ಶಿವಮೊಗ್ಗ, ಜು.21:
40% ವ್ಯವಹಾರದ ಆರೋಪ ಹೊರಿಸಿದ್ದ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಿಂದ ದೋಷ ಮುಕ್ತರಾಗಿ ಹೊರಬಂದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪನವರಿಗೆ ಬಿಜೆಪಿ ನಗರ ಘಟಕ, ಮಹಿಳಾ ಮೋರ್ಚಾ ಕಾರ್ಯಕರ್ತರು ಇಂದು ಭಗವಂತನ ಪೂಜೆ ಹಾಗೂ ಈಶ್ವರಪ್ಪರಿಗೆ ಅಭಿನಂದಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಇಲ್ಲಿ ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ದೇವರ ಸನ್ನಿಧಿಯಲ್ಲಿ ಭಜನೆ, ಪೂಜೆ ನೆರವೇರಿಸಿ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಈಶ್ವರಪ್ಪರನ್ನ ಅಭಿನಂದಿಸಲಾಯಿತು.
ಸತ್ಯಕ್ಕೆ ಸಂದ ಜಯವೆಂಬ ಪದಗಳ ಬಳಕೆ ಮೂಲಕ ಅಭಿನಂದನೆ ಕಾರ್ಯಕ್ರಮ ಜರುಗಿತು. ಬಿಜೆಪಿ ಕಾರ್ಯಕರ್ತರು ಈಶ್ವರಪ್ಪ ಅವರ ಪರ ಘೋಷಣೆ ಕೂಗಿ ಮತ್ತೆ ಮಂತ್ರಿಯನ್ನಾಗಿ ಮಾಡಬೇಕೆಂದು ಒತ್ತಾಯಿಸಿದರು.
ಬಿಜೆಪಿ ಹಿರಿಯ ಮುಖಂಡ, ಮಾಜಿ ಶಾಸಕ ಎಂ.ಬಿ.ಭಾನು ಪ್ರಕಾಶ್ ಮಾತನಾಡಿ, ಬಿಜೆಪಿಯನ್ನು ಗಾಂಧಿಯನ್ನ ಕೊಂದ ಪಕ್ಷವೆಂದೇ ಕಾಂಗ್ರೆಸ್ ಬಿಂಬಿಸಿಕೊಂಡು ಬಂದಿದೆ. ಗಾಂಧಿನೇ ಮತ್ತೆ ಹುಟ್ಟಿಬಂದು ನನ್ನನ್ನ ಕೊಂದವರು ಬಿಜೆಪಿಯವರು ಅಲ್ಲವೆಂದು ಹೇಳಿದರೂ ಕಾಂಗ್ರೆಸ್ ಆ ವಿಷಯ ಹೇಳುವುದನ್ನ ಬಿಡೊಲ್ಲ, ಅದು ಅವರ ಚಾಳಿ ಎಂದು ಆರೋಪಿಸಿದರು.
ಸಾಗರದ ಶಾಸಕ, ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಈಶ್ವರಪ್ಪ ಅವರ ವಿರುದ್ದ ಆರೋಪ ಬರುತ್ತಿದ್ದಂತೆ ಬೇರೆ ರೀತಿಯ ವಿಶ್ಲೇಷಣೆ ನಡೆಯಿತು. ಆದರೆ ದೇವರು ಅದನ್ನ ಎದುರಿಸುವ ಶಕ್ತಿಯನ್ನು ಅವರಿಗೆ ನೀಡಿದ್ದಾನೆ ಎಂದರು.
ಆರೋಪ ಬರುತ್ತಿದ್ದಂತೆ ಪಕ್ಷಕ್ಕೆ ಮುಜುಗರ ಉಂಟು ಮಾಡಬಾರದೆಂದು ರಾಜಿನಾಮೆ ನೀಡಿದ್ದು ಅವರ ಹಿರಿತನವನ್ನು ತೋರಿಸುತ್ತದೆ. ಆಗ ಅವರಿಗೆ ಕಾರ್ಯಕರ್ತರು, ಅಭಿಮಾನಿಗಳು, ಸಾಧುಸಂತರು, ಧೈರ್ಯ ತುಂಬಿದ್ದರು. ಆ ಶಕ್ತಿಯಿಂದ ಈಶ್ವರಪ್ಪ ಗೆದ್ದು ಬಂದಿದ್ದಾರೆ ಎಂದರು.
ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಮಾತನಾಡಿ ನನಗೆ ಸಂಬಂಧಿಸದ ವಿಚಾರದಲ್ಲಿ ಆರೋಪ ಬಂದಾಗ ಬೇಸರವಾಗಿದ್ದು ನಿಜ. ಆಗ ನಿಮ್ನದು ತಪ್ಪಿಲ್ಲವೆಂದು ಎಲ್ಲರೂ ಹೇಳ್ತಿದ್ದು ನೆನಪಾಗ್ತಿದೆ. ಅದೇ ವೇಳೆ ಕೆಲ ಕಾಂಗ್ರೆಸ್ ಮಿತ್ರರು ನನಗೆ ದೋಷ ಮುಕ್ತರಾಗಿ ಹೊರಬರುತ್ತೀರಾ ಎಂದು ಆತ್ಮವಿಶ್ವಾಸ ತುಂಬಿದ್ದರು ಎಂದರು.
ಚೌಡೇಶ್ವರಿ ದೇವಿ ಆಶೀರ್ವಾದ ನನ್ನ ಮೇಲಿದೆ. ಹಾಗಾಗಿ ದೋಷಮುಕ್ತನಾಗಿ ಹೊರಬಂದಿರುವೆ ಎಂದರು.
ಈ ವೇಳೆ ಬಿಜೆಪಿ ಮಹಿಳಾ ಮೋರ್ಚಾದಿಂದ ಕೋಟೆ ಆಂಜನೇಯ ದೇವಸ್ಥಾನದಿಂದ ರಾಮಣ್ಣಶ್ರೇಷ್ಠಿಪಾರ್ಕ್, ಶಿವಪ್ಪ ನಾಯಕನ ವೃತ್ತ, ಗೋಪಿ ವೃತ್ತ, ಬಾಲರಾಜ್ ಅರಸ್ ರಸ್ತೆ ಮೂಲಕ ಈಶ್ವರಪ್ಪನವರ ಮನೆಗೆ ಬೈಕ್ Rally ನಡೆಯಿತು.
ಈ ಸಂದರ್ಭದಲ್ಲಿ ಶಾಸಕ ಡಿ.ಎಸ್. ಅರುಣ್, ಕೆ.ಈ. ಕಾಂತೇಶ್, ಮೇಯರ್ ಸುನೀತಾ ಅಣ್ಣಪ್ಪ, ಸೂಡಾ ಅಧ್ಯಕ್ಷ ನಾಗರಾಜ್, ಜ್ಯೋತಿ ಪ್ರಕಾಶ್, ಎಸ್. ದತ್ತಾತ್ರಿ, ಬಳ್ಳೇಕೆರೆ ಸಂತೋಷ್ ಮೊದಲಾದವರು ಉಪಸ್ಥಿತರಿದ್ದರು.