ಶಿವಮೊಗ್ಗ,ಆ.08:
ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‍ಸಿಟಿ ಕಾಮಗಾರಿ ಸಂಪೂರ್ಣ ಕಳಪೆ ಮತ್ತು ಅವೈಜ್ಞಾನಿಕವಾಗಿದ್ದು, ಕೂಡಲೇ ಇದನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಕೆ. ದೇವೇಂದ್ರಪ್ಪ ಆಗ್ರಹಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ಮಾರ್ಟ್‍ಸಿಟಿ ಕಾಮಗಾರಿಗಾಗಿ ಸಾವಿರ ಕೋಟಿಗೂ ಹೆಚ್ಚು ಅನುದಾನ ಇರುತ್ತದೆ. ಆದರೆ, ಕಾಮಗಾರಿಗಳೆಲ್ಲಾ ಕಳಪೆಯಾಗಿದೆ. ಈಗ ಸ್ಮಾರ್ಟ್‍ಸಿಟಿಯ ಕಾಮಗಾರಿಗಳನ್ನು ತರಾತುರಿಯಲ್ಲಿ ಮುಗಿಸಿ ಮಹಾನಗರ ಪಾಲಿಕೆಗೆ ವರ್ಗಾವಣೆ ಮಾಡುವ ಸಮಯ ಬಂದಿದೆ. ಆದರೆ, ಕಾಮಗಾರಿಗಳನ್ನು ಯಾವ ಅಧಿಕಾರಿಗಳು ಕೂಡ ಪರಿಶೀಲಿಸಿಲ್ಲ ಎಂದು ದೂರಿದರು.
ಶೇ.75ರಷ್ಟು ಕಾಮಗಾರಿಗಳು ಮುಗಿದಿವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಸ್ಮಾರ್ಟ್‍ಸಿಟಿ ಕಾಮಗಾರಿಗಾಗಿ ಸುಮಾರು 53 ಪ್ರಾಜೆಕ್ಟ್‍ಗಳು ಬೇಕಾಗುತ್ತದೆ. ಅಂದರೆ ಡ್ರೈನೇಜ್ ಬಾಕ್ಸ್, ಒಳಚರಂಡಿ, ವಿದ್ಯುತ್, ಟೆಲಿಫೋನ್, ವಿವಿಧ ನೆಟ್‍ವರ್ಕ್ ಸಂಪರ್ಕಗಳು, ನೀರು, ಗ್ಯಾಸ್ ಹೀಗೆ ಹಲವು ಕಾಮಗಾರಿಗಳನ್ನು ಮಾಡಬೇಕಾಗುತ್ತದೆ. ಈ ಕಾಮಗಾರಿಗಳನ್ನು ಮಾಡಲು ಪದೇ ಪದೇ ಗುಂಡಿಯನ್ನು ತೆಗೆಯಬೇಕಾಗುತ್ತದೆ. ಆದರೆ, 41 ಕಾಮಗಾರಿಗಳು ಮುಗಿದಿದೆ ಎಂದು ಸುಳ್ಳು ಮಾಹಿತಿ ನೀಡಿ, ಈಗ ಮಹಾನಗರ ಪಾಲಿಕೆಗೆ ಅದನ್ನು ವರ್ಗಾವಣೆ ಮಾಡಲು ಸ್ಮಾರ್ಟ್‍ಸಿಟಿ ಅಧಿಕಾರಿಗಳು ಹೊರಟಿದ್ದಾರೆ ಎಂದು ದೂರಿದರು.
ಹೊಸಮನೆ, ಬಸವನಗುಡಿ, ವೆಂಕಟೇಶನಗರ, ದುರ್ಗಿಗುಡಿ, ಶರಾವತಿ ನಗರ ಮುಂತಾದ ಪ್ರಮುಖ ವಾರ್ಡ್‍ಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳುತ್ತಿದ್ದಾರೆ. ಆದರೆ, ಒಂದೇ ಮಳೆಗೆ ಈ ಎಲ್ಲಾ ಕಾಮಗಾರಿಗಳು ಕುಸಿದು ಬಿದ್ದಿವೆ. ಮತ್ತೆ ಮತ್ತೆ ಅಗೆದು ಕಾಮಗಾರಿ ಮಾಡಲಾಗಿದೆ. ಕೆಲವು ಕಡೆ ಕಾಮಗಾರಿ ಮಾಡದೇ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಮತ್ತೆ ಹಲವು ಕಡೆ ಕಾಮಗಾರಿಯನ್ನೇ ಮಾಡದೇ ತೇಪೆ ಹಾಕಿದ್ದಾರೆ. ತರಾತುರಿಯಲ್ಲಿ ಈಗ ವರ್ಗಾವಣೆ ಮಾಡಲು ಹೊರಟಿದ್ದಾರೆ. ಸಂಪೂರ್ಣ ಕಳಪೆ ಗುಣಮಟ್ಟದ ಕಾಮಗಾರಿ ಇದಾಗಿದೆ ಎಂದು ದೂರಿದರು.
ಕಳಪೆ ಕಾಮಗಾರಿಗೆ ಸಂಬಂಧಿಸಿದಂತೆ ನಮ್ಮಲ್ಲಿ ಸಾಕ್ಷಿಗಳಿವೆ. ವಿಡಿಯೋಗಳಿವೆ. ಜಿಲ್ಲಾಧಿಕಾರಿಗಳು ಬಂದರೆ ಎಲ್ಲಿ ಕಳಪೆ ಕಾಮಗಾರಿ ಇದೆ ಎಂದು ನಾವು ಸಾಕ್ಷಿ ಸಮೇತ ತೋರಿಸುತ್ತೇವೆ. ಅನೇಕ ಕಡೆ ಅಂಗಡಿ ಮತ್ತು ಮನೆಯ ಮಾಲೀಕರಿಗೆ ಅನುಕೂಲ ಮಾಡಿಕೊಟ್ಟು ಲಕ್ಷಾಂತರ ರೂ. ಭ್ರಷ್ಟಾಚಾರ ಕೂಡ ಮಾಡಿದ್ದಾರೆ. ಸರ್ಕಾರಿ ಜಾಗವನ್ನು ದೊಡ್ಡ ದೊಡ್ಡ ಅಂಗಡಿ ಮಾಲೀಕರ ಪರವಾಗಿ ನಿಂತು ಕಾಮಗಾರಿಯನ್ನೇ ಮಾಡಿಲ್ಲ. ನೀರು ಹರಿದು ಹೋಗದೆ ಇಡೀ ನಗರ ಒಂದು ಸಣ್ಣ ಮಳೆಗೆ ಜಲಾವೃತವಾಗುತ್ತದೆ ಎಂದು ದೂರಿದರು.
ಸಾವಿರ ಕೋಟಿಗಳು ಖರ್ಚಾಗಿದ್ದರು ಕೂಡ ಒಂದೇ ಒಂದು ಪ್ರಯೋಜನ ಕೂಡ ಇಲ್ಲಿ ಆಗಿಲ್ಲ. ಮಸಣಕ್ಕೆ ಹೋಗುವ ಹೆಣಕ್ಕೆ ಶೃಂಗಾರ ಮಾಡಿದಂತಾಗಿದೆ. ಈ ಬಗ್ಗೆ ನಾವು ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ. ಜಿಲ್ಲಾಧಿಕಾರಿಗಳು ಈ ತಕ್ಷಣವೇ ಅಂದರೆ ಒಂದು ವಾರದೊಳಗೆ ಎಲ್ಲ ಕಾಮಗಾರಿಗಳನ್ನ ಪರಿಶೀಲನೆ ಮಾಡಬೇಕು ಮತ್ತು ಸ್ಮಾರ್ಟ್‍ಸಿಟಿ ಕಾಮಗಾರಿಗೆ ಸಂಬಂಧಿಸಿದಂತೆ ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳನ್ನು ಪತ್ತೆ ಹಚ್ಚಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಜಿಲ್ಲಾಧಿಕಾರಿಗಳಿಂದ ಪರಿಶೀಲನೆ ಅಥವಾ ತಾಂತ್ರಿಕ ಇಲಾಖೆಯಿಂದ ಗುಣಮಟ್ಟ ಪರೀಕ್ಷೆ ಮಾಡದೆಯೇ ಮಹಾನಗರ ಪಾಲಿಕೆಗೆ ವರ್ಗಾವಣೆ ಮಾಡಬಾರದು. ಮತ್ತು ಕಳಪೆ ಕಾಮಗಾರಿಗೆ ಸಂಬಂಧಿಸಿದಂತೆ ಎಸಿಬಿ ಅಥವಾ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕವಿತಾ ರಾಘವೇಂದ್ರ, ಸ್ಟೆಲ್ಲಾ ಮಾರ್ಟಿನ್, ಜಮೀರ್, ಬಾಲಾಜಿ, ನಿಸಾರ್ ಮುಂತಾದವರಿದ್ದರು.