Site icon TUNGATARANGA

ಶಿವಮೊಗ್ಗ / ರೈತರು ವೈಯಕ್ತಿಕ ನಷ್ಟ ಪರಿಹಾರಕ್ಕಾಗಿ ಆಗಸ್ಟ್ 16 ರೊಳಗಾಗಿ ಅರ್ಜಿ ಸಲ್ಲಿಸಲು ಜಿಲ್ಲಾಧಿಕಾರಿ : ಆರ್.ಸೆಲ್ವಮಣಿ ಸೂಚನೆ

ಶಿವಮೊಗ್ಗ,
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ಬೆಳೆಗೆ ಬೆಳೆ ವಿಮೆ ಯೋಜನೆಯಡಿ ನಿಗಧಿತ ಶುಲ್ಕ ಪಾವತಿಸಿ, ಈಗಾಗಲೇ ನೋಂದಣಿ ಮಾಡಿಸಿಕೊಂಡಿರುವ ರೈತರು ವೈಯಕ್ತಿಕ ನಷ್ಟ ಪರಿಹಾರಕ್ಕಾಗಿ ಆಗಸ್ಟ್ 16 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಹೇಳಿದ್ದಾರೆ.


ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆಯು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಜಂಟಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾ ಡುತ್ತಿದ್ದರು. ಈಗಾಗಲೇ ಪೂರ್ಣ ಪ್ರಮಾಣದ ಬೆಳೆ ಹಾನಿಗೊಳಗಾಗಿದ್ದಲ್ಲಿ ಅಂತಹ ರೈತರು ಸ್ಥಳೀಯ ಪ್ರಕೃತಿ ವಿಕೋಪ ಘಟಕದಡಿ ವಿಮಾ ಸಂಸ್ಥೆಯಿಂದ ಪರಿಹಾರಕ್ಕಾಗಿ ವಿಮೆಗೆ ನೋಂದಣಿ ಮಾಡಿಸಿದ ಸ್ವೀಕೃತಿ, ಪಹಣಿ ಮತ್ತು ಆಧಾರ್ ಕಾರ್ಡ್‌ನ ನಕಲು ಪ್ರತಿಯೊಂದಿಗೆ ತಮ್ಮ ಹೋಬ ಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಮನವಿ ಸಲ್ಲಿಸುವಂತೆ ಅವರು ಸೂಚಿಸಿದ್ದಾರೆ.


ಪ್ರಸ್ತುತ ಈ ವಾರಾಂತ್ಯದಲ್ಲಿ ಸಾಲುಸಾಲು ಸರ್ಕಾರಿ ರಜಾ ದಿನಗಳಿರುವುದರಿಂದ ರೈತರು ಅರ್ಜಿ ಸಲ್ಲಿಸಲು ಅಡಚಣೆ ಉಂಟಾಗದಂತೆ ಹಾಗೂ ಅವರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಚೇರಿಯಲ್ಲಿದ್ದು, ರೈತರ ಅನುಕೂಲಕ್ಕೆ ಮಾಹಿತಿ ಒದಗಿಸುವಂತೆ ಹಾಗೂ ರಜಾ ದಿನದಲ್ಲಿಯೂ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ರೈತರು ತಮ್ಮ ಬೆಳೆ ಹಾನಿಯ ಪರಿಹಾರಕ್ಕಾಗಿ ಪ್ರಸ್ತಾವನೆ ಸಲ್ಲಿಸುವವರು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಖುದ್ದು ಭೇಟಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ನಿಗಧಿತ ದಿನಾಂಕದೊಳಗಾಗಿ ಪ್ರಸ್ತಾವನೆ ಸಲ್ಲಿಸಬಹುದಾಗಿದೆ ಎಂದು ತಿಳಿಸಿರುವ ಅವರು, ನಿಗಧಿತ ಕಾಲಾವಧಿಯಲ್ಲಿ ಅರ್ಜಿ ಸಲ್ಲಿಸಿದ ರೈತರ ಮಾಹಿತಿಯನ್ನು ಪರಿಹಾರಕ್ಕಾಗಿ ವಿಮಾ ಸಂಸ್ಥೆಗೆ ಕಳುಹಿಸಿಕೊಡಲಾಗುವುದು. ವಿಮಾ ಸಂಸ್ಥೆಯು ಕ್ಷೇತ್ರಕ್ಕೆ ಭೇಟಿ ನೀಡಿ, ಬೆಳೆಹಾನಿಯ ಪ್ರಮಾಣವನ್ನು ಆಧರಿಸಿ ಪರಿಹಾರ ನಿರ್ಧರಿಸಿ ಪರಿಹಾರಧನ ನೀಡಲು ಕ್ರಮ ವಹಿಸಲಿದ್ದಾರೆ ಎಂದವರು ತಿಳಿಸಿದ್ದಾರೆ.


ಅಲ್ಲದೇ ಮೆಕ್ಕೆಜೋಳ ಬೆಳೆ ಹಾನಿಯಾಗಿರುವ ರೈತರು ಕೂಡಲೇ ತಮ್ಮ ಜಮೀನಿನ ಬೆಳೆ ವಿವರಗಳನ್ನು ರೈತರ ಬೆಳೆ ಸಮೀಕ್ಷೆ ಆಪ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಈಗಾಗಲೇ ಅಪ್‌ನಲ್ಲಿ ನೋಂದಣಿ ಮಾಡಿಸಿಕೊಂಡು ಬೆಳೆ ಬದಲಾವಣೆ ಮಾಡಿದಲ್ಲಿ ಅಂತಹ ಬೆಳೆಹಾನಿ ತಾಕುಗಳು ವಿಮಾ

ವ್ಯಾಪ್ತಿಗೆ ಒಳಪಡುವುದಿಲ್ಲ ಎಂದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕಿ ಜಿ.ಸಿ. ಪೂರ್ಣಿಮಾ, ತೋಟಗಾರಿಕೆ ಉಪನಿರ್ದೇಶಕ ಬಸವರಾಜಪ್ಪ, ವಿಮಾ ಕಂಪನಿಗಳ ಪ್ರತಿನಿಧಿಗಳು, ರಾಜ್ಯ ಪ್ರಕೃತಿ ವಿಕೋಪ ವಿಪತ್ತು ನಿರ್ವಹಣಾ ಸಂಸ್ಥೆಯ ಪ್ರತಿನಿಧಿಗಳು, ಕೃಷಿ ವಿಜ್ಞಾನಿಗಳು, ರೈತ ಪ್ರತಿನಿಧಿಗಳಾದ ಪ್ರಕಾಶ್, ಪ್ರೇಮಕುಮಾರಗೌಡ, ಚಂದ್ರಶೇಖರಮಲ್ಲಪ್ಪ, ಸಂಬಂಧಿತ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version