸರ್ಕಾರಕ್ಕೆ ಇದರ ಅರಿವಿದ್ದು, ದುಷ್ಟ ಶಕ್ತಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತದೆ.


ಈ ಸಂದರ್ಭದಲ್ಲಿ ಪ್ರಮುಖರಾದ ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ನಗರಾಧ್ಯಕ್ಷ ಜಗದೀಶ್, ಮೇಯರ್ ಸುನಿತಾ ಅಣ್ಣಪ್ಪ, ಚನ್ನಬಸಪ್ಪ, ಎಸ್. ದತ್ತಾತ್ರಿ, ಸೂಡಾ ಅಧ್ಯಕ್ಷ ನಾಗರಾಜ್ ಮೊದಲಾದವರಿದ್ದರು.

Exit mobile version