Site icon TUNGATARANGA

ಆರಾಧನಾ ಸಮಿತಿಯ ಅಧ್ಯಕ್ಷರಾಗಿ ಬಿ.ಆರ್. ಮಧುಸೂದನ್

ಶಿವಮೊಗ್ಗ, ಆ29:
ಹೆಸರಿನಲ್ಲೇ ಮಧುವನ್ನಿಟ್ಟುಕೊಂಡು ಸದಾ ಎಲ್ಲರನ್ನೂ ಆಕರ್ಷಿಸುವ ಬಿ.ಆರ್.ಮಧುಸೂದನ್ ಅವರು ಆರಾಧನಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಮಧು ಆಕರ್ಷಕ ವ್ಯಕ್ತಿತ್ವ,
ಸದಾ ಎಲ್ಲರೊಂದಿಗೆ ಬೆರೆವ ಬೆರೆತವರನ್ನೆಲ್ಲ ಸೇರಿಸಿ ಸಂಘಟನೆಯ ಶಕ್ತಿ ಹೆಚ್ಚಿಸುವ ಕಾರ್ಯಕ್ಕೆ ಮುನ್ನುಗ್ಗುವ ಅವರು ಈಗ ಜಿಲ್ಲಾ ಬಿಜೆಪಿಯ ಉಪಾಧ್ಯಕ್ಷರಾಗಿದ್ದಾರೆ.
ಆರ್ ಎಸ್ ಎಸ್ ಗರಡಿಯಲ್ಲಿ ಬೆಳೆದು ಬಿಜೆಪಿಯಲ್ಲಿ ಸಂಘಟನೆಗಾಗಿ ಅನವರತ ದುಡಿದ ಮಧುಸೂದನ್ ಅವರಿಗೆ ಶಾಸಕರೇ ಅಧ್ಯಕ್ಷರಾಗುವ ಆರಾಧನಾ ಸಮಿತಿಯ ಅಧ್ಯಕ್ಷ ಗಾದಿ ಹುಡುಕಿಕೊಂಡು ಬಂದಿದೆ.

ಸಚಿವ ಕೆ.ಎಸ್. ಈಶ್ವರಪ್ಪ ಅವರೊಂದಿಗೆ..


ತನ್ನ ಕಾರ್ಯಭಾರ ಒತ್ತಡದಿಂದಾಗಿ ತನ್ನ ಶಿಷ್ಯನಿಗೆ ಉಸ್ತುವಾರಿ ಬಿಟ್ಟುಕೊಟ್ಟ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪನವರ ಸಮ್ಮುಖದಲ್ಲಿ ಆಗಸ್ಟ್ 31 ರ ಸೋಮವಾರ ಬಿ.ಎರ್.ಮಧುಸೂದನ್ ಆರಾಧನಾ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ನಗರದ ಖ್ಯಾತ ಸಾಂಸ್ಕೃತಿಕ ಸಂಸ್ಥೆ ‘ಶ್ರೀಗಂಧ’ ಕಾರ್ಯದರ್ಶಿಯಾಗಿ ತಾನೇ ಸ್ಥಾಪಿಸಿದ ‘ನಿನಾದ’ ಸಂಸ್ಥೆಯ ಮೂಲಕ ಶಿವಮೊಗ್ಗದ ಸಾಂಸ್ಕೃತಿಕ ಜನಮಾನಸದ ಹೃದಯವನ್ನು ಗೆದ್ದ ಮಧುಸೂಧನ್ ಅವರಿಗೆ ಅವರ ಶ್ರದ್ಧಾಭಕ್ತಿಯ ಕೆಲಸಕ್ಕೆ ಅರಸಿ ಆರಾಧನಾ ಸಮಿತಿಯ ಅಧ್ಯಕ್ಷಗಾದಿ ಅರಸಿ ಬಂದಿದೆ ಎನ್ನಬಹುದು.
ಬಿಜೆಪಿ, ಆರ್’ಎಸ್’ಎಸ್ ಗರಡಿಯ ನಗುಮೊಗದ ಶ್ರಮಜೀವಿಯ ಬದುಕಿನಲ್ಲಿ ಇದು ಮತ್ತೊಂದು ಮೈಲಿಗಲ್ಲು ಎಂದರೆ ತಪ್ಪಾಗಲಾರದು.


ಸಮಷ್ಠಿ ಪ್ರಜ್ಞೆ ಸಂಘಟನೆಯ ಚಾಣಾಕ್ಷ ವ್ಯಕ್ತಿತ್ವದ ಬಿ.ಆರ್. ಮಧುಸೂಧನ್ ಬಹುಷಃ ‘ಬಿಜೆಪಿ ಮಧು’ ಎಂದರೆ ತತಕ್ಷಣ ಎಲ್ಲರ ಸ್ಮೃತಿಪಟಲದಲ್ಲಿ ತಕ್ಷಣಕ್ಕೆ ನಿಲ್ಲುವ ವ್ಯಕ್ತಿತ್ವ.
ವಾಸ್ತವವಾಗಿ ಈ ಸಮಿತಿಗೆ ಶಾಸಕರು ಅಧ್ಯಕ್ಷರಾಗಿರಬೇಕು. ಆದರೆ, ಶಿವಮೊಗ್ಗ ಶಾಸಕ ಶ್ರೀ ಕೆ.ಎಸ್. ಈಶ್ವರಪ್ಪ ಅವರು ಜಿಲ್ಲಾ ಉಸ್ತುವಾರಿ ಸಚಿವರೂ ಸಹ ಆಗಿರುವುದರಿಂದ ತಮ್ಮ ಈ ಸ್ಥಾನವನ್ನು ಮಧುಸೂಧನ್ ಅವರಿಗೆ ವಹಿಸುವಂತೆ ಶಿಫಾರಸ್ಸು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಧು ಅವರನ್ನು ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಆರಾಧನಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಪರಿಚಯ:
ಮೂಲತಃ ಹಾಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸ್ವಕ್ಷೇತ್ರ ಶಿಕಾರಿಪುರದ ಮಧುಸೂಧನ್ ಅವರ ತಂದೆ ದಿ.ಬಿ. ರಾಮು. ಇವರು ಓದಿದ್ದು ಎಸ್’ಎಸ್’ಎಲ್’ಸಿ ಆದರೂ ಶಿವಮೊಗ್ಗದ ಬಹಳಷ್ಟು ಕ್ಷೇತ್ರಗಳಲ್ಲಿ ಇವರ ಸಾಧನೆ ಹಾಗೂ ಸೇವೆ ಇವರ ಸಾಮರ್ಥ್ಯವನ್ನು ಬಿಂಬಿಸುತ್ತದೆ.
ಬಾಲ್ಯದಿಂದಲೂ ಬಡತನವನ್ನೇ ಕಂಡ ಇವರ ಮೊಗದಲ್ಲಿ ನಗು ಎಂಬುದು ಮಾತ್ರ ಎಂದಿಗೂ ಬತ್ತಿಲ್ಲ. ತಮ್ಮ ಬಾಲ್ಯದ ಕಷ್ಟದ ದಿನಗಳಲ್ಲಿ ಬೆಂಗಳೂರಿನಲ್ಲಿ ಹೊಟೇಲ್ ಕಾರ್ಮಿಕನಾಗಿ ಜೀವನ ಸಾಗಿಸಿದ ಮಧು, ಲಾಟರಿ ಮಾರಾಟ, ಪುಸ್ತಕ-ಪತ್ರಿಕೆ-ಕ್ಯಾಸೆಟ್ ಮಾರಾಟ ಮಾಡುತ್ತಾ ಬದುಕಿನ ಬಂಡಿ ಸಾಗಿಸುತ್ತಾ ಬದುಕು ಗೆದ್ದ ಶ್ರಮಜೀವಿ.
ಶಿವಮೊಗ್ಗದಲ್ಲಿ ಇವರ ಆರಂಭದ ದಿನಗಳಿಂದಲೂ ಇಂದಿನ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಕೆ.ಎಸ್. ಈಶ್ವರಪ್ಪ ಅವರ ಕುಟುಂಬದ ಆಪ್ತರು. ಒಂದು ಹಂತದಲ್ಲಿ ಈಶ್ವರಪ್ಪನವರೇ ಇವರ ಕೈ ಹಿಡಿದು ನಡೆಸಿದ ಕಾರಣ, ವಿಶ್ವಂಭರ ಏಜೆನ್ಸೀಸ್ ಎಂಬ ತಂಪು ಪಾನೀಯಗಳ ವಿತರಕರಾದರು.

ಅಂದಿನ ರಾಜ್ಯಪಾಲರ ಜೊತೆ


ಆನಂತರದ ದಿನಗಳಲ್ಲಿ, 1989ರಲ್ಲಿ ದಿವಂಗತ ಶ್ರೀ ಹಿರಿಯೂರು ಕೃಷ್ಣಮೂರ್ತಿಗಳ ಮಾರ್ಗದರ್ಶನದಿಂದ ಸಂಘಟನೆಯ ವಿವಿಧ ಮಜಲುಗಳನ್ನು ಕಂಡರು. ಬಿಜೆಪಿಯಲ್ಲಿ ಬೂತ್ ಅಧ್ಯಕ್ಷರಾಗಿದ್ದ ಮಧುಸೂಧನ್ ಅವರು, ಆನಂತರ ವಾರ್ಡ್ ಅಧ್ಯಕ್ಷರು, ಶಕ್ತಿಕೇಂದ್ರದ ಅಧ್ಯಕ್ಷರು, ನಗರ ಮಾಧ್ಯಮ ಪ್ರಮುಖ 3 ಅವಧಿಗೆ, ಜಿಲ್ಲಾ ಮಾಧ್ಯಮ ಪ್ರಮುಖ 3 ಅವಧಿಗೆ, ಸಾಂಸ್ಕೃತಿಕ ಪ್ರಕೋಷ್ಠದ ಜಿಲ್ಲಾ ಸಂಚಾಲಕ, ಧ್ಯೇಯ ಕಮಲದ ಜಿಲ್ಲಾ ಸಂಚಾಲಕ, ಅಲ್ಪ ಸಂಖ್ಯಾತ ಮೋರ್ಚಾದ ಜಿಲ್ಲಾ ಪ್ರಭಾರಿ 2 ಅವಧಿಗೆ, ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾಗಿ ಅನುಭವ ಹೊಂದಿದ್ದು, ಸದ್ಯ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಂತ ಹಂತವಾಗಿ ತಮ್ಮ ವ್ಯಕ್ತಿತ್ವವನ್ನು ವೃದ್ಧಿಸಿಕೊಳ್ಳುತ್ತಲೇ, ಪಕ್ಷ ಹಾಗೂ ಸಮಾಜಕ್ಕೆ ತಮ್ಮ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ.
ಮಧು ಅವರು ಪಕ್ಷದಲ್ಲಿ ವಿವಿಧ ಜವಾಬ್ದಾರಿಯಲ್ಲಿದ್ದ ವೇಳೆ ಜಿಲ್ಲೆಯಲ್ಲಿ ನಡೆದ ಲೋಕಸಭೆ, ವಿಧಾನಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ದೊರೆತ ವಿಜಯದಲ್ಲಿ ಇವರ ಕಾರ್ಯಕ್ಷಮತೆಯ ಛಾಪು ಇದೆ.
ಪ್ರಮುಖವಾಗಿ, ಇಂದಿನ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಸಚಿವ ಕೆ.ಎಸ್. ಈಶ್ವರಪ್ಪ, ಡಿ.ಎಚ್. ಶಂಕರಮೂರ್ತಿ ಅವರಂತಹ ಹಿರಿಯರ ಮಾರ್ಗದರ್ಶನದ ಗರಡಿಯಲ್ಲಿ ಪಳಗಿದ ಮಧು ಬಿಜೆಪಿಯ ಒಬ್ಬ ನಿಷ್ಠಾವಂತ ಕಾರ್ಯಕರ್ತರಾಗಿಯೇ ವ್ಯಕ್ತಿತ್ವ ವೃದ್ಧಿಸಿಕೊಂಡವರು ಎಂಬುದು ಪಕ್ಷದಲ್ಲಿ ಮಾತ್ರವಲ್ಲ ಸಾರ್ವಜನಿಕ ವಲಯದಲ್ಲೂ ಜನಜನಿತವಾಗಿದೆ. ಇದರೊಟ್ಟಿಗೆ, ಸಂಘ ಪರಿವಾರದ ಮಾರ್ಗದರ್ಶನವೂ ಸಹ ಇವರ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಸಂಘಟನೆಯ ಸೂಚನೆಯನ್ನು ಎಂದಿಗೂ ಮೀರದೇ, ಯಾವುದೇ ಜವಾಬ್ದಾರಿ ದೊರೆತರೂ ಅದನ್ನು ಸಮರ್ಥವಾಗಿ ನಿರ್ವಹಿಸಿ, ದೊಡ್ಡವರಿಂದಲೂ ಸೈ ಎನಿಸಿಕೊಂಡವರು ಮಧು.
ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಾಧನೆಗಳು :
ಮಲೆನಾಡಿನ ಸಾಂಸ್ಕೃತಿಕತೆ ಹೆಬ್ಬಾಗಿಲಾಗಿರುವ ಶಿವಮೊಗ್ಗದ ನೆಲೆಯಲ್ಲಿ ಮಧುಸೂಧನ್ ಬೀರಿದ ಕಂಪು ಹೆಜ್ಜೆ ಹೆಜ್ಜೆಯಲ್ಲಿಯೂ ಇದೆ. ಹವ್ಯಾಸಿ ಪತ್ರಕರ್ತರಾದ ಮಧುಸೂಧನ್, ಸಮಾಜ ಸೇವೆ, ಸಾಂಸ್ಕೃತಿಕ ರಂಗದಲ್ಲಿ ಕ್ರಿಯಾಶೀಲರಾಗಿದ್ದು, ಶಿವಮೊಗ್ಗದ ಪ್ರತಿಷ್ಠಿತ ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆಯ ಸಂಚಾಲಕರಾಗಿದ್ದಾರೆ. ಅಲ್ಲದೇ, ನಿನಾದ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರು, ಸಂಗಮ ಕಲಾಕ್ಷೇತ್ರದ ಸ್ಥಾಪಕ ಸಂಚಾಲಕರೂ ಆಗಿರುವ ಇವರು, ಶಿವಮೊಗ್ಗದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರೂ ಹಾಗೂ ಟಿಎಸಿ ಸದಸ್ಯರೂ ಸಹ ಆಗಿ ಕಾರ್ಯನಿರ್ವಹಿಸಿದ ಅನುಭವವುಳ್ಳವರು.
ನಾಡಿನ ಪ್ರಖ್ಯಾತ ವಿದ್ವಾಂಸರು, ಉಪನ್ಯಾಸಕರು, ಕಲಾರಾಧಕರನ್ನು ಶ್ರೀಗಂಧದ ವೇದಿಕೆಗೆ ಕರೆತಂದು ವಿಭಿನ್ನ ಕಾರ್ಯಕ್ರಮಗಳನ್ನು ಸಿಹಿಮೊಗೆಯ ಕಲಾರಸಿಕರಿಗೆ ಉಣಬಡಿಸಿದ ಕೀರ್ತಿ ಇವರದ್ದು.
ನಾಡಿನ ಪ್ರಸಿದ್ಧ ಗಾಯಕರು, ಸಂಗೀತ ತಜ್ಞರು, ಶ್ರೇಷ್ಠ ಕಲಾವಿದರು, ಖ್ಯಾತ ಸಾಹಿತಿಗಳೊಂದಿಗೆ ಒಡನಾಟ ಹೊಂದಿರುವ ಮಧು, ಹಿನ್ನೆಲೆ ಗಾಯಕ, ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ರಮೇಶ್ ಚಂದ್ರ ಅವರ ಸಾರಥ್ಯದಲ್ಲಿ ಸಂಗಮ ಕಲಾಕ್ಷೇತ್ರವನ್ನು ಜಿಲ್ಲೆಯಲ್ಲಿ ಸ್ಥಾಪಿಸಿ, ಉದಯೋನ್ಮುಖ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ನಿರ್ಮಿಸಿದ್ದಾರೆ.
ನಿನಾದ ಸಾಂಸ್ಕೃತಿಕ ಸಂಸ್ಥೆ
ನಗರದ ಸಾಂಸ್ಕೃತಿಕ ಕಲಾ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸಂಸ್ಥೆ ನಿನಾದ. ಕಳೆದ 12 ವರ್ಷಗಳಿಂದ ಈ ಸಂಸ್ಥೆ ಮುಖೇನ ಬಹಳಷ್ಟು ವೈವಿಧ್ಯಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ, ಇಡಿಯ ರಾಜ್ಯದಲ್ಲೇ ಹೆಸರುವಾಸಿಯಾಗಿದೆ. ಈ ಸಂಸ್ಥೆ ಮೂಲಕ ನಾಡಿನ ಶ್ರೇಷ್ಠ ವಾಗ್ಮಿಗಳನ್ನು, ಆಧ್ಯಾತ್ಮ ಲೋಕದ ಚಿಂತಕರು, ಉಪನ್ಯಾಸಕರು, ವಿದ್ವಾಂಸರುಗಳನ್ನು ಪರಿಚಯಿಸುವ ಕಾರ್ಯವನ್ನು ಮಾಡುತ್ತಿದೆ. ಮತ್ತೆ ಇದರ ಯಶಸ್ಸಿನ ಹಿಂದಿರುವ ಶಕ್ತಿ ಮಧುಸೂಧನ್ ಅವರೇ.
ಸಾಮಾಜಿಕ ಕಳಕಳಿಗೆ
ಮಿಡಿವ ಮನದ
ಮಧುಸೂಧನ್ ಅವರ ಕುರಿತಾಗಿ ಹೇಳುವಾಗ ಈ ವಿಚಾರವನ್ನು ಪ್ರಸ್ತಾಪಿಸಲೇಬೇಕು. ತಮ್ಮ ವ್ಯಕ್ತಿಗತ ಸ್ವಭಾವದಲ್ಲಿಯೇ ಇವರಿಗೆ ಸಾಮಾಜಿಕ ಕಳಕಳಿ ಎಂಬುದು ಮಿಳಿತವಾಗಿದೆ. ನಂದ ಗೋಕುಲ ಗೋಶಾಲೆ, ಬಡವಿದ್ಯಾರ್ಥಿ ದತ್ತು ಯೋಜನೆ, ನಿರಾಶ್ರಿತರ ಆರೋಗ್ಯ ತಪಾಸಣಾ ಶಿಬಿರಗಳು, ರಕ್ತದಾನ, ಸ್ವಚ್ಛತಾ ಕಾರ್ಯಕ್ರಮಗಳು ಸೇರಿದಂತೆ ಬಹಳಷ್ಟು ಆಯಾಮದಲ್ಲಿ ಸೇವೆ ಸಲ್ಲಿಸಿದ್ದಾರೆ.
ತಮ್ಮ ಶ್ರಮ ಹಾಗೂ ಸಂಘಟನಾತ್ಮಕ ಶಕ್ತಿಯಿಂದಲೇ ಹಂತ ಹಂತವಾಗಿ ಬೆಳೆಯುತ್ತಿರುವ ಮಧುಸೂಧನ್ ಅವರಿಗೆ ತಮಗೆ ಒಲಿದು ಬಂದ ಸೇವಾ ಕ್ಷೇತ್ರದಲ್ಲಿ ಉತ್ತಮ ಕಾರ್ಯಪ್ರವೃತ್ತರಾಗಿ ಯಶಸ್ಸು ಗಳಿಸಲೆಂದು ಹಾರೈಸೋಣ.

Exit mobile version