Site icon TUNGATARANGA

ದೇಶದ ಅಭಿವೃದ್ದಿಗೆ ವಿದ್ಯಾರ್ಥಿಗಳು ಕೈ ಜೋಡಿಸಬೇಕಿದೆ: ಕೀರ್ತಿ ಗಣೇಶ್

ಶಿವಮೊಗ್ಗ,ಜು.24:
ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಎಲ್ಲ ವಿದ್ಯಾರ್ಥಿಗಳು ಕೈಜೋಡಿಸಬೇಕು ಎಂದು ಎನ್ ಎಸ್ ಯು ಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಹೇಳಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ( ಎನ್‌ ಎಸ್ ಯು‌ ಐ ) ಶಿವಮೊಗ್ಗ ಜಿಲ್ಲೆ ವತಿಯಿಂದ ಆಯೋಜಿಸಿದ್ದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನೋಟ್ ಬುಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.


ಸಂವಿಧಾನ ಎಲ್ಲರಿಗೂ ಹಕ್ಕು ಹಾಗೂ ಮೂಲ ಸೌಲಭ್ಯಗಳನ್ನು ನೀಡಿದೆ. ಆದರೆ ಬಹುತೇಕರು ಸಂವಿಧಾನ ಒದಗಿಸಿರುವ ಮೂಲ ಕರ್ತವ್ಯಗಳನ್ನು ನಿರ್ವಹಿಸಲು ವಿಫಲರಾಗುತ್ತಿದ್ದಾರೆ. ಸಮಾಜದಲ್ಲಿ‌ ಆಗುವ ಬೆಳವಣಿಗೆಗಳನ್ನು ‌ಸೂಕ್ಷ್ಮವಾಗಿ‌ ಗಮನಿಸಿ ಸಂವಿಧಾನ‌ ನೀಡಿರುವ ಮೂಲ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ತಿಳಿಸಿದರು.


ಭಾರತ ದೇಶದ ಐತಿಹಾಸಿಕ‌ ಮತ್ತು ಸತ್ಯ‌ ಸಂಗತಿಗಳನ್ನು ಯುವ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಸಮಾಜದ ಎಲ್ಲ ವರ್ಗದ ಜನರಿಗೂ‌, ಯುವ ವಿದ್ಯಾರ್ಥಿಗಳಿಗೂ ನೈಜ ಇತಿಹಾಸದ ಬಗ್ಗೆ ತಿಳವಳಿಕೆ ಮೂಡಿಸಬೇಕು. ಸಮಾಜವನ್ನು ಸದೃಢವಾಗಿ ರೂಪಿಸುವ ನಿಟ್ಟಿನಲ್ಲಿ ಯುವಜನತೆ ಮಹತ್ತರ ಪಾತ್ರ ವಹಿಸಬೇಕು ಎಂದರು.
ಮಾಜಿ‌ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಪ್ರಸ್ತುತ ಪಠ್ಯ ಕ್ರಮ ವಿಚಾರ ಎಲ್ಲ ಕಡೆ ಚರ್ಚಿತವಾಗಿದ್ದು, ನಾನು‌ ಶಿಕ್ಷಣ ಸಚಿವ ಆಗಿದ್ದ ಸಂದರ್ಭದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಪಠ್ಯಕ್ರಮ ಪರಿಷ್ಕರಣೆ ವಿಚಾರ ನಿರ್ವಹಿಸಲಾಗಿತ್ತು. ಆದರೆ ಈಗಿನ ಸರ್ಕಾರ ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದು, ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಅನೇಕ‌ ಲೋಪಗಳನ್ನು ಎಸಗಿದೆ. ಇಂತಹ ಮಹತ್ತರ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ ಧ್ವನಿ‌ ಎತ್ತುವ ಕೆಲಸವನ್ನು ಎನ್ ಎಸ್ ಯು ಐ ಮಾಡಬೇಕು ಎಂದು ಹೇಳಿದರು.


ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಉತ್ತಮ ಅಂಕ ಗಳಿಸುವ ಜತೆಯಲ್ಲಿ ಸಮಾಜದಲ್ಲಿ‌ ಉನ್ನತ ಸ್ಥಾನಕ್ಕೆ‌ ತಲುಪಬೇಕು. ಯುವ ಜನತೆ ಜವಾಬ್ದಾರಿಯಿಂದ ವರ್ತಿಸಿ ಜೀವನದಲ್ಲಿ ಮುನ್ನಡೆಯಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ ಮಾಜಿ‌ ಸದಸ್ಯ ಆರ್.ಪ್ರಸನ್ನ ಕುಮಾರ್ ಮಾತನಾಡಿದರು.
625 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎನ್‌ ಎಸ್ ಯು ಐ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಜಿತ್, ಕೆ.ಚೇತನ್, ಸಿ.ಜಿ.ಮಧುಸೂದನ್, ಮುಖಂಡರಾದ ಎಸ್.ಪಿ.ದಿನೇಶ್, ಕಲಗೋಡು ರತ್ನಾಕರ್, ರಮೇಶ್ ಹೆಗ್ಡೆ, ವಿಜಯ್ ಕುಮಾರ್(ದನಿ), ಯಮುನಾ ರಂಗೇಗೌಡ, ಆದರ್ಶ್, ಪ್ರಶಾಂತ್, ಹನುಮಂತು, ಮಹಮ್ಮದ್ ಆರೀಫ್, ರಾಘವೇಂದ್ರ, ಮೊಹಮ್ಮದ್ ನಿಹಾಲ್, ಮಲ್ಲಿಕ್, ಪೂರ್ಣೇಶ್ ಮತ್ತಿತರರು ಉಪಸ್ಥಿತರಿದ್ದರು.

Exit mobile version