Site icon TUNGATARANGA

ಸಚಿವರಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಭೇಟಿ, ಸಿಸಿ ಕ್ಯಾಮರಾಕ್ಕೆ ಸೂಚನೆ

ಶಿವಮೊಗ್ಗ, ಆ.31:

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕರೋನಾ ಪಾಸಿಟಿವ್ ವ್ಯಕ್ತಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಖಾತ್ರಿಪಡಿಸಲು ವಾರ್ಡ್‍ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು ಕಾರ್ಯ ಚಟುವಟಿಕೆಗಳನ್ನು ನಿರಂತರವಾಗಿ ಗಮನಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.

ಅವರು ಸೋಮವಾರ ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿ ಕರೋನಾ ಪಾಸಿಟಿವ್ ವ್ಯಕ್ತಿಗಳಿಗೆ ಕಲ್ಪಿಸಲಾಗಿರುವ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ಕರೊನಾ ಪಾಸಿಟಿವ್ ವಾರ್ಡ್‍ನಲ್ಲಿ ಮೈಕ್ ವ್ಯವಸ್ಥೆ ಅಳವಡಿಸಲಾಗಿದ್ದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿರುವ ಕಂಟ್ರೋಲ್ ರೂಂನಿಂದ ನೇರವಾಗಿ ವೈದ್ಯರೊಂದಿಗೆ ಅಥವಾ ಕರ್ತವ್ಯದಲ್ಲಿರುವ ದಾದಿಯರೊಂದಿಗೆ ಮಾತುಕತೆ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಈ ಸೌಲಭ್ಯವನ್ನು ರೋಗಿಗಳು ಸಹ ಬಳಸಿಕೊಳ್ಳಬಹುದಾಗಿದೆ ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.

ವಾರ್ಡ್‍ನಲ್ಲಿ ಟೆಲಿಫೋನ್ ವ್ಯವಸ್ಥೆ ಸಹ ಕಲ್ಪಿಸಲಾಗಿದ್ದು, ರೋಗಿಗಳ ಸಂಬಂಧಿಕರು ಈ ಮೂಲಕ ತಮ್ಮವರ ಆರೋಗ್ಯದ ಕುರಿತು ಮಾಹಿತಿಯನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ. ರೋಗಿಗಳು ಸಹ ಇದರ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.

ತಪಾಸಣಾ ವರದಿ ಲಭ್ಯ: ಕರೋನಾ ಪರೀಕ್ಷೆ ಕುರಿತು ಫಲಿತಾಂಶವನ್ನು ಸಂಬಂಧಪಟ್ಟವರಿಗೆ ಒದಗಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ರ್ಯಾಪಿಡ್ ಆಂಟಿಜನ್ ಟೆಸ್ಟ್ ಮೂಲದ ಫಲಿತಾಂಶ ನೇರವಾಗಿ ಸಂಬಂಧಪಟ್ಟವರ ಮೊಬೈಲ್‍ಗೆ ಸಂದೇಶದ ಮೂಲಕ ಕಳುಹಿಸಲಾಗುತ್ತಿದೆ. ಆರೋಗ್ಯ ಇಲಾಖೆ ಇದಕ್ಕಾಗಿ ಸಿದ್ಧಪಡಿಸಿರುವ ವೆಬ್‍ಸೈಟ್‍ನಲ್ಲಿಯೂ ಫಲಿತಾಂಶ 32ಗಂಟೆಯ ಒಳಗಾಗಿ ಲಭ್ಯವಾಗಲಿದೆ ಎಂದು ಅವರು ಹೇಳಿದರು.

ಆಕ್ಸಿಜನ್ ಪ್ಲಾಂಟ್: ಮೆಗ್ಗಾನ್ ಆವರಣದಲ್ಲಿ 13ಸಾವಿರ ಲೀಟರ್ ಸಾಮಥ್ರ್ಯದ ಮೆಡಿಕಲ್ ಆಕ್ಸಿಜನ್ ಪ್ಲಾಂಟ್ ಆರಂಭಿಸಿರುವುದರಿಂದ ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಆಕ್ಸಿಜನ್ ಕೊರತೆ ಉಂಟಾಗದು. ಇದರಿಂದ ಜಿಲ್ಲೆಯ ಆಕ್ಸಿಜನ್ ಬೇಡಿಕೆಯನ್ನು ಸಂಪೂರ್ಣವಾಗಿ ಪೂರೈಸಲು ಸಾಧ್ಯವಾಗಲಿದೆ. ಕರೋನಾ ಪೀಡಿತರ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆಕ್ಸಿಜನ್ ಲಭ್ಯತೆಯನ್ನು ಖಾತ್ರಿಪಡಿಸಲು ಪ್ಲಾಂಟ್ ಅಳವಡಿಸಲಾಗಿದೆ ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.

ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಉತ್ತಮವಾದ ಸೌಲಭ್ಯವನ್ನು ಕಲ್ಪಿಸಲು ನಿರಂತರವಾಗಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಸಮಸ್ಯೆಗಳು ಎದುರಾದಂತೆ ಅದನ್ನು ಬಗೆಹರಿಸುತ್ತಾ ಸೇವಾ ಗುಣಮಟ್ಟವನ್ನು ಉತ್ತಮಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಮೆಗ್ಗಾನ್ ನಿರ್ದೇಶಕ ಡಾ.ಸಿದ್ಧಪ್ಪ, ಡಾ.ರಘುನಂದನ್, ಡಾ.ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.

Exit mobile version