Site icon TUNGATARANGA

ಭದ್ರಾವತಿಯಲ್ಲಿ ಬಜರಂಗದಳ ಕಾರ್ಯಕರ್ತ ಸುನೀಲ್ ಮೇಲೆ ಹಲ್ಲೆ, ಉದ್ವಿಗ್ನತೆಗೆ ಪೊಲೀಸರ ಕಡಿವಾಣ

ಭದ್ರಾವತಿ,ಆ.16:
ಶಿವಮೊಗ್ಗದಲ್ಲಿ ನಿನ್ನೆ ಉಂಟಾದ ಗಲಭೆ ಹಿನ್ನೆಲೆಯಲ್ಲಿ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ ನಂತರವೂ ಬಜರಂಗದಳ ಕಾರ್ಯಕರ್ತ ಸುನೀಲ್ ಮೇಲೆ ಹಲ್ಲೆ ನಡೆಸಿದ ಘಟನೆ ಭದ್ರಾವತಿಯಲ್ಲಿ ನಡೆದಿದೆ.


ನೆಹರೂ ನಗರದಲ್ಲಿ ಡಿಚ್ಚಿ ಮುಬಾರತ್ ಎಂಬಾತನಿಗೂ ಸುನೀಲ್’ಗೂ ಗಲಾಟೆ ನಡೆದಿದ್ದು, ಈ ವೇಳೆ ಸುನೀಲ್ ಮೇಲೆ ಹಲ್ಲೆ ನಡೆಸಲಾಗಿದೆ. ಚಾಕುವಿನಿಂದ ಇರಿಯಲು ಯತ್ನಿಸಲಾಗಿದೆ. ಆದರೆ, ಸುನೀಲ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಇಬ್ಬರ ನಡುವಿನ ಹಳೆಯ ವೈಮನಸ್ಯಕ್ಕೆ ನಡೆದಿದ್ದು ಎಂದು ಹೇಳಲಾಗಿದ್ದರೂ, ಸೂಕ್ಷ್ಮ ಸಮಯದ ವೇಳೆ ಇಂತಹ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.


ಹಳೇನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಶಿವಮೊಗ್ಗದ ಘಟನೆ ಹಿನ್ನೆಲೆಯಲ್ಲಿ ನಗರದಲ್ಲೂ ಸಹ ನಿನ್ನೆಯಿಂದಲೇ ಸೆಕ್ಷನ್ ಜಾರಿಗೊಳಿಸಲಾಗಿದ್ದು, ನಗರದಲ್ಲಿ ಹೆಜ್ಜೆ ಹೆಜ್ಜೆಗೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ನಿನ್ನೆ ಸಂಜೆಯಿಂದಲೇ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ಅವರೇ ಖುದ್ಧು ಭದ್ರತಾ ವ್ಯವಸ್ಥೆಯನ್ನು ಕೈಗೊಂಡಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗೆ ಆಸ್ಪದ ಆಗದಂತೆ ಕ್ರಮ ವಹಿಸಿದ್ದಾರೆ.

Exit mobile version