Site icon TUNGATARANGA

ಶಿವಮೊಗ್ಗ ಜಿಲ್ಲೆಯ ಅಭಿವೃದ್ದಿ ಬಂಪರ್: ಸಂಸದ ರಾಘವೇಂದ್ರ

ಶಿವಮೊಗ್ಗ, ಆ.26:
ಶಿವಮೊಗ್ಗ ಜಿಲ್ಲೆಯ ಅಭಿವೃದ್ದಿ ಹರಿಹಾರ ಎಂದೇ ಕರೆಸಿಕೊಳ್ಳುವ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪ್ರಯತ್ನದ ಫಲವಾಗಿ ಅವರು ಜಿಲ್ಲೆಯ ಅಭಿವೃದ್ಧಿಗೆ ಅಸ್ತು ಎಂದು ಮುಂದಾಗಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆ ಇನ್ನಷ್ಟು ಅಭಿವೃದ್ದಿ ಕಾಣುತ್ತಿದೆ ಎಂಬುದನ್ನು ಒಪ್ಪಿಕೊಳ್ಳಲೇ ಬೇಕು. ಇದರ ನಡುವೆ ಸಿಎಂ ಪುತ್ರ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರ ಪ್ರಯತ್ನದ ಫಲವಾಗಿ ಹತ್ತು ಹಲವು ಮಹತ್ತರ ಯೋಜನೆಗಳಿಗೆ ಅನುಮತಿ ದೊರೆಯುವ ಜೊತೆಗೆ ಶಿವಮೊಗ್ಗ ಜಿಲ್ಲೆ ಅಭಿವೃದ್ದಿಯ ಅಗ್ರ ಪಂಕ್ತಿಯಲ್ಲಿ ಗುರುತಿಸಿಕೊಳ್ಳಲು ಕಾರಣವಾಗುತ್ತಿದೆ.
ಇದಕ್ಕೆ ಪೂರಕವಾಗಿ ಇಂದು ಮದ್ಯಾಹ್ನ ಸಂಸದ ಬಿ.ವೈ.ರಾಘವೇಂದ್ರ ಅವರು ಬರುವ ದಿನಗಳಲ್ಲಿ ನಡೆಸಬಹುದಾದ ಕಾಮಗಾರಿ ವಿವರ ಹಾಗೂ ಅದರ ಅಂದಾಜಿನ ಚಿತ್ರಣ ಹಾಗೂ ಖರ್ಚುವೆಚ್ಚ ಆಗುವ ಅನುಕೂಲತೆಗಳ ಸಮಗ್ರ ಮಾಹಿತಿಯನ್ನು ಮಾದ್ಯಮಗಳ ಮುಂದೆ ನೀಡಿದರು.
ಸಂಸದರ ವಿವರಣೆ: ರಸ್ತೆ, ರೈಲ್ವೆ, ಪ್ರವಾಸೊದ್ಯಮ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಈಗಾಗಲೇ ಅನುದಾನ ಒದಗಿಸುವ ಮೂಲಕ ಯೋಜನೆ ರೂಪಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು
ರೈಲ್ವೆ ಮೇಲ್ಸೆತುವೆ, ರಾಷ್ಟ್ರೀಯ ಹೆದ್ದಾರಿ, ಪ್ರವಾಸಿ ತಾಣಗಳ ಅಭಿವೃದ್ದಿ, ಕಾರ್ಖಾನೆಗಳ ಅಭಿವೃದ್ದಿ ಸೇರಿದಂತೆ ಹಲವು ಕಾಮಗಾರಿಗಳಿಗೆ ಟೆಂಡರ್ ನೀಡಲಾಗಿದೆ. ರಾಜ್ಯ ಮತ್ತು ಕೇಂದ್ರಗಳ ಸರ್ಕಾರಗಳ ನೆರವಿನಿಂದ ಇನ್ನೆತರ ವರ್ಷಗಳಲ್ಲಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದರು.
ರೈಲ್ವೆ ಸೇತುವೆಗಳು:
ಶಿವಮೊಗ್ಗ ನಗರದ ಉಷಾ ನರ್ಸಿಂಗ್ ಹೋಂ ಬಳಿ ಇರುವ ಸವಳಂಗ ರಸ್ತೆಯ ರೈಲ್ವೆ ಮೇಲ್ಸ್ಸೆತುವೆಗೆ ೬೦.೭೬ ಕೋಟಿ, ಭದ್ರಾವತಿಯ ಕಡದಕಟ್ಟೆಯ ಮೇಲ್ಸೆತುವೆಗೆ ೨೫.೯೨ ಕೋಟಿ, ಕಾಶೀಪುರದ ಮೇಲ್ಸೆತುವೆಗೆ ೨೯.೬೩ ಕೋಟಿ, ವಿದ್ಯಾನಗರದ ರೈಲ್ವೆ ನಿಲ್ದಾಣ ಹತ್ತಿರವಿರುವ ಮೇಲ್ಸೆತುವೆಗೆ ೪೩.೮೯ ಕೋಟಿ ಹಣ ಈಗಾಗಲೇ ಮಂಜೂರು ಆಗಿದ್ದು, ರಾಜ್ಯ ಸರ್ಕಾರ ಕೂಡ ತನ್ನ ಪಾಲಿನ ಹಣವನ್ನು ಬಿಡುಗಡೆ ಮಾಡಿದೆ. ಈ ಎಲ್ಲ ಕಾಮಗಾರಿಗಳು ರೈಲ್ವೆ ಇಲಾಖೆ ಮತ್ತು ರಾಜ್ಯ ಸರ್ಕಾರದ ನೆರವಿನಿಂದ ನಿರ್ಮಾಣಗೊಳ್ಳುತ್ತಿದ್ದು, ಶೀಘ್ರದಲ್ಲಿಯೇ ಟೆಂಡರ್ ಕರೆಯಲಾಗುವುದು ಎಂದರು.
ಶಿವಮೊಗ್ಗ, ಶಿಕಾರಿಪುರ, ರಾಣೆಬೆನ್ನೂರು ರೈಲ್ವೆ ಮಾರ್ಗದ ಸರ್ವೆ ಕಾರ್ಯ ಮುಗಿದಿದೆ. ೩ ಫೇಸ್‌ನಲ್ಲಿ ಇದನ್ನ ನಿರ್ಮಿಸಲಾಗುವುದು. ಈಗಾಗಲೇ ರೈತರಿಂದ ಭೂಮಿಯನ್ನು ವಶಪಡಿಸಿಕೊಳ್ಳುವ ಕ್ರಿಯೆ ನಡೆಯುತ್ತಿದ್ದು, ಪರಿಹಾರ ಕೂಡ ಬೇಗನೇ ನೀಡಲಾಗುವುದು ಎಂದ ಅವರು, ಶಿವಮೊಗ್ಗದಲ್ಲಿ ಕೋಚಿಂಗ್ ಸೆಂಟರ್ ಆರಂಭಿಸಲಾಗುವುದು. ಇದಕ್ಕಾಗಿ ೭೫ ಕೋಟಿ ಕೇಂದ್ರದಿಂದ ಮೀಸಲಿಡಲಾಗಿದೆ. ನಿವೇಶನವೂ ಸಿಕ್ಕಿದೆ. ಅಕಾರಿಗಳೊಡನೆ ಚರ್ಚಿಸಿ ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದರು.
ಪ್ರವಾಸೋದ್ಯಮ:
ಜಿಲ್ಲೆಯ ಜೋಗ ಜಲಪಾತ ಸೇರಿದಂತೆ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ದಿ ಪಡಿಸಲಾಗುವುದು. ಸುಮಾರು ೧೫೦ ಕೋಟಿ ರೂ.ಗಳ ವೆಚ್ಚದಲ್ಲಿ ಜೋಗದ ಸಮಗ್ರ ಅಭಿವೃದ್ದಿ ಮಾಡಲಾಗುತ್ತದೆ. ಹಾಗೆಯೇ ಶರಣೆ ಅಕ್ಕಮಹಾದೇವಿ ಜನ್ಮಸ್ಥಳ ಉಡತಡಿ ಕ್ಷೇತ್ರವನ್ನು ದೆಹಲಿಯ ಅಕ್ಷರಧಾಮ ಮಾದರಿಯಲ್ಲಿ ಸುಮಾರು ೨೫ ಕೋಟಿ ವೆಚ್ಚದಲ್ಲಿ ಅಭಿವೃದ್ದಿಪಡಿಸಲಾಗುವುದು. ಹಾಗೆಯೇ ಸಕ್ರೆಬೈಲು ಆನೆ ಬಿಡಾರದ ಅಭಿವೃದ್ದಿ ಜೊತೆಗೆ ಅಲ್ಲಿ ಜೈವಿಕ ಉದ್ಯಾನವನ ನಿರ್ಮಾಣ ಮಾಡಲಾಗುವುದು. ಸುಮಾರು ೧೫ ಕೋಟಿ ರೂ.ಗಳ ವೆಚ್ಚದಲ್ಲಿ ಇಲ್ಲಿ ಅಭಿವೃದ್ದಿಪಡಿಸಲಾಗುತ್ತದೆ. ಗಾಜನೂರು ಡ್ಯಾಂನಲ್ಲಿ ಬೋಟಿಂಗ್ ಸೇರಿದಂತೆ ಡ್ಯಾಂ ಮಧ್ಯದಲ್ಲಿರುವ ದ್ವೀಪವನ್ನು ಅಭಿವೃದ್ದಿಪಡಿಸಲಾಗುವುದು. ಸುಮಾರು ೪೦ ಎಕರೆ ಪ್ರದೇಶದಲ್ಲಿ ರಾತ್ರಿ ಸಫಾರಿಗೆ ಯೋಜನೆ ರೂಪಿಸಲಾಗಿದೆ ಎಂದರು.
ವರ್ತುಲ ರಸ್ತೆ:
ನಗರಕ್ಕೆ ಅಗತ್ಯವಿರುವ ೩೪ ಕಿ.ಮೀ. ಉದ್ದದ ವರ್ತುಲ ರಸ್ತೆಗೆ ಕ್ರಮ ಕೈಗೊಳ್ಳಲಾಗುವುದು. ಸುಮಾರು ಮೂರ್ನಾಲ್ಕು ರಾಷ್ಟ್ರೀಯ ಹೆದ್ದಾರಿ ಜೋಡಿಸುವ ರಸ್ತೆ ಇದಾಗುತ್ತದೆ. ಎಂ.ಆರ್.ಎಸ್.ನಿಂದ ರಾಂಪುರದವರೆಗೆ ೧೫ ಕಿ.ಮೀ., ಎಂ.ಆರ್.ಎಸ್.ನಿಂದ ೪ ಕಿ.ಮೀ., ಹೊರ ವರ್ತುಲ ರಸ್ತೆ, ಚಿತ್ರದುರ್ಗ-ಶಿವಮೊಗ್ಗ ಬಾಕಿ ಉಳಿದ ರಸ್ತೆ, ಶ್ರೀರಾಂಪುರದಿಂದ ಕೋಟೆ ಗಂಗೂರು ರಸ್ತೆ, ಗೋಂದಿಚಟ್ನಳ್ಳಿಯಿಂದ ಹೊಳೆಹೊನ್ನೂರು ರಸ್ತೆ ಹೀಗೆ ಸುಮಾರು ೫೩೦ ಕೋಟಿ ರೂ.ಗಳ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ರಸ್ತೆUಳ ಅಭಿವೃದ್ದಿಪಡಿಸಲಾಗುವುದು ಎಂದರು.
ವರ್ತುಲ ರಸ್ತೆಯ ಅಂದಾಜು ವೆಚ್ಚ ೫೩೦ ಕೋಟಿ ರೂ. ೧೬೫ ಎಕರೆ ಭೂಸ್ವಾನ ಪಡಿಸಿಕೊಳ್ಳಲಾಗುವುದು. ಸುಮಾರು ೨೦೦ ಕೋಟಿ ರೂ. ಪರಿಹಾರ ನೀಡಲಾಗುವುದು. ಕಿರು ಸೇತುವೆ, ಮೋರಿಗಳು, ಬಸ್ ನಿಲ್ದಾಣಗಳು ಸೇರಿದಂತೆ ಎಲ್ಲ ರಸ್ತೆಗಳನ್ನು ನಿರ್ಮಿಸಲಾಗುವುದು. ಚಿತ್ರದುರ್ಗ-ಶಿವಮೊಗ್ಗ ರಾಷ್ಟ್ರಿಯ ಹೆದ್ದಾರಿಯ ಉಳಿದ ರಸ್ತೆ ನಿರ್ಮಾಣ ಕಾರ್ಯವನ್ನು ಶೀಘ್ರ ಮುಗಿಸಲಾಗುವುದು ಮತ್ತು ವಿದ್ಯಾನಗರದ ಬಳಿ ರಾಷ್ಟ್ರಿಯ ಹೆದ್ದಾಗಿ ೧೩ರಲ್ಲಿ ಸುಮಾರು ೪೪ ಕೋಟಿ ರೂ.ಗಳ ವೆಚ್ಚದಲ್ಲಿ ಮೇಲ್ಸೆತುವೆ ನಿರ್ಮಾಣ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಎಂಪಿಎಂ ಪುನರಾರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಖಾಸಗಿಯವರಿಗೆ ನಿರ್ವಹಣೆ ವಹಿಸಿ ಎಂಪಿಎಂ ಆಡಳಿತ ಮಂಡಳಿಯಲ್ಲಿಯೇ ನೀಲಗಿರಿ ಪ್ಲಾಂಟೇಷನ್ ಉಳಿಸಿಕೊಳ್ಳಲಾಗುವುದು. ಸುಮಾರು ೧ ಸಾವಿರ ಜನರಿಗೆ ಖಾಸಗಿ ಸಹಭಾಗಿತ್ವದಲ್ಲಿ ಉದ್ಯೋಗ ಕಲ್ಪಿಸಲಾಗುವುದು ಎಂದರು.

ಭದ್ರೆಗೆ ಸೇತುವೆ
ಹೊಳೆಹೊನ್ನೂರು ಭಾಗದ ಜನರ ಬಹುದಿನದ ಬೇಡಿಕೆಯಾದ ಶಿವಮೊಗ್ಗ ಹೊಳೆಹೊನ್ನೂರು ಮಾರ್ಗದ ಭದ್ರಾ ನದಿಗೆ ಸೇತುವೆ ನಿರ್ಮಿಸುವ ಅತ್ಯಂತ ಮಹತ್ತರ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ ಎಂದು ಸಂಸದ ಬಿವೈ ರಾಘವೇಂದ್ರ ತಿಳಿಸಿದ್ದಾರೆ. ಇಲ್ಲಿಯವರೆಗೆ ಕೇವಲ ಏಕಮುಖ ಸಂಚಾರ ವ್ಯವಸ್ಥೆ ಹೊಂದಿದ್ದ ಭದ್ರಾ ಸೇತುವೆಯಿಂದ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಹಿಂದಿನ ಎಲ್ಲರ ಪ್ರಯತ್ನಗಳ ನಡುವೆ ಸಂಸದ ಬಿವೈ ರಾಘವೇಂದ್ರ ಅವರು ತಮ್ಮ ತಂದೆ ಮುಖ್ಯಮಂತ್ರಿ ಬಿ ವೈ ಬಿಎಸ್ ಯಡಿಯೂರಪ್ಪ ಅವರ ಬಳಿ ಸಮಸ್ಸೆಯನ್ನು ಮನದಟ್ಟು ಮಾಡುವಲ್ಲಿ ಯಶಸ್ವಿಯಾಗಿದ್ದರು. ಶಿವಮೊಗ್ಗ ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿಯ ಜೊತೆಗೆ ನದಿಗೆ ಭದ್ರಾನದಿಗೆ ಸೇತುವೆ ಮಹತ್ತರ ಯೋಜನೆಗೆ ಸಾರ್ವಜನಿಕರು ಅಭಿನಂದಿಸಿದ್ದಾರೆ.


ಪತ್ರಿಕಾಗೋಷ್ಠಿಯಲ್ಲಿ ಮೇಯರ್ ಸುವರ್ಣ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ಎಸ್.ದತ್ತಾತ್ರಿ, ಡಿ.ಎಸ್.ಅರುಣ್, ಎಸ್.ಎನ್.ಚನ್ನಬಸಪ್ಪ, ಗುರುಮೂರ್ತಿ, ಎಸ್.ಜ್ಞಾನೇಶ್ವರ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಲೋಕೋಪಯೋಗಿ, ರೈಲ್ವೆ, ರಾಷ್ಟ್ರೀಯ ಹೆದ್ದಾರಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version