Site icon TUNGATARANGA

shimoga / ಮಳೆಯ ನಡುವೆಯೇ ರಸ್ತೆ ಮಧ್ಯೆ ಕುರ್ಚಿ ಹಾಕಿ ಕುಳಿತು ಪಾಲಿಕೆ ವಿರುಧ್ದ ಪ್ರತಿಭಟನೆ ಮಾಡಿದ್ದು ಯಾಕೆ ಗೊತ್ತಾ ?

ಶಿವಮೊಗ್ಗ,
ವಿನೋಬನಗರ ಮೊದಲ ಹಂತದ ಆರನೇ ಕ್ರಾಸ್‌ನ ನಿವಾಸಿಗಳು ಭಾನುವಾರ ಮಳೆಯ ನಡುವೆಯೇ ರಸ್ತೆ ಮಧ್ಯೆ ಕುರ್ಚಿ ಹಾಕಿ ಕುಳಿತು ಪ್ರತಿಭಟನೆ ನಡೆಸಿದರು. ಹೀಗೆ ವಿಶಿಷ್ಟ ರೀತಿಯ ಪ್ರತಿರೋಧದ ಮೂಲಕ ಮಹಾನಗರ ಪಾಲಿಕೆಗೆ ಬಿಸಿಮುಟ್ಟಿಸಿದರು.


ರಸ್ತೆ ದುರಸ್ತಿ ಮಾಡುವಂತೆ ಹಲವು ಬಾರಿ ಮನವಿ ಮಾಡಿದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಸೊಪ್ಪು ಹಾಕುತ್ತಿಲ್ಲ ಎಂಬುದು ರಜೆಯ ದಿನವೂ ಅಲ್ಲಿನ ನಿವಾಸಿಗಳು ಬೀದಿಗಿಳಿಯುವಂತೆ ಮಾಡಿತ್ತು.


’ರಸ್ತೆ ತುಂಬಾ ಗುಂಡಿಗಳದ್ದೇ ಕಾರುಬಾರು. ಸಾಲದ್ದಕ್ಕೆ ಈಗ ಮಳೆಗಾಲ ನೀರು ನಿಲ್ಲುತ್ತಿದೆ. ಸಂಚಾರ ದುಸ್ತರವಾಗಿದೆ. ಅಪಘಾತ ನಿತ್ಯದ ಮಾತಾಗಿದೆ. ವಿನೋಬ ನಗರದ ಐದು ಹಾಗೂ ಆರನೇ ಕ್ರಾಸ್‌ನಲ್ಲಿ ರಸ್ತೆ ದುರಸ್ತಿಗೆ ?೨೦ ಲಕ್ಷ ಬಿಡುಗಡೆ ಆಗಿದೆ. ಆದರೂ ಕಾಮಗಾರಿ ಆರಂಭಿಸುತ್ತಿಲ್ಲ. ಇವತ್ತು, ನಾಳೆ ಎಂದು ದಿನ ದೂಡುತ್ತಿದ್ದಾರೆ’ ಎಂದು ಸ್ಥಳೀಯರಾದ ಶರತ್ ಆಕ್ರೋಶ ವ್ಯಕ್ತಪಡಿಸಿದರು.


’ಮಳೆ ನೀರು ನಿಲ್ಲುತ್ತಿದೆ. ಇನ್ನು ಸಹಿಸಲು ಆಗೋಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬರಬೇಕು. ಸಂಬಂಧಪಟ್ಟ ಮಹಾನಗರ ಪಾಲಿಕೆ ಎಂಜಿನಿಯರ್ ಬಂದು ಮನವಿ ಸ್ವೀಕರಿಸಬೇಕು. ಈ ಹಿಂದೆ ಗುಂಡಿಗಳನ್ನು ಮುಚ್ಚಿದ್ದರು. ಅವು ಮತ್ತೆ ಕಿತ್ತು ಹೋಗಿವೆ. ಗುಂಡಿಗಳನ್ನು ಮುಚ್ಚ ಬೇಕು’ ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.


ಪ್ರತಿಭಟನೆಯಲ್ಲಿ ಶರತ್, ರವೀಶ, ಶಿವಮೂರ್ತಿ, ರಾಮಣ್ಣ, ದಿನೇಶ್, ಪುನೀತ್ ಪಾಲ್ಗೊಂಡಿದ್ದರು.

Exit mobile version