ಶಿವಮೊಗ್ಗ, ಆ.29:
ಭದ್ರಾವತಿಯ ಕಾಗದ ಕಾರ್ಖಾನೆ (ಎಂಪಿಎಂ) ಗೆ ಸೇರಿದ್ದ ಸುಮಾರು 82 ಸಾವಿರ ಎಕರೆ ಅರಣ್ಯ ಭೂಮಿಯ ಗುತ್ತಿಗೆ ಅವಧಿ ಮುಗಿದಿದ್ದು, ಅದನ್ನು ಕಂಪನಿ ಹೆಸರಲ್ಲಿ ಖಾಸಗೀ ಉದ್ಯಮಿಗಳಿಗೆ ಪರಭಾರೆ ಮಾಡುವ ಸರ್ಕಾರದ ಯತ್ನದ ವಿರುದ್ಧ ಜನಾಂದೋಲನ ಸಂಘಟಿಸಲು ‘ನಮ್ಮೂರಿಗೆ ಅಕೇಶಿಯಾ ಮರ ಬೇಡ ಹೋರಾಟ ಒಕ್ಕೂಟ’ ನಿರ್ಧರಿಸಿದೆ.
ನಿನ್ನೆ ತೀರ್ಥಹಳ್ಳಿಯ ಮಲ್ನಾಡ್ ಕ್ಲಬ್ ಸಭಾಂಗಣದಲ್ಲಿ ನಡೆದ ಒಕ್ಕೂಟದ ತಾಲೂಕು ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಮುಖ್ಯವಾಗಿ ದಶಕಗಳ ಕಾಲ ಸ್ಥಗಿತಗೊಂಡಿದ್ದ ಕಾರ್ಖಾನೆಯ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದವರು ಇಂದು ಅದರ ಖಾಸಗೀಕರಣದ ನೆಪ ಮುಂದೊಡ್ಡಿ ಸಾವಿರಾರು ಎಕರೆ ಅರಣ್ಯ ಭೂಮಿ ಕಬಳಿಸುವ ಹುನ್ನಾರ ನಡೆಸಿದ್ದಾರೆ. ಮುಚ್ಚಿರುವ ಕಂಪನಿಯ ಮೇಲೆ ಇದೀಗ ದಿಢೀರನೇ ಕಾಳಜಿ ಉಕ್ಕಿ ಹರಿಯುತ್ತಿರುವುದರ ಹಿಂದೆ ಈ ಗುತ್ತಿಗೆ ಮುಗಿದ ಭೂಮಿಯ ಜೊತೆ, ಮಲೆನಾಡಿನ ಬಡವರ ಜೀವನಾಧಾರವಾಗಿರುವ ಸಾವಿರಾರು ಎಕರೆ ಬಗರ್ ಹುಕುಂ ಜಮೀನನ್ನು ಸಾಗುವಳಿದಾರರಿಂದ ಕಿತ್ತುಕೊಂಡು ಖಾಸಗಿಯವರಿಗೆ ಪರಭಾರೆ ಮಾಡುವ ಉದ್ದೇಶವಿದೆ. ದೇಶದ ಅರಣ್ಯ ಪ್ರದೇಶವನ್ನು ಖಾಸಗೀಕರಣ ಮಾಡುವ ಸರ್ಕಾರದ ಜನವಿರೋಧಿ ಧೋರಣೆಗೆ ಈ ಮೂಲಕ ಚಾಲನೆ ನೀಡಲಾಗುತ್ತಿದೆ. ಆದರೆ, ಈ ನೆಲ, ಜಲದ ಮೇಲೆ ಹಕ್ಕು ಮಲೆನಾಡಿಗರಿಗೆ ಸೇರಿದ್ದು. ಅಲ್ಲಿ ನೈಸರ್ಗಿಕ ಅರಣ್ಯ ಬೆಳೆಯಬೇಕೇ ವಿನಃ ಅರಣ್ಯ ಇಲಾಖೆಗೆ, ಸರ್ಕಾರಕ್ಕೆ ಅಥವಾ ಪ್ರಭಾವಿ ಕುಳಗಳ ಲಾಭಕೋರ ದಂಧೆ ಮಾಡುವ ಉದ್ಯಮವಾಗಬೇಕಿಲ್ಲ ಎಂದು ಸಭೆಯಲ್ಲಿ ಒಕ್ಕೊರಲ ದನಿ ಮೊಳಗಿತು.
ಹಸಿರು ಬೆಳೆಯಬೇಕಾದ ಜಾಗದಲ್ಲಿ ಕೆಲವರ ಹಿತಾಸಕ್ತಿಗಾಗಿ ಹಣ ಬೆಳೆಯಬೇಕಾಗಿಲ್ಲ. ವಿವಿಧ ಕಾರಣದಿಂದಾಗಿ ತೀವ್ರ ಒತ್ತಡಕ್ಕೆ ಸಿಲುಕಿರುವ ಮಲೆನಾಡಿನಲ್ಲಿ ಕಾಡು ಮರೆಯಾಗುತ್ತಿರುವಾಗ ಬರೋಬ್ಬರಿ 80 ಸಾವಿರ ಎಕರೆ ಕಾಡು ಬೆಳೆಸುವ ಅವಕಾಶವನ್ನು ಮಲೆನಾಡಿಗರು ಕಳೆದುಕೊಳ್ಳಬಾರದು. ಹಾಗಾಗಿ ಸರ್ಕಾರ, ಎಂಪಿಎಂ ಲೀಜ್ ಅವಧಿ ಮುಗಿಯುತ್ತಿದ್ದಂತೆ ಆ ಜಾಗವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು ಮತ್ತು ಅಲ್ಲಿ ನೈಸರ್ಗಿಕ ಕಾಡು ಬೆಳೆಯಲು ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿ ಮಲೆನಾಡಿನಾದ್ಯಂತ ಜನಾಂದೋಲನ ಕಟ್ಟೋಣ ಎಂದು ಹೋರಾಟಗಾರರು ತೀರ್ಮಾನಿಸಿದರು.
ಹೋರಾಟದ ಸ್ವರೂಪದ ಕುರಿತು ಸುದೀರ್ಘ ಚರ್ಚೆ ನಡೆಸಿದ ಒಕ್ಕೂಟ, ಸ್ಥಳೀಯವಾಗಿ ಸಂಘಟನೆ ಕಟ್ಟಲು ಸಂಚಾಲಕ ಸಮಿತಿ ರಚಿಸಿತು.
ಈ ಇರುವ ಭೂಮಿಯಲ್ಲಿ ನೈಸರ್ಗಿಕ ಅರಣ್ಯ ಬೆಳೆಸಲು ಒತ್ತು ನೀಡುವುದು, ಅರಣ್ಯ ಬೆಳೆಸಲು ಸಾದ್ಯವಿರದ ಕಡೆ ಭೂರಹಿತರಿಗೆ ನೀಡಿ ಅಲ್ಲಿ ಕಾಡುಬೆಳೆ ಬೆಳೆಸಲು ಅನುಮತಿ ನೀಡಬೇಕು, ಮತ್ತು ಅಲ್ಲಿನ ಉತ್ಪನ್ನಗಳ ಲಾಭವನ್ನು ಆ ರೈತರಿಗೆ ನೀಡಬೇಕು. ಜಿ.ಪಂ., ತಾ.ಪಂ., ಗ್ರಾ.ಪಂ., ಗಳಲ್ಲಿ ಗುತ್ತಿಗೆ ವಿಸ್ತರಣೆ ಮತ್ತು ನೆಡುತೋಪು ವಿರುದ್ಧ ನಿರ್ಣಯ ಅಂಗೀಕರಿಸಿ ಸರ್ಕಾರಕ್ಕೆ ಕಳಿಸಬೇಕು. ಅಂತಿಮವಾಗಿ ಜನ ಹೋರಾಟಕ್ಕೆ ಸರ್ಕಾರ ಮಣಿಯದೇ ಹೋದಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಲು ಸಿದ್ದರಾಗಬೇಕು. ಕಾಡು ಮತ್ತು ಜೀವವೈವಿಧ್ಯ ಸೇವೆಗಳಿಗೆ ಬೆಲೆಕಟ್ಟಬೇಕು. ಮಲೆನಾಡಿಗರ ನಮ್ಮಭೂಮಿ ನಮ್ಮ ಹಕ್ಕು ಸ್ಥಾಪಿತವಾಗಬೇಕು. ಭೂಮಿ ಒಂದು ಭಾವನಾತ್ಮಕ ವಿಷಯ. ನಮ್ಮ ಭೂಮಿಯಲ್ಲಿ ಯಾರಿಗೂ ದಂಧೆ ಮಾಡಲು ಅವಕಾಶವಿಲ್ಲ. ಪರಿಸರ ಸೇರಿದಂತೆ ಪ್ರತಿಯೊಂದು ವಿಷಯದಲ್ಲಿಯೂ ಮಲೆನಾಡಿಗರನ್ನು, ಇಲ್ಲಿನ ಪರಿಸರವನ್ನು ಶೋಷಣೆಯ, ದುರ್ಬಳಕೆಯ ಸರ್ಕಾರಗಳ ಧೋರಣೆ ಮುಂದುವರೆದಲ್ಲಿ, ‘ಸ್ವಾಭಿಮಾನಿ ಮಲೆನಾಡು, ಸ್ವಾಯತ್ತ ಮಲೆನಾಡು’ ಹೋರಾಟ ಕೈಗೆತ್ತಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಒಕ್ಕೂಟದ ಮುಖಂಡರಾದ ಹೋರಾಟಗಾರ ರಾಜೇಂದ್ರ ಕಂಬಳಗೆರೆ, ಪ್ರಸನ್ನ ಹಿತ್ತಲಗದ್ದೆ, ಕಲ್ಲಹಳ್ಳ ಶ್ರೀಧರ್, ಕಡಿದಾಳು ದಯಾನಂದ್, ನೆಂಪೆ ದೇವರಾಜ್, ವೆಂಕಟೇಶ್ ಕೋಡ್ಲು, ಪ್ರೊ ಗಣಪತಿ, ಕೋಣಂದೂರು ಅಶೋಕ್, ರಮೇಶ್ ಕರ್ಕಿ, ರಾಘವೇಂದ್ರ ಮೇಗರವಳ್ಳಿ, ಶಿವಾನಂದ ಕರ್ಕಿ, ದಿಗಂತ್ ಬಿಂಬೈಲ್, ಜಿ ಕೆ ಸತೀಶ್, ನವೀನ್ ಮಂಡಗದ್ದೆ, ಜಿಲ್ಲಾ ಸಮಿತಿಯ ಕೆ.ಪಿ. ಶ್ರೀಪಾಲ್, ದಸಂಸ ಮುಖಂಡ ಎಂ.ಗುರುಮೂರ್ತಿ, ಪತ್ರಕರ್ತ ಚಾರ್ವಾಕ ರಾಘು, ಪತ್ರಕರ್ತ ಶಶಿ ಸಂಪಳ್ಳಿ, ಪರಿಸರವಾದಿ ಅಖಿಲೇಶ್ ಚಿಪ್ಪಳಿ, ಬಾಲಕೃಷ್ಣ ನಾಯ್ಡು, ಪ್ರೊ, ಕೃಷ್ಣಮೂರ್ತಿ ಹಿಳ್ಳೋಡಿ, ಕನ್ನಪ್ಪ ಮುಳಕೇರಿ ಸೇರಿದಂತೆ ಹಲವರಿದ್ದರು.