ಶಿವಮೊಗ್ಗ,ಆ.31:
ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಆರಾಧನಾ ಸಮಿತಿಯ ನೂತನ ಅಧ್ಯಕ್ಷರಾಗಿ ಇಂದು ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿ.ಆರ್. ಮಧುಸೂದನ್ ಅಧಿಕಾರ ಸ್ವೀಕರಿಸಿದರು.
ನಂತರ ಮಾತನಾಡಿದ ಅವರು, ಪಕ್ಷ ನನ್ನ ಕೆಲಸ ಗುರುತಿಸಿ ಜವಾಬ್ದಾರಿ ನೀಡಿದೆ. ಆ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವೆ. ಜನ ಮೆಚ್ಚುವಂತೆ ಕೆಲಸ ಮಾಡುವೆ. ದೇವಸ್ಥಾನಗಳ ಅಭಿವೃದ್ಧಿಗೆ ಎಲ್ಲರ ಸಹಕಾರ ಪಡೆದು ಶ್ರಮಿಸುವುದಾಗಿ ತಿಳಿಸಿದರು.
ನಂತರ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಶಿವಮೊಗ್ಗ ನಗರದ 35 ವಾರ್ಡ್‍ಗಳಲ್ಲಿರುವ ಎಲ್ಲಾ ದೇವಸ್ಥಾನಗಳ ಅಭಿವೃದ್ಧಿಗೆ ಸರ್ಕಾರದಿಂದ ಸೂಕ್ತ ಅನುದಾನ ತರಲು ಹಿಂದುಮುಂದೆ ನೋಡುವುದಿಲ್ಲ ಎಂದರು.
ದೇವಸ್ಥಾನಗಳು ಧಾರ್ಮಿಕ ಕೇಂದ್ರಗಳಾಗಬೇಕು. ಅಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಆ ವಾರ್ಡ್‍ನ ಪ್ರಮುಖರು ಹಾಗು ಭಕ್ತಾದಿಗಳೊಂದಿಗೆ ಚರ್ಚಿಸಿ ಶೀಘ್ರವೇ ಯೋಜನೆಗಳನ್ನು ರೂಪಿಸಬೇಕು. ಈ ನಿಟ್ಟಿನಲ್ಲಿ ನೂತನ ಅಧ್ಯಕ್ಷರು ಸದಸ್ಯರು ಕಾರ್ಯ ನಿರ್ವಹಿಸುವ ಭರವಸೆ ತಮಗಿದೆ ಎಂದರು.
ಪೂಜೆ ಮಾಡುವ ವ್ಯಕ್ತಿಯಲ್ಲಿರುವ ದೌರ್ಬಲ್ಯ ದೂರವಾಗುತ್ತದೆ. ಕೆಲವು ದೇವಸ್ಥಾನಗಳಲ್ಲಿ ಸಮಿತಿಗಳೇ ಇಲ್ಲ. ಸಮಿತಿಯವರು ಹಾಗೂ ಅಧಿಕಾರಿಗಳು ಸೇರಿಕೊಂಡು ಅಲ್ಲಿ ಸಮಿತಿ ರಚಿಸಿ, ದೇವಸ್ಥಾನದ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಸಮಿತಿಗೆ ಶುಭ ಕೋರಿದ ಅವರು, ನಿಮ್ಮ ಜೊತೆಯಲ್ಲಿ ನಾನಿರುತ್ತೇನೆ ಎಂದರು.
ವೇದಿಕೆಯಲ್ಲಿ ಮೇಯರ್ ಸುವರ್ಣ ಶಂಕರ್, ಉಪಮೇಯರ್ ಸುರೇಖಾ ಮುರುಳೀಧರ್, ಕರ್ನಾಟಕ ರಾಜ್ಯ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಮುಖಂಡರಾದ ಎಸ್. ಜ್ಞಾನೇಶ್ವರ್, ಎಸ್.ಎನ್. ಚನ್ನಬಸಪ್ಪ, ಗಿರೀಶ್ ಪಟೇಲ್, ಸಮಿತಿಯ ನೂತನ ಸದಸ್ಯರಾದ ದಿನೇಶ್, ಮಹಾಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು