ಶಿವಮೊಗ್ಗ,
ಭದ್ರಾವತಿ ತಾಲೂಕು ಶಂಕರಘಟ್ಟದ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರು ಸ್ಥಳೀಯರಲ್ಲಿ ಗೊಂದಲ ಮತ್ತು ಆತಂಕ ಮೂಡಿಸಿದೆ. ಆದರೆ ವೈರಲ್ ವಿಡಿಯೋದ ಹಿಂದಿನ ಅಸಲಿ ಕಥೆ ಬೇರೆ ಇದೆ.
ಆರಣ್ಯ ಪ್ರದೇಶದಿಂದ ಹೊರ ಬರುವ ಹುಲಿಯೊಂದು ರಸ್ತೆ ದಾಟುತ್ತದೆ. ರಸ್ತೆಯ ಬಲ ಭಾಗದಿಂದ ಎಡ ಭಾಗಕ್ಕೆ ನಡೆದು ಹೋಗುತ್ತದೆ. ಹುಲಿ ರಸ್ತೆ ದಾಟುತ್ತಿದ್ದರಿಂದ ಸವಾರರು ಸ್ವಲ್ಪ ದೂರದಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡಿದ್ದರು. ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ಈ ವಿಡಿಯೋ ಚಿತ್ರೀಕರಣ ಮಾಡಿದ್ದರು.
ಹುಲಿ ರಸ್ತೆ ದಾಟುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಂಕರಘಟ್ಟ ರಸ್ತೆಯಲ್ಲಿ ಹುಲಿ ಎಂದು ಹಬ್ಬಿಸಲಾಗಿದೆ. ವಿಡಿಯೋ ಎಲ್ಲೆಲ್ಲೂ ವೈರಲ್ ಆಗಿದ್ದು, ಚರ್ಚೆಗೆ ಕಾರಣವಾಗಿತ್ತು. ಕೆಲವು ಮಾಧ್ಯಮಗಳಲ್ಲಿಯೂ ವಿಡಿಯೋ ಪ್ರಸಾರ ಮಾಡಿ, ಶಂಕರಘಟ್ಟದಲ್ಲಿ ಹುಲಿ ಎಂದು ಸುದ್ದಿ ಪ್ರಕಟಿಸಲಾಯಿತು.
ವಿಡಿಯೋದಲ್ಲಿ ಶಂಕರಘಟ್ಟ ರಸ್ತೆಯನ್ನೇ ಹೋಲುವ ಹೈವೇ ರಸ್ತೆಯಿದೆ.
ಆದರೆ ಅಸಲಿಗೆ ಈ ವಿಡಿಯೋ ಶಂಕರಘಟ್ಟದ್ದಲ್ಲ. ಮಹಾರಾಷ್ಟ್ರದ ತಡೋಬ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯ ಚಂದ್ರಾಪುರದ್ದು. ಅಲ್ಲಿ ಹುಲಿಯೊಂದು ರಸ್ತೆ ದಾಟುತ್ತಿದ್ದ ವಿಡಿಯೋ ಚಿತ್ರೀಕರಣ ಮಾಡಿದ್ದು, ವೈರಲ್ ಆಗಿದೆ.
ತಡೋಬ ಸಂರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿ ಹುಲಿಗಳು ರಸ್ತೆಯಲ್ಲಿ ಕಾಣಿಸಿಕೊಳ್ಳುವುದು, ವಾಹನ ಸವಾರರ ಮೇಲೆ ದಾಳಿ ಮಾಡುವುದು ಸಾಮಾನ್ಯ. ಇನ್ನು, ವೈರಲ್ ವಿಡಿಯೋ ಕುರಿತು ಒಂಬತ್ತು ದಿನಗಳ ಹಿಂದೆ ರೈಸಿಂಗ್ ಒಡಿಶಾ ವಾಹಿನಿ ಈ ವಿಡಿಯೋವನ್ನು ಪ್ರಸಾರ ಮಾಡಿದೆ.