Site icon TUNGATARANGA

ಶಿವಮೊಗ್ಗ ಗುಡ್ಡೇಕಲ್ ಸುಭ್ರಮಣ್ಯ ಸಮ್ಮುಖದಲ್ಲಿ ಭಕ್ತರ ‘ಹರೋಹರ’ ನೋಡುವುದೇ “ಚಂದ, ಅಂದ”

ಶಿವಮೊಗ್ಗ,ಜು.23:
ನಗರದ ಗುಡ್ಡೇಕಲ್ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿಯ ಎರಡು ದಿನಗಳ ಆಡಿಕೃತ್ತಿಕೆ ಹರೋಹರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
ಬಾಲಸುಬ್ರಹ್ಮಣ್ಯ ಸ್ವಾಮಿ ಸನ್ನಿಧಿಯಲ್ಲಿ ಹರಕೆಯ ಕಾವಡಿಗಳನ್ನು ಹೊತ್ತ ಭಕ್ತರು ಭಕ್ತಿ ಪರಾಕಾಷ್ಠೆ ಮೆರೆದರು. ಬಾಲಸುಬ್ರಹ್ಮಣ್ಯ ದೇವಾಲಯದಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆ ಪುನಸ್ಕಾರ ಆರಂಭಗೊಂಡವು. ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿಯ ದರ್ಶನವನ್ನು ಭಕ್ತರು ಪಡೆದು ಪುನೀತರಾದರು.
ಕಾವಡಿಗಳನ್ನು ಹೊತ್ತು ಹರಕೆ ತೀರಿಸುವ ಹರೋಹರ ಜಾತ್ರೆಯಲ್ಲಿ ಭಕ್ತರು ತುಂಗಾನದಿಯಲ್ಲಿ ಮಿಂದು ಮಡಿಯುಟ್ಟು ಪೂಜೆಗೆ ಅಣಿಯಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹಳದಿ ವಸ್ತ್ರಗಳನ್ನು ತೊಟ್ಟ ಭಕ್ತರ ಗುಂಪು ಭುಜದ ಮೇಲೆ ಕಾವಡಿಯನ್ನು ಹೊತ್ತು ವಾದ್ಯದ ತಾಳಕ್ಕೆ ತಕ್ಕ ಹೆಜ್ಜೆ ಹಾಕಿದರು.
ಜಾತ್ರೆಯು ಕರ್ನಾಟಕದಲ್ಲಿಯೇ ಹೆಚ್ಚು ಪ್ರಸಿದ್ಧವಾಗಿದೆ. ಅಲ್ಲದೇ ಹರೋಹರ ಎಂದು ಹೇಳಿಕೊಂಡು ಬರುವ ಭಕ್ತರಿಂದಾಗಿಯೇ ಹರೋಹರ ಜಾತ್ರೆ ಎಂದೂ ಕರೆಯಲ್ಪಡುತ್ತದೆ.

ಮೊದಲ ದಿನ ದೇವಾಲಯದಲ್ಲಿ ಅಭಿಷೇಕ ಮತ್ತು ಮಂಗಳಾರತಿ ನೆರವೇರಿತು. ಹಲವು ಭಕ್ತರು ಈ ದಿನವೇ ತಮ್ಮ ಹರಕೆ ಸಲ್ಲಿಸಿದರು.


ಕಾವಡಿ ಅರ್ಪಣೆ
ಕಾವಡಿಗಳನ್ನು ಹೊತ್ತು ತಂದು ದೇವರಿಗೆ ಅರ್ಪಿಸುವುದು ಈ ಜಾತ್ರೆಯ ಮತ್ತೊಂದು ವೈಶಿಷ್ಟ್ಯವಾಗಿದ್ದು, ನಗರದಲ್ಲಿ ವಿವಿಧ ಕಡೆಗಳಿಂದ ಕಾವಡಿಗಳನ್ನು ಹೊತ್ತು ಬರುವ ಭಕ್ತರನ್ನು ನೋಡುವುದೇ ಒಂದು ಸಂಭ್ರಮವಾಗಿತ್ತು.
ಕಾರ್, ಖಾಸಗಿ ಬಸ್, ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚಾಗಿತ್ತು. ಜಾತ್ರೆಯ ಹಿನ್ನೆಲೆಯಲ್ಲಿ ಕೆಲವು ಮಾರ್ಗಗಳನ್ನು ಬದಲಾಯಿಸಲಾಗಿತ್ತು. ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ಬಂದೋಬಸ್ತ್ ಮಾಡಿದ್ದರು.

ಖಾರಮಂಡಕ್ಕಿ, ಬೆಂಡುಬತ್ತಾಸ್ ಸಡಗರ

ದೇವಸ್ಥಾನದ ಸುತ್ತಮುತ್ತ ವ್ಯಾಪಾರ ಭರ್ಜರಿಯಾಗಿ ನಡೆಯಿತು. ಬೆಂಡು- ಬತ್ತಾಸು, ಖಾರ, ಮಂಡಕ್ಕಿ, ಮಕ್ಕಳ ಆಟಿಕೆ ವಸ್ತುಗಳು, ಬಳೆ, ಹಣ್ಣು-ಕಾಯಿ ಮತ್ತಿತರ ವಸ್ತುಗಳು ರಸ್ತೆಯ ಇಕ್ಕೆಲಗಳಲ್ಲಿ ಕಾಣಿಸಿಕೊಂಡು ಜಾತ್ರೆಗೆ ಮೆರುಗು ನೀಡಿದ್ದವು.
ಶಿವಮೊಗ್ಗ ಮಾತ್ರವಲ್ಲದೇ, ರಾಜ್ಯಾದಾದ್ಯಂತ ಎಲ್ಲಾ ಕಡೆಯಿಂದ ಭಾರೀ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

Exit mobile version