ಶಿವಮೊಗ್ಗ
ರಾಜ್ಯಾದ್ಯಂತ ನಿರಂತರವಾಗಿ ಸುರಿಯು ತ್ತಿರುವ ರಣಚಂಡಿ ಮಳೆಗೆ ಕರುನಾಡು ತತ್ತರಿಸಿಹೋಗಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ರಣಚಂಡಿ ಮಳೆಗೆ ಮನೆ ಕುಸಿತವಾಗುವುದರ ಜೊತೆಗೆ ಅಪಾರ ಪ್ರಮಾಣದ ಬೆಳೆ ಹಾನಿಯೂ ಸಂಭವಿಸಿರುವು ದರಿಂದ ರೈತರು ತಲೆ ಮೇಲೆ ಕೈ ಹೊತ್ತು ಕೂರುವಂತಹ ಪರಿಸ್ಥಿತಿ ನಿರ್ಮಾಣಾಗಿದೆ.
ಈ ಬಾರಿ ರಾಜ್ಯದಲ್ಲಿ ಮುಂಗಾರು ಸಕಾಲಕ್ಕೆ ಶುರುವಾದರೂ ಸಹ ಆರಂಭದಲ್ಲಿ ಮಳೆಯಾಗಿರಲಿಲ್ಲ. ಆನಂತರ ಉತ್ತಮ ಮಳೆಯಾಗಿದ್ದು, ಬೆಳೆಯು ನಳನಳಿಸುತ್ತಿತ್ತು. ಹೀಗಾಗಿ ಒಳ್ಳೆಯ ಫಸಲು ಬಂದು ಉತ್ತಮ ಆದಾಯ ನಿರೀಕ್ಷೆಯಲ್ಲಿದ್ದ ರೈತರು ಆಶ್ಲೇಷ ಮಳೆಯ ಅಬ್ಬರಕ್ಕೆ ಕಂಗಾಲಾಗಿ ಹೋಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಕಳೆದ ೨೪ ಗಂಟೆಗಳಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಳೆ ದಾಖಲಾಗಿದ್ದು, ನದಿ, ಕೆರೆಕಟ್ಟೆಗಳು ಉಕ್ಕಿ ಹರಿಯಲಾರಂಭಿಸಿವೆ. ಜೊತೆಗೆ ಜಲಾಶಯಗಳ ಒಳಹರಿವಿನಲ್ಲಿಯೂ ಭಾರೀ ಪ್ರಮಾಣದ ಹೆಚ್ಚಳ ಕಂಡುಬಂದಿದೆ.
ಮಳೆಯಿಂದಾಗಿ ಕೆರೆಕಟ್ಟೆಗಳು ತುಂಬಿ ಹರಿಯುತ್ತಿರುವ ಕಾರಣ ಬೆಳೆದ ಬೆಳೆ ನೀರು ಪಾಲಾಗಿದೆ. ಇದರಿಂದಾಗಿ ಬೆಳೆದ ಅಸಲು ಕೂಡ ರೈತರಿಗೆ ಬರುವುದು ಅನುಮಾನವಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಶಿವಮೊಗ್ಗದಲ್ಲಿ ಹಲವು ಮನೆಗಳು ಕುಸಿತವಾಗುವುದರ ಜೊತೆಗೆ ಓರ್ವ ಮಹಿಳೆ ಸಾವುಕಂಡಿದ್ದಾರೆ.
ಇಂದು ಬೆಳಿಗ್ಗೆಯ ಮಾಹಿತಿಯಂತೆ, ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರ ಲಿಂಗನಮಕ್ಕಿ ಡ್ಯಾಂಗೆ ೭೭,೯೧೧ ಕ್ಯೂಸೆಕ್ ಒಳಹರಿವಿದೆ. ೧೮೦೬.೨೦ (ಗರಿಷ್ಠ ಮಟ್ಟ : ೧೮೧೯) ಅಡಿ ನೀರು ಸಂಗ್ರಹವಾಗಿದೆ. ಡ್ಯಾಂ ಗರಿಷ್ಠ ಮಟ್ಟ ತಲುಪಲು ಇನ್ನೂ ೧೩ ಅಡಿ ನೀರು ಸಂಗ್ರಹವಾಗಬೇಕಾಗಿದೆ.
ಭದ್ರಾ ಜಲಾಶಯದ ಒಳಹರಿವು ೫೧,೨೬೫ ಕ್ಯೂಸೆಕ್ ಹಾಗೂ ತುಂಗಾ ಜಲಾಶಯದ ಒಳಹರಿವು ೫೮,೯೧೯ ಕ್ಯೂಸೆಕ್ ಇದೆ. ಈಗಾಗಲೇ ಈ ಎರಡು ಡ್ಯಾಂಗಳು ಗರಿಷ್ಠ ಮಟ್ಟ ತಲುಪಿದ್ದು, ನೀರು ಹೊರ ಹರಿಸಲಾಗುತ್ತಿದೆ.
ಮಳೆ ಇದೇ ರೀತಿ ಮುಂದುವರೆದರೆ ಮತ್ತಷ್ಟು ಸಂಕಷ್ಟಕರ ಪರಿಸ್ಥಿತಿ ಎದುರಾಗಲಿದೆ.